ಭಾವನಾತ್ಮಕ ಭಾವೈಕ್ಯತೆ ಬೆಸೆದು ಎಲ್ಲೆಡೆಯೂ ಪ್ರಜ್ವಲಿಸಿದ ದೀಪಗಳು

ಲೋಕದರ್ಶನವರದಿ

ರಾಣೇಬೆನ್ನೂರು-ಎ.5: ಕರೋನಾ ವೈರಸ್ ಮಹಾಮಾರಿ ಭೀತಿ ಎದುರಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ಕಳೆದ 22 ರಂದು ಸ್ವಯಂ ಗೃಹ ದಿಗ್ಭಂಧನ ವಿಧಿಸಿಕೊಳ್ಳುವಂತೆ ಆದೇಶಿಸಿ ದೇಶದ ಜನತೆಗೆ ಕರೆ ನೀಡಿದ್ದರು.  ಇಡೀ ಭಾರತವೇ, ಪ್ರಧಾನಿಯವರ ಆದೇಶಕ್ಕೆ ಮನ್ನಣೆಯಿತ್ತು ಅಂದು ಸಂಪೂರ್ಣ ನಾಗರೀಕರು ಮನೆಯಿಂದ ಹೊರಬಾರದೇ, ಒಂದು ದಿವಸಗಳ ಕಾಲ ದಿಗ್ಭಂಧನ ವಿಧಿಸಿಕೊಂಡು ಮಹಾಮಾರಿಯ ವಿನಾಶಕ್ಕಾಗಿ ಪ್ರತಿಜ್ಞೆ ಮಾಡಿ ಯಶಸ್ವಿಕಂಡಿದ್ದರು. 

ಇದೀಗ ಪುನ: ನರೇಂದ್ರ ಮೋದಿಜೀ ಅವರು ಭಾರತ ದೇಶವು ಸಂಪೂರ್ಣವಾಗಿ ಕರೋನಾ ವೈರಸ್ ಮಹಾಮಾರಿ ಹೊಡೆದೊಡಿಸುವ ಸಂಕಲ್ಪ ಹೊಂದಿ ರವಿವಾರ ರಾತ್ರಿ 9 ಗಂಟೆಯಿಂದ 9 ನಿಮಿಷಗಳ ಕಾಲ ತಮ್ಮ ತಮ್ಮ ಮನೆಯ ಬಾಗಿಲು, ಅಟ್ಟಣಿಕೆಯಲ್ಲಿ ನಿಂತು ಕುಟುಂಬ ಸಮೇತ ಸಾಲಂಕೃತ ದೀಪ ಹಚ್ಚುವ ಆದೇಶ ಹೊರಡಿಸಿರುವುದನ್ನು ಸಂಪೂರ್ಣವಾಗಿ ಸ್ವಾಗತಿಸಿರುವ ದೇಶದ ನಾಗರೀಕರು ಇಂದು ರಾತ್ರಿ ಪ್ರತಿಯೊಬ್ಬರು ಸಾಮೂಹಿಕ ದೀಪ ಬೆಳಗಿಸುವುದರ ಮೂಲಕ ಸಂಕಲ್ಪ ಸಿದ್ಧಿಗೆ ಮುಂದಾಗಿದ್ದು, ಮೋದಿಜೀ ಅವರ ಸಂಕಲ್ಪಸಿದ್ಧಿ ಮತ್ತು ದೂರದೃಷ್ಠಿತ್ವಕ್ಕೆ ಸಾಕ್ಷಿಯಾಯಿತು. 

ರಾಣೇಬೆನ್ನೂರು ತಾಲೂಕು ಮತ್ತು ನಗರದಾದ್ಯಂತ ಸಾಲು-ಸಾಲು ದೀಪಗಳ ಬೆಳಕು ಯಾವುದೋ ಮಾಯಾನಗರಿಗೆ ಕರೆದುಕೊಂಡು ಸಾಗಿತ್ತು ಎನ್ನುವ ಭಾವನೆ ಪ್ರತಿಯೊಬ್ಬರಲ್ಲಿ ಮೂಡಿ ಸಂಪೂರ್ಣ ಯಶಸ್ವಿ ಕಂಡಿದೆ.