ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವಂತೆ ಒತ್ತಾಯ
ರಾಣೇಬೆನ್ನೂರು 27: ನಗರದ ತಹಶೀಲ್ದಾರ ಕಛೇರಿ ಮುಂದೆ ತಾಲೂಕಿನ ಮೆಡ್ಲೇರಿ ನಾಡ ಕಛೇರಿ ಉಪ-ತಹಶೀಲ್ದಾರರನ್ನು ಖಾಯಂ ಇರಿಸಿ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವಂತೆ ಒತ್ತಾಯಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಾಲೂಕಾ ದಂಡಾಧಿಕಾರಿ ಆರ್. ಎಚ್.ಭಾಗವಾನ ಅವರಿಗೆ ಕಾರ್ಯಕರ್ತರು ಮನವಿ ಸಲ್ಲಿಸಿದರು.ತಾಲೂಕಿನ ಮೆಡ್ಲೇರಿ ಹೋಬಳಿ ನಾಡ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪ ತಹಶೀಲ್ದಾರರನ್ನು ರಾಣೇಬೆನ್ನೂರು ತಾಲೂಕ ಆಡಳಿತ ಸೌಧದಲ್ಲಿ ಶಿರಸ್ತೆದಾರರನ್ನಾಗಿ ಇನ್ ಚಾರ್ಜ್ ಮೇಲೆ ಹಾಕಿರುವುದರಿಂದ ಮೆಡ್ಲೇರಿಯಲ್ಲಿನ ನಾಡ ಕಛೇರಿಯಲ್ಲಿ ಸಾರ್ವಜನಿಕರಿಗೆ ಅವರು ಸರಿಯಾಗಿ ಸಿಗದೇ ಇರುವುದು, ಸಾರ್ವಜನಿಕರು ತಮಗೆ ಏನಾದರೂ ದಾಖಲೆಗಳನ್ನು ತೆಗೆಸಬೇಕಾದರೆ, ಅಧಿಕಾರಿಗಳ ಸಹಿ ಪಡೆಯಬೇಕಾದರೆ ವಯೋವೃದ್ದರು. ಅಂಗವಿಕಲರು, ವಿಧವೆಯರು, ಅನಕ್ಷರಸ್ತರು ಕಛೇರಿಗೆ ಸಂಬಂಧಿಸಿದ ದಾಖಲೆಗಳನ್ನು ಮಾಡಿಸಿಕೊಳ್ಳಲು ಮೊದಲು ನಾಡಕಛೇರಿಗೆ ಹೋಗಬೇಕು. ಅಲ್ಲಿ ಸರಿಯಾಗಿ ಇಲ್ಲದರಿಂದ ರಾಣೇಬೆನ್ನೂರ ತಹಶೀಲ್ದಾರ ಕಛೇರಿಗೆ ಅಲೆದಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಒಂದು ದಿನದಲ್ಲಿ ಆಗುವ ಕೆಲಸ ಒಂದು ವಾರಗಟ್ಟಲೆ ಅಲೆದಾಡುವಂತಾಗಿದೆ ಎಂದು ಸ್ವಾಭಿಮಾನಿ ಕರವೇ ತಾಲೂಕ ಅಧ್ಯಕ್ಷ ಚಂದ್ರ್ಪ ಬಣಕಾರ ಹೇಳಿದರು.ಸ್ವಾ ಕರವೇ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಬಸವರಾಜ ಸಾವಕ್ಕನವರ ಮಾತನಾಡಿ, ಸಾರ್ವಜನಿಕರ ಕೆಲಸ ಸರಾಗವಾಗಿ ಹಾಗೂ ಬೇಗನೇ ದೊರಕುವಂತಾಗಬೇಕಾದರೆ ಪೂರ್ಣ ಪ್ರಮಾಣದ ಉಪ ತಹಶೀಲ್ದಾರರನ್ನು ಮೆಡ್ಲೇರಿ ನಾಡಕಛೇರಿಗೆ ಪ್ರತಿದಿನ ಸಿಗುವಂತೆ ಆಗಬೇಕು. ರೈತರಿಗೆ, ಕೂಲಿಕಾರ್ಮಿಕರಿಗೆ ನಾಡಕಛೇರಿಯ ಕರ್ತವ್ಯಗಳು ಸರಿಯಾಗಿ ನೆರವೇರಲು ಪೂರ್ಣ ಪ್ರಮಾಣದ ಉಪತಹಶೀಲ್ದಾರರನ್ನು ಮೆಡ್ಲೇರಿಯಲ್ಲಿಯೇ ಖಾಯಂ ಇರುವಂತೆ ನೇಮಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಹಶೀಲ್ದಾರ ಕಛೇರಿಯ ಮುಂದೆ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ವಿದ್ಯಾರ್ಥಿ ಘಟಕದ ಅಧ್ಯಕ್ಷ ಶ್ರೀಧರ್ ಛಲವಾದಿ, ಶಿಕ್ಷಕರ ಘಟಕದ ಅಧ್ಯಕ್ಷ ಬ್ರಹ್ಮಾನಂದ ಉಜ್ಜೆರ, ಕಾರ್ಮಿಕ ಘಟಕದ ಅಧ್ಯಕ್ಷ ಪರಶುರಾಮ ಕುರುವತ್ತಿ ಸೇರಿದಂತೆ ಮತ್ತಿತರ ಕಾರ್ಯಕರ್ತರು, ಪಾಲ್ಗೊಂಡಿದ್ದರು.