ಲೋಕದರ್ಶನ ವರದಿ
ಚನ್ನಮ್ಮ ಕಿತ್ತೂರು 16: ವೀರ ರಾಣಿ ಚನ್ನಮ್ಮ ಮತ್ತು ರಾಜಗುರು ಸಂಸ್ಥಾನ ಕಲ್ಮಠ ಗಳಿಂದಾಗಿ ಕಿತ್ತೂರು ಐತಿಹಾಸಿಕ ಮಹತ್ವವನ್ನು ಹೊಂದಿದೆ.ಇದಕ್ಕಾಗಿ ಕಿತ್ತೂರ ನಾಡಿನ ಮಕ್ಕಳಿಗೆ ಇತಿಹಾಸ ನಿರ್ಮಿಸುವಂತಹ ಶಿಕ್ಷಣ ನೀಡುವದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಬೆಳಗಾವಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡದ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.
ಕಲ್ಮಠದಲ್ಲಿ ನಡೆದ ರಾಜಗುರು ಕಾನ್ವೆಂಟ್ ಶಾಲೆಯ ವಾರ್ಷಿಕ ಕ್ರೀಡಾ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಪ್ರಜೆಗಳಾಗಿರುವದರಿಂದ ಅವರ ವ್ಯಕ್ತಿತ್ವ ವಿಕಸಕ್ಕಾಗಿ ಶಿಕ್ಷಕರ ಜೊತೆಗೆ ಪಾಲಕರು ಕೈ ಜೋಡಿಸಬೇಕೆಂದು ತಿಳಿಸಿದರು.
ಸಮಾಜ ಸೇವಕ ಹಬೀಬ ಶಿಲೇದಾರ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವದರ ಜೊತೆಗೆ ಉತ್ತಮ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬೆಳೆಸುವದಾಗಬೇಕು.ಮಕ್ಕಳ ಕಲಿಕಾ ಪ್ರಗತಿ ತಿಳಿಯಲು ಪಾಲಕರು ಶಿಕ್ಷಕರೊಂದಿಗೆ ನೇರ ಸಂಪರ್ಕದಲ್ಲಿರಬೇಕೆಂದು ಮನವಿ ಮಾಡಿದರು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮಕ್ಕಳು ಕೇವಲ ಓದಿನ ಕಡೆಗೆ ಗಮನ ಹರಿಸದೆ ಸಾಮಾನ್ಯ ಜ್ಞಾನ ಮತ್ತು ಕಂಪ್ಯೂಟರ್ ಕಲಿಕೆಗಳಿಗೂ ಗಮನ ಹರಿಸಬೇಕೆಂದು ತಿಳಿಸಿದರು. ಮೇಜರ್ ಸಿದ್ದಲಿಂಗಯ್ಯ ಹಿರೇಮಠ,ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಬಳಿಗಾರ, ಹಬೀಬ ಶಿಲೇದಾರ ಇವರನ್ನು ಶ್ರೀಗಳು ಸನ್ಮಾನಿಸಿದರು. ದ್ವಿತೀಯ ಪಿ.ಯು.ಸಿ.ಪರೀಕ್ಷೆಯಲ್ಲಿ ಶೇಕಡಾ 92.6 ರಷ್ಟು ಅಂಕಗಳ ಪಡೆದ ವಿದ್ಯಾರ್ಥಿನಿ ಕಾವೇರಿ ಹುಬ್ಬಳ್ಳಿಯನ್ನು ವಿಶ್ರಾಂತ ಪ್ರಾಚಾರ್ಯ ಡಾ.ಎಸ್.ಬಿ.ದಳವಾಯಿ ಸನ್ಮಾನಿಸಿದರು.
ನಿವೃತ್ತ ಪ್ರಾಚಾರ್ಯ ಡಾ.ಎಸ್.ಬಿ.ದಳವಾಯಿ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಫ್. ಜಕಾತಿ, ಗುರುಸಿದ್ದಯ್ಯ ಕಲ್ಮಠ, ಆರ್.ವೈ.ಪರವಣ್ಣನವರ, ಗಂಗಣ್ಣ ಕರಿಕಟ್ಟಿ, ಮುಖ್ಯಾಧ್ಯಾಪಕಿ ಲಕ್ಷ್ಮೀ ಲಂಗೋಟಿ ಸ್ವಾಗತಿಸಿದರು.
ಅಶ್ವಿನಿ ಅಂಕಲಗಿಮಠ ವಂದಿಸಿದರು. ರಾಜೇಶ್ವರಿ ಕಳಸಣ್ಣವರ ನಿರೂಪಿಸಿದರು. ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು ಜರುಗಿದವು.
ಶಾಲಾ ಮಕ್ಕಳು ಕ್ರೀಡೆ,ದೇಶ ಭಕ್ತಿ ಮತ್ತು ಏರೋಬಿಕ್ ನೃತ್ಯಗಳನ್ನು ಮಾಡಿದರು. ಒನಕೆ ಓಬವ್ವ ರೂಪಕ ಎಲ್ಲರ ಮನ ಸೆಳೆಯಿತು. ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.