ಇನ್ನು ಬೆಂಗಳೂರಿನಲ್ಲಿಲ್ಲ ‘ಮಲೆಗಳಲ್ಲಿ ಮದುಮಗಳು’ ; ಫೆ. 29ರಂದು ಕಟ್ಟಕಡೆಯ ಪ್ರದರ್ಶನ!

ಬೆಂಗಳೂರು, ಫೆ 15 :   ಬೆಂಗಳೂರು ನಗರದ ಕಲಾಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ರಾಷ್ಟ್ರಕವಿ ಕುವೆಂಪು ಅವರ ಕಾದಂಬರಿ ಆಧಾರಿತ ‘ಮಲೆಗಳಲ್ಲಿ ಮದುಮಗಳು’ ನಾಟಕದ ಅಹೋರಾತ್ರಿ ಪ್ರದರ್ಶನಕ್ಕೆ ನೀವಿನ್ನು ಸಾಕ್ಷಿಯಾಗಿಲ್ಲವೇ!  

ಹಾಗಿದ್ದಲ್ಲಿ, ನಿಮ್ಮ ಬಳಿಯಿರುವುದು ಕೇವಲ  ಬೆರಳಣಿಕೆಯಷ್ಟು ಅವಕಾಶ ಮಾತ್ರ. ಕಾರಣ, ಮುಂಬರುವ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಈ ನಾಟಕ ಪ್ರದರ್ಶನ ನಡೆಯುವುದಿಲ್ಲ! ಇದನ್ನು ಖುದ್ದು ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ನಿರ್ದೇಶಕ ಸಿ. ಬಸವಲಿಂಗಯ್ಯ ಅವರು ದೃಢೀಕರಿಸಿದ್ದಾರೆ. ಫೆ.29ರಂದು ಬೆಂಗಳೂರಿನಲ್ಲಿ ‘ಮಲೆಗಳಲ್ಲಿ ಮದುಮಗಳು’ ಕೊನೆಯ ಪ್ರದರ್ಶನ ಕಾಣಲಿದೆ.  

ಕಳೆದ ಹಲವು ವರ್ಷಗಳಿಂದ ಬೆಂಗಳೂರಿಗರಿಗೆ ಮಲೆನಾಡಿನ ಸೊಬಗನ್ನು ಉಣಬಡಿಸಿದ್ದ ಈ ಐತಿಹಾಸಿಕ ರಂಗಪ್ರದರ್ಶನ ಇನ್ನು ಇತರ ನಗರಗಳತ್ತ ಪ್ರಯಾಣ ಬೆಳೆಸಲಿದೆ. ಇಲ್ಲಿಯವರೆಗೆ ಮಲೆಗಳಲ್ಲಿ ಮದುಮಗಳು ನಾಟಕ 100 ಪ್ರದರ್ಶನ ಕಂಡಿದ್ದು, ಅದರಲ್ಲಿ 80 ಪ್ರದರ್ಶನಗಳು ಬೆಂಗಳೂರಿನಲ್ಲಿಯೇ ನಡೆದಿದೆ.  ನಗರದ ಕಲಾ ರಸಿಕರು ಚಳಿ, ಮಳೆಯನ್ನೂ ಲೆಕ್ಕಿಸದೆ ಅಹೋರಾತ್ರಿ ತಾಳ್ಮೆಯಿಂದ ಕುಳಿತು ಪ್ರದರ್ಶನವನ್ನು ಕಣ್ತುಂಬಿಕೊಂಡಿದ್ದಾರೆ.  

ಕುವೆಂಪು ಅವರ ಬರಹಗಳನ್ನು ಕೇವಲ ಒಂದು ನಗರಕ್ಕೆ ಸೀಮಿತಗೊಳಿಸದೆ ನಾಡಿನುದ್ದಕ್ಕೂ ಕೊಂಡೊಯ್ಯಬೇಕು. ಕುವೆಂಪು ಅವರ ಆಶಯದಂತೆಯೇ ಅವರ ಕೃತಿಗಳನ್ನು ವಿಶ್ವದರ್ಜೆಗೇರಿಸಬೇಕು ಎಂಬ ಉದ್ದೇಶದಿಂದ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದ್ದೇವೆ. ಈ ನಿಟ್ಟಿನಲ್ಲಿ ಇನ್ನೂ ಪೂರ್ವಭಾವಿ ಕೆಲಸಗಳು ನಡೆಯಬೇಕಿದೆ. ಸರ್ಕಾರದ ಮಟ್ಟದಲ್ಲಿ ಕೂಡ ಚರ್ಚೆಗಳನ್ನು ನಡೆಸಬೇಕಿದೆ ಎಂದು ಬಸವಲಿಂಗಯ್ಯ ಮಾಹಿತಿ ನೀಡಿದ್ದಾರೆ.  

2010ರಲ್ಲಿ ಕನ್ನಡ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅವರು ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು 9 ಗಂಟೆಗಳ ರಂಗರೂಪಕ್ಕಿಳಿಸಿದ್ದವರು ಬಸವಲಿಂಗಯ್ಯ ಅವರು. ಮಲೆನಾಡಿನ ಕತೆಯನ್ನೊಳಗೊಂಡಿರುವ ಈ ಕಾದಂಬರಿಯನ್ನು ಮಲೆನಾಡಿನ ವಾತಾವರಣದಲ್ಲಿಯೇ ರಂಗದ ಮೇಲೆ ಮೂಡಿಸುವ ಉದ್ದೇಶದಿಂದ ನಾಲ್ಕು ಪ್ರತ್ಯೇಕ ರಂಗಸಜ್ಜಿಕೆಯನ್ನು ಆಯ್ಕೆ ಮಾಡಿಕೊಂಡು ಕತೆಯನ್ನು ಹೆಣೆಯಲಾಗಿತ್ತು. ಮೈಸೂರಿನಲ್ಲಿ ಆರಂಭಗೊಂಡ ಈ  ಪ್ರದರ್ಶನ ಬೆಂಗಳೂರಿಗೆ ಆಗಮಿಸಿ ತನ್ನ ನೂರನೇ ಪ್ರದರ್ಶನ ಪೂರೈಸಿದ್ದು, ಈಗ ಮತ್ತೆ ಪ್ರಯಾಣ ಮುಂದುವರಿಸಲಿದೆ.  

2020ನೇ ಸಾಲಿನಲ್ಲಿ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕಲಾಗ್ರಾಮದ ಮೈದಾನದಲ್ಲಿ ಜ. 20ರಿಂದ ನಡೆಯುತ್ತಿರುವ ರಾಷ್ಟ್ರಕವಿ ಕುವೆಂಪು ಅವರ ಕಾದಂಬರಿ ಆಧಾರಿತ ‘ಮಲೆಗಳಲ್ಲಿ ಮದುಮಗಳು’ ನಾಟಕದ ಅಹೋರಾತ್ರಿ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ ನಡೆಯುವ ಈ ಪ್ರದರ್ಶನ ರಾತ್ರಿ 8ರಿಂದ ಬೆಳಗ್ಗೆ 6ರ ನಡುವೆ ಒಟ್ಟು 9 ಗಂಟೆಗಳ ಪ್ರದರ್ಶನ ನಡೆಯುತ್ತದೆ. ನಾಲ್ಕು ರಂಗಸಜ್ಜಿಕೆಗಳಲ್ಲಿ ನಾಟಕ ಪ್ರದರ್ಶನಗೊಳ್ಳುತ್ತದೆ. ಇದರಲ್ಲಿ 80ಕ್ಕೂ ಹೆಚ್ಚು ಪಾತ್ರಧಾರಿಗಳು ನಟಿಸಿದ್ದಾರೆ. ಕುವೆಂಪು ಅವರ ಕಾದಂಬರಿಗೆ ರಂಗ ನಿರ್ದೇಶಕ ಕೆ.ವೈ.ನಾರಾಯಣಸ್ವಾಮಿ ರಂಗರೂಪ ನೀಡಿದ್ದಾರೆ. ನಾದಬ್ರಹ್ಮ ಹಂಸಲೇಖ ಸಂಗೀತ ನೀಡಿದ್ದು, ಶಶಿಧರ ಅಡಪ ರಂಗ ವಿನ್ಯಾಸ ಹಾಗೂ ಸಿ. ಬಸವಲಿಂಗಯ್ಯ ಅವರು ನಾಟಕ ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದಾರೆ.  

ಸೋಮವಾರ ಹಾಗೂ ಬುಧವಾರದ  ಪ್ರತಿ ಪ್ರದರ್ಶನವನ್ನು 500ಕ್ಕೂ ಹೆಚ್ಚು ಜನರು ವೀಕ್ಷಿಸುತ್ತಿದ್ದು, ವಾರಾಂತ್ಯದಲ್ಲಿ ಅದು ದುಪ್ಪಟ್ಟಾಗುತ್ತಿದೆ. ಅನೇಕರು ಟಿಕೆಟ್ ಸಿಗದೆ ನಿರಾಶೆಯಿಂದ ಮರಳುವ ಪರಿಸ್ಥಿತಿಯಿದೆ. ಈಗಾಗಲೇ 10 ಸಾವಿರಕ್ಕೂ ಹೆಚ್ಚು ಮಂದಿ ಪ್ರದರ್ಶನ ವೀಕ್ಷಿಸಿದ್ದಾರೆ. ಈ ಒಟ್ಟಾರೆ ಪ್ರದರ್ಶನಕ್ಕೆ 54 ಲಕ್ಷ ರೂ. ವೆಚ್ಚವಾಗಲಿದ್ದು,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ 30 ಲಕ್ಷ ರೂ. ಅನುದಾನ ನೀಡಿದೆ.  ಆದರೆ, ಇಲ್ಲಿಯವರೆಗೆ ಟಿಕೆಟ್ ಗಳಿಂದಲೇ 10 ಲಕ್ಷ ರೂ. ಸಂಗ್ರಹವಾಗಿವೆ.

‘ಮಲೆಗಳಲ್ಲಿ ಮದುಮಗಳು’ ರಂಗ ಪ್ರಯೋಗದ ಯಶಸ್ಸಿನ ನಂತರ ಈಗ ಬಸವಣ್ಣ ಅವರ ಅನುಭವವನ್ನು ರಂಗರೂಪಕ್ಕಿಳಿಸಲು ಎನ್ ಎಸ್ ಡಿ ನಿರ್ಧರಿಸಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಈ ಪ್ರಯೋಗಗಳು ನಡೆಯಲಿದೆ. ಸರ್ಕಾರ ಇದಕ್ಕೆ ಸಮ್ಮತಿ ಸೂಚಿಸಿದ್ದು, 75 ಲಕ್ಷ ರೂ. ಅನುದಾನ ನೀಡಲು ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿದ ಬಸವಲಿಂಗಯ್ಯ “ರಂಗರೂಪದ ಚಿತ್ರಕತೆ ಸಿದ್ದವಾಗಿದ್ದು, ಅಲ್ಪಸ್ವಲ್ಪ ಬದಲಾವಣೆಯಾಗಬೇಕಿದೆಯಷ್ಟೇ. ಸಾಧ್ಯವಾದಲ್ಲಿ ಮಾರ್ಚ್ ತಿಂಗಳಲ್ಲೇ ಈ ಪ್ರಯೋಗ ಆರಂಭಿಸಲಾಗುವುದು” ಎಂದಿದ್ದಾರೆ.