ರಾಯಬಾಗ 30: ಪಟ್ಟಣದಲ್ಲಿ ಸಂಚಾರ ದಟ್ಟಣೆ ಮಿತಿಮೀರಿದ್ದು ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಪರದಾಟುಂವತಾಗಿದೆ.
ವಾರದ ಸಂತೆ ಸೋಮವಾರ ದಿನದಂದು ಪಟ್ಟಣದಲ್ಲಿ ಹಾದುಹೋಗಲು ಹರಸಾಹಸ ಮಾಡಬೇಕಾಗುತ್ತದೆ. ಸಂತೆ ದಿನದಂದು ಕಾಯಿಪಲ್ಲೆ ಮಾರಾಟಗಾರರು ಹಾಗೂ ಗಾಡಾ ಮೇಲೆ ಮಾರಾಟ ಮಾಡುವ ಮಾರಾಟಗಾರರು ಚಿಂಚಲಿ ರಸ್ತೆ ಮತ್ತು ಹಾರೂಗೇರಿ-ಅಂಕಲಿ ಮುಖ್ಯ ರಸ್ತೆ ಮೇಲೆ ತಮ್ಮ ವ್ಯಾಪಾರ ಕೈಗೊಳ್ಳುವುದರಿಂದ ವಾಹನ ಸವಾರರಿಗೆ ಮತ್ತು ಜನರಿಗೆ, ಶಾಲೆ ವಿದ್ಯಾರ್ಥಿಗಳಿಗೆ ಸಂಚರಿಸಲು ತುಂಬ ತೊಂದರೆಯಾಗುತ್ತಿದೆ.
ಇತ್ತೀಚಿಗೆ ಮಾರಾಟಗಾರರು ಬಸ್ ನಿಲ್ದಾಣವನ್ನು ಕೂಡ ತಮ್ಮ ವ್ಯಾಪಾರ ಮಳಿಗೆ ಮಾಡಿಕೊಂಡಿದ್ದರಿಂದ ಬಸ್ ನಿಲ್ದಾಣ ಒಳಗೆ ಬಸ್ ಬಂದು ಹೋಗಲು ಕೂಡ ತೀವ್ರ ಸಮಸ್ಯೆ ಉಂಟಾಗುವುದರ ಜೊತೆಗೆ ಪ್ರಯಾಣಿಕರಿಗೂ ತೀವ್ರ ತೊಂದರೆಯಾಗುತ್ತಿದೆ.ಪಟ್ಟಣದ ಮುಖ್ಯ ರಸ್ತೆ ಹೊಂದಿಕೊಂಡು ಬ್ಯಾಂಕಗಳು, ಹೋಟೆಲ್ ಗಳು ಇರುವುದರಿಂದ ಮತ್ತು ಇಲ್ಲಿ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಇರುವುದರಿಂದ ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿಯೇ ಅಡ್ಡಾದಿಡ್ಡಿ ಬೈಕ್ ಗಳನ್ನು ನಿಲ್ಲಿಸುವುದರಿಂದ ಜನದಟ್ಟಣೆ ಹೆಚ್ಚಾಗಿ ಸಂಚಾರ ಸಮಸ್ಯೆ ಉಲ್ಬಣಿಸಿದೆ. ಪ್ರಸ್ತುತ ಕಬ್ಬು ನುರಿಸುವ ಹಂಗಾಮು ನಡೆಯುತ್ತಿರುವುದರಿಂದ ಕಬ್ಬು ತುಂಬಿದ ಟ್ರ್ಯಕ್ಟರ್ ಗಳು ಪಟ್ಟಣದ ರಸ್ತೆ ಮಧ್ಯದಲ್ಲಿ ಸಿಲುಕಿದರೆ, ಇನ್ನುಳಿದ ವಾಹನಗಳು ತಾಸುಗಟ್ಟಲೇ ನಿಂತಲೇ ನಿಲ್ಲಬೇಕಾಗುತ್ತದೆ. ಇಂತಹ ಸಮಯದಲ್ಲಿ ಅಂಬುಲೆನ್ಸ್ ದಂತಹ ತುರ್ತು ವೈದ್ಯಕೀಯ ವಾಹನಗಳು ಇಕ್ಕಟಿನಲ್ಲಿ ಸಿಗುವುದರಿಂದ ರಸ್ತೆಯಲ್ಲಿಯೇ ರೋಗಿಗಳು ನರಳಾಡುವ ಪರಿಸ್ಥಿತಿ. ಸಂತೆ ದಿನ ಸಂಚಾರ ನಿಯಂತ್ರಣಕ್ಕಾಗಿ ಒಂದಿಬ್ಬರು ಪೊಲೀಸರು ಮಾತ್ರ ಇರುತ್ತಾರೆ. ಸಂತೆ ದಟ್ಟನೆ ಕಂಡು ಅವರು ಕೂಡ ಏನೂ ಮಾಡದೇ ಮೂಕ ಪ್ರೇಕ್ಷಕರಂತೆ ನಿಂತಿರುತ್ತಾರೆ. ಪೊಲೀಸ ಇಲಾಖೆ ಮತ್ತು ಪಟ್ಟಣ ಪಂಚಾಯತ ಇಲಾಖೆಯವರು ಪಟ್ಟಣದ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
"ನಮ್ಮ ಸಿಬ್ಬಂದಿ ಕೊಕಟನೂರ ಜಾತ್ರೆ ಬಂದೋಬಸ್ತಗಾಗಿ ತೆರಳಿದ್ದರಿಂದ ಪಟ್ಟಣದಲ್ಲಿ ಸೋಮವಾರ ಸಂತೆ ದಿನದಂದು ಸಂಚಾರ ನಿಯಂತ್ರಣ ಮಾಡಲು ಪೊಲೀಸರು ಇಲ್ಲದೇ ಇರುವುದರಿಂದ ಸಂಚಾರ ಸಮಸ್ಯೆ ಉಂಟಾಗಿದೆ.
:ಬಿ.ಎಸ್.ಮಂಟೂರ, ಸಿಪಿಐ ರಾಯಬಾಗ ವೃತ್ತ