ಲೋಕದರ್ಶನ ವರದಿ
ಕೊಪ್ಪಳ: ನಮ್ಮ ಕುಟುಂಬಗಳ ಪರಿಪೂರ್ಣತೆ ಮತ್ತು ರಕ್ಷಣೆ ಮನೆಯ ಹೆಣ್ಣುಮಗಳ ಕೈಯಲ್ಲಿದೆ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತೆ ಜ್ಯೋತಿ ಎಂ. ಗೊಂಡಬಾಳ ಅಭಿಪ್ರಾಯಪಟ್ಟರು.
ಅವರು ನಗರದ ತೋಟದಬಾವಿ ನೃಪತುಂಗ ಶಾಲೆಯ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಮಹಿಳೆಯರಿಗೆ ನಡೆದ "ಕೌಟುಂಬಿಕ ಸಾಮರಸ್ಯ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ, ಉಪನ್ಯಾಸ ನೀಡಿ ಮಾತನಾಡಿದರು.
ಮಹಿಳೆ ಕೇವಲ ಮನೆಯ ಕೆಲಸ, ಊಟ, ಬಟ್ಟೆ, ಬಿಟ್ಟರೆ ಬೇರೆ ಏನು ಇಲ್ಲ ಎಂದು ಭಾವಿಸಿದ್ದರೆ ಅದು ತುಂಬಾ ತಪ್ಪು, ಮನೆಯ ಯಜಮಾನನ್ನು ಸೇರಿದಂತೆ ಉಳಿದವರೆಲ್ಲರ ಜೊತೆ ಕುಶಲೋಪರಿ ಮಾಡುವದು ಒಂದು ಕೌಶಲ್ಯ. ಕೇವಲ ಟಿವಿಯ ಧಾರವಾಹಿಗಳಲ್ಲಿ ಮುಳುಗಿರುವ ಮನೆಯ ಹೆಣ್ಣುಮಗಳು ಕುಟುಂಬದ ಸಾಮರಸ್ಯ ಕೆಡಲು ಕಾರಣೀಕರ್ತರಾಗುತ್ತಿರುವದು ಖೇದದ ಸಂಗತಿ. ಸಾಧ್ಯವಾದಷ್ಟು ಮಟ್ಟಿಗೆ ಟಿವಿಯನ್ನು ಅಗತ್ಯಕ್ಕೆ ಮಾತ್ರ ಬಳಸಬೇಕು, ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂದರು.
ಕುಟುಂಬದಲ್ಲಿ ಅತ್ತೆ ಸೊಸೆ, ತಾಯಿ ಮಗಳಾದಾಗ ಮಾತ್ರ ಕುಟುಂಬದ ಶ್ರೇಯೋಭಿಲಾಷೆ, ಇಲ್ಲವಾದರೆ ಮನೆಯ ಪ್ರಗತಿ ಸಾಧ್ಯವಿಲ್ಲ. ಹೆಣ್ಣುಮಕ್ಕಳು ಇತರ ಕುಟುಂಬಗಳ ಬಗ್ಗೆ ಆಡಿಕೊಳ್ಳುವದನ್ನು ಬಿಟ್ಟು, ತಮ್ಮ ಸಮಯವನ್ನು ತಿಳುವಳಿಕೆ ಕಡೆಗೆ, ಕುಟುಂಬದ ಸರಿಯಾದ ನಿರ್ವಹಣೆ ಕಡೆಗೆ, ಮಕ್ಕಳ ಭವಿಷ್ಯದ ಕಡೆಗೆ ಜೊತೆಗೆ ತನ್ನದು ಎಲ್ಲವೂ ಮುಗಿಯಿತು ಎಂದು ಭಾವಿಸದೆ ಪ್ರತಿಯೊಂದರಲ್ಲೂ ಆಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಬಸಮ್ಮ ದಿವಟರ್, ಒಕ್ಕೂಟದ ಅಧ್ಯಕ್ಷೆ ವೈಜಯಂತಿ, ಸೇವಾ ಪ್ರತಿನಿಧಿ ರೂಪಾ, ಒಕ್ಕೂಟದ ಮಾಜಿ ಅಧ್ಯಕ್ಷೆ ಜಯಶ್ರೀ, ಒಕ್ಕೂಟದ ಉಪಾಧ್ಯಕ್ಷೆ ಸೀತಾ, ಜ್ಞಾನ ವಿಕಾಸ ಯೋಜನೆಯ ಸಮನ್ವಯಾಧಿಕಾರಿ ರಮ್ಯಾ ಇತರರು ಇದ್ದರು.