ಕೊಪ್ಪಳ 28: 2020ನೇ ಸಾಲಿನ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಫೆಬ್ರವರಿ ಕೊನೆಯವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ವರ್ಷ ಉದ್ಯೋಗಾಕಾಂಕ್ಷಿಗಳಿಗೆ ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಉದ್ಯೋಗ ಮೇಳವನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಕುರಿತು ಹಾಗೂ ಡಿ.ಎಂ.ಎಫ್ ಅನುದಾನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವಭಾವಿ ತರಬೇತಿ ನೀಡುವ ಕುರಿತು ಇಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2019ನೇ ಸಾಲಿನ ಉದ್ಯೋಗ ಮೇಳದಲ್ಲಿ ಒಟ್ಟು 4,945 ಅಭ್ಯರ್ಥಿಗಳು ನೋಂದಾಯಿಸಿಕೊಂಡು, ಅದರಲ್ಲಿ 1,336 ಅಭ್ಯರ್ಥಿಗಳು ವಿವಿಧ ಕಂಪನಿಗಳಲ್ಲಿ ಆಯ್ಕೆಯಾಗಿರುತ್ತಾರೆ. ಈ ಮೇಳದಲ್ಲಿ 92 ಕಂಪನಿಗಳು ಭಾಗವಹಿಸಿದ್ದವು. ಅವುಗಳಲ್ಲಿ ಬಹುತೇಕ ಬೆಂಗಳೂರಿನ ಮೂಲದ ಕಂಪನಿಗಳಾಗಿದ್ದವು. ಈ ಕಾರಣದಿಂದಾಗಿ ಮತ್ತು ಇತರೆ ವೈಯಕ್ತಿಕ ಕಾರಣಗಳಿಂದಾಗಿ ಶೇ. 50ರಷ್ಟು ಅಭ್ಯರ್ಥಿಗಳು ಪ್ರಸ್ತುತ ಉದ್ಯೋಗದಲ್ಲಿರುತ್ತಾರೆ ಎಂದು ತಿಳಿದುಬಂದಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಈ ಬಾರಿ ಅಭ್ಯರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕೊಡಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವನ್ನು ಕೊಡಬಹುದಾದ ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಧಾರವಾಡ ಹಾಗೂ ಸ್ಥಳೀಯ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಏಜೆನ್ಸಿ(ಪ್ಲೇಸ್ಮೆಂಟ್ ಏಜೆನ್ಸಿ)ಗಳನ್ನು ಆಹ್ವಾನಿಸಿ ಉದ್ಯೋಗ ಮೇಳವನ್ನು ಯಶಸ್ವಿಗೊಳಿಸಬೇಕು. ಈ ಉದ್ಯೋಗ ಮೇಳಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರಿ ನಿಯಮಾನುಸಾರ ಎಂ.ಸಿ.ಎ ಗೆ ಕೊಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಖನಿಜ ನಿಧಿ (ಡಿ.ಎಂ.ಎಫ್) ಅಡಿಯಲ್ಲಿ ಶಾಸಕರ ಅಭಿಪ್ರಾಯವನ್ನು ಪಡೆದು ಕೊಪ್ಪಳ ಜಿಲ್ಲೆಯ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಅರ್ಹ, ನುರಿತ, ಹೆಸರಾಂತ ತರಬೇತಿ ಸಂಸ್ಥೆಗಳಿಂದ ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲು ತೀಮರ್ಾನಿಸಲಾಗಿದೆ. ವಿಶೇಷವಾಗಿ ಐ.ಎ.ಎಸ್ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳನ್ನು ದೆಹಲಿಗೆ ಕಳುಹಿಸಿ ತರಬೇತಿ ಕೊಡಿಸಲು ಹಾಗೂ ಕೆ.ಎ.ಎಸ್ ಪರೀಕ್ಷೆಗೆ ಬೆಂಗಳೂರು ಮತ್ತು ಧಾರವಾಡದಲ್ಲಿನ ಹೆಸರಾಂತ ತರಬೇತಿ ಸಂಸ್ಥೆಗಳಿಂದ ತರಬೇತಿ ನೀಡಲು ತೀರ್ಮಾನಿಸಲಾಗಿದೆ. ಇತರೆ ಸ್ಪಧರ್ಾತ್ಮಕ ಪರೀಕ್ಷೆಗಳಾದ ಬ್ಯಾಂಕಿಂಗ್, ಸೇನಾ ನೇಮಕಾತಿ, ಪೊಲೀಸ್, ಪಿಡಿಒ ಇತ್ಯಾದಿ ಪರೀಕ್ಷೆಗಳಿಗೆ ಕೊಪ್ಪಳದ ವಿಜ್ಞಾನ ಭವನದಲ್ಲಿ ಸಕಲ ಸೌಕರ್ಯಗಳೊಂದಿಗೆ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಜಿಲ್ಲಾ ಯೋಜನಾ ನಿರ್ದೇಶಕ ಸಿದ್ದರಾಮೇಶ್ವರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗವಿಶಂಕರ್ ಕೆ., ಜಿಲ್ಲಾ ಉದ್ಯೋಗಾಧಿಕಾರಿ ಪಿ.ಎಸ್. ಹಟ್ಟಪ್ಪ, ಜಿಲ್ಲಾ ಮಾಹಿತಿ ಅಧಿಕಾರಿ ಈರಣ್ಣ, ಪೌರಾಯುಕ್ತರಾದ ಮಂಜುನಾಥ ಟಿ.ಎ, ಕ್ರೀಡಾ ಇಲಾಖೆ ಅಧಿಕಾರಿ ಆರ್.ಜಿ. ನಾಡಗೀರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಎನ್.ಜಿ. ಕನಕರೆಡ್ಡಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಶಶಿಧರ, ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕರಾದ ರವಿ ಬಿಸರಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.