ಲೋಕದರ್ಶನ ವರದಿ
ವಿಜಯಪುರ 19: ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ವಾರ್ಡ ನಂ.20 ರ ಸಿಸಮಡ್ಡಿ ತಾಂಡಾದ ಮನೆಯೊಂದರ ಮೇಲೆ ಅಬಕಾರಿ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, ಮನೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ 60 ಸಾವಿರ ರೂ. ಮೌಲ್ಯದ ಗಾಂಜಾ ಜಪ್ತ ಮಾಡಿ ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಮಂಗಲಾಬಾಯಿ ಗೋವಿಂದ ಲಮಾಣಿ ಅವರ ಮನೆಯ ಮೇಲೆ ಅಬಕಾರಿ ದಾಳಿ ನಡೆಸಿ 2.250 ಕೆ ಜಿ ಗಾಂಜಾ ಜಪ್ತಿಪಡಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಂಗಲಾಬಾಯಿ ಲಮಾಣಿ ಅವರನ್ನು ಬಂಧಿಸಲಾಗಿದೆ.
ಈ ಕುರಿತು ಜಿಲ್ಲಾ ವಿಚಕ್ಷಣಾ ದಳದ ಅಬಕಾರಿ ನಿರೀಕ್ಷಕ ಎ.ಎ.ಮುಜಾವರ ಅವರು ಎನ್ ಡಿ ಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಅಬಕಾರಿ ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕ ಬಸವರಾಜ ಕಿತ್ತೂರ ಸಿಬ್ಬಂದಿಗಳಾದ ಎಸ್ ಎ ಹುಂಡೇಕಾರ, ಆಯ್ಆರ್ ಹಟ್ಟಿ, ಎನ್ಎ ಬಾರಾಗಣಿ, ಎಸ್ಡಿ ಜೋಶಿ, ರುದ್ರು ಕುಂಬಾರ, ವಿನೋಧ ಶಾಪೇಟಿ, ಆನಂದ ಪೂಜಾರಿ ಅವರು ಭಾಗವಹಿಸಿದ್ದರು ಎಂದು ಜಿಲ್ಲಾ ಅಬಕಾರಿ ಉಪಾಯುಕ್ತ ಎ.ರವಿಶಂಕರ ತಿಳಿಸಿದ್ದಾರೆ