ಬೆಂಗಳೂರು, ಮಾ, ಕೊರೋನಾ ವೈರಸ್ ಸೋಂಕಿನಿಂದ ಕಲಬುರಗಿಯ ವೃದ್ಧ ಮೃತಪಟ್ಟಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಶಾಲೆಗಳಿಗೆ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ. ಜ್ವರದ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಕಲಬುರಗಿಯ 76 ವರ್ಷದ ಮೊಹಮ್ಮದ್ ಷರೀಫ್ ಎಂಬ ವ್ಯಕ್ತಿ ಎರಡು ದಿನಗಳ ಹಿಂದೆ ಮೃತಪಟ್ಟಿದ್ದರು. ಇವರ ರಕ್ತದ ಮಾದರಿಗಳನ್ನು ಪರಿಶೀಲಿಸಿದಾಗ ಕೊರೋನಾ ಸೋಂಕಿನಿಂದ ಸಾವನ್ನಪ್ಪಿರುವುದು ದೃಢಪಟ್ಟಿತ್ತು. ಸೌದಿ ಅರೆಬಿಯಾದಿಂದ ಮರಳಿದ್ದ ಈ ವ್ಯಕ್ತಿ ಮೊದಲು ತೆಲಂಗಾಣದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರನ್ನು ಕಲಬುರಗಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತದ ದೇಹವನ್ನು ಸರ್ಕಾರಿ ನಿಯಮಾವಳಿಯಂತೆ ಸಂಪೂರ್ಣ ಸೋಂಕು ಹರಡದಂತೆ ಔಷಧ ಸಿಂಪಡಿಸಿ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಮೃತರ ಕುಟುಂಬ ಸದಸ್ಯರನ್ನು ಕೂಡ ತಪಾಸಣೆಗೊಳಪಡಿಸಲಾಗುತ್ತಿದೆ.