ಕಾರ್ಖಾನೆ ಸಮಸ್ಯೆ ಪರಿಹಾರಕ್ಕೆ ಶೀಘ್ರವೇ ಕುಮಾರಸ್ವಾಮಿ ಭೇಟಿ’ವಸ್ತುನಿಷ್ಠ ಅಧ್ಯಯನಕ್ಕೆ ಭಾದಿತ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದ ಜೆಡಿಎಸ್ ನಾಯಕರು

ಕಾರ್ಖಾನೆ ಸಮಸ್ಯೆ ಪರಿಹಾರಕ್ಕೆ ಶೀಘ್ರವೇ ಕುಮಾರಸ್ವಾಮಿ ಭೇಟಿ’ವಸ್ತುನಿಷ್ಠ ಅಧ್ಯಯನಕ್ಕೆ ಭಾದಿತ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದ ಜೆಡಿಎಸ್ ನಾಯಕರು   Kumaraswamy to meet soon to resolve factory issue, JDS leaders interact with affected villagers for


ಕೊಪ್ಪಳ 11: ಮುಂದಿನ ವಾರದಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್ ಡಿ ಕುಮಾರ ಸ್ವಾಮಿ ಅವರನ್ನು ಭೇಟಿಯಾಗಿ ಕೈಗಾರಿಕೆಗಳ ಮಾಲಿನ್ಯದಿಂದ ಭಾದಿತ ಗ್ರಾಮಗಳ ವಸ್ತುನಿಷ್ಠ ವರದಿಯನ್ನು ಸಲ್ಲಿಸಲಾಗುವುದು ಎಂದು ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಹೇಳಿದರು.ಕೊಪ್ಪಳದ ಸುತ್ತಮುತ್ತಲಿನ ಕಾರ್ಖಾನೆಗಳ ಮಾಲಿನ್ಯದಿಂದ ಭಾದಿತವಾಗಿರುವ ಹಿರೆಬಗನಾಳ, ಕಾಸನಕಂಡಿ, ಕುಣಿಕೇರಿ ಹಾಗೂ ಕುಣಿಕೇರಿ ತಾಂಡಾಗಳಿಗೆ ವಸ್ತುಸ್ಥಿತಿ ಅಧ್ಯಯನಕ್ಕಾಗಿ ಸೋಮವಾರ ತೆರಳಿದ ನಿಯೋಗದ ನೇತೃತ್ವ ವಹಿಸಿ ಅವರು ಮಾತನಾಡಿದರು.

’ನಾನು ಕಳೆದ ವರ್ಷ ವೈಯಕ್ತಿಕ ನೆಲೆಗಟ್ಟಿನಲ್ಲಿ ಕುಮಾರಸ್ವಾಮಿಯವರಿಗೆ ಸುಧೀರ್ಘ ವರದಿ ಸಲ್ಲಿಸಿ ಕಾನೂನು ಉಲ್ಲಂಘಿಸಿರುವ ಕಾರ್ಖಾನೆಗಳ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿದ್ದೆ. ನನ್ನ ವರದಿಯ ಆಧಾರದ ಮೇಲೆ ಕುಮಾರಸ್ವಾಮಿಯವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಭೂಪೇಂದರ್ ಯಾದವ್ ಅವರಿಗೆ ಪತ್ರ ಬರೆದ ನಂತರ ಕೇಂದ್ರದ ಅಧಿಕಾರಿಗಳತಂಡ ಮೂರು ದಿನಗಳ ಕಾಲ ಭೇಟಿ ನೀಡಿ ವರದಿ ಸಲ್ಲಿಸಿತು. ರಾಜ್ಯ ಸರಕಾರ ಇಲ್ಲಿಯ ತನಕ ಈ ವರದಿಯ ಅನುಷ್ಠಾನಕ್ಕೆ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಭಾದಿತ ಗ್ರಾಮಸ್ಥರ ಜೊತೆಗೆ ಸಂವಾದ ನಡೆಸಿ ವಸ್ತುತಿ ತಿಳಿದುಕೊಂಡು ಮತ್ತೊಮ್ಮೆ ವರದಿ ಸಲ್ಲಿಸಲು ನಿರ್ಧರಿಸಲಾಯಿತು. ನಮ್ಮ ಭೇಟಿಯ ಹಿಂದೆ ರಾಜಕೀಯ ಉದ್ದೇಶವಿಲ್ಲ. ವಿನೂತನ ತಂತ್ರಜ್ಞಾನ ಅಳವಡಿಸಿಕೊಂಡು ಕಾರ್ಖಾನೆಗಳು ಮಾಲಿನ್ಯವನ್ನು ನಿಯಂತ್ರಿಸಬೇಕು.  

ಭಾದಿತ ಗ್ರಾಮಸ್ಥರಿಗೆ ಪರಿಹಾರ ನೀಡಬೇಕು,’ ಎಂದು ಹಿರೆಬಗನಾಳ ಗ್ರಾಮಸ್ಥರೊಂದಿಗಿನ ಸಂವಾದದಲ್ಲಿ ತಿಳಿಸಿದರು.ಹಿರೆಬಗನಾಳ ಗ್ರಾಮದ ಜನಸಂಖ್ಯೆ ಸುಮಾರು 2500. ಇದರಲ್ಲಿ ಧೂಳಿನಿಂದ ವಿವಿಧ ರೋಗಗಳಿಗೆ ತುತ್ತಾದವರ ಸಂಖ್ಯೆ 220ಕ್ಕೂ ಹೆಚ್ಚು. ಕಳೆದ 25 ವರ್ಷಗಳಲ್ಲಿ ಅಧಿಕಾರದಲ್ಲಿ ಇದ್ದವರ ಕಣ್ಣಿಗೆ ಈ ಸಮಸ್ಯೆ ಗಮನಕ್ಕೆ ಬಾರದೆ ಹೋಗಿದ್ದು ದುರಂತ. ಕೇಂದ್ರ ಸರಕಾರದಿಂದ ಸಿಗಬಹುದಾದ ಎಲ್ಲಾ ಪರಿಹಾರ ರೂಪದ ಕ್ರಮಗಳನ್ನು ಜಾರಿಗೊಳಿಸಲು ಮಾಡಬೇಕಾದ ಪ್ರಯತ್ನ ಮಾಡುತ್ತೇನೆ ಎಂದು ವಾಗ್ದಾನ ಮಾಡಿದರು.’ಈ ಭಾಗದಲ್ಲಿ ಕೃಷಿ ಕ್ಷೇತ್ರ ಅಪಾರ ನಷ್ಟಕ್ಕೀಡಾಗಿದೆ. ಈ ಭಾಗದ ಬೆಳೆಯನ್ನು ಯಾರೂ ಖರೀದಿಸುತ್ತಿಲ್ಲ. ಈ ನಷ್ಟದ ಕುರಿತು ಅಧ್ಯಯನ ನಡೆಸಿ ಅಂಕಿ ಅಂಶ ಸಮೇತ ವರದಿ ಸಿದ್ಧಪಡಿಸಬೇಕು. ತೆರಿಗೆದಾರರ ಹಣದಿಂದ ಜೀವನ ಸಾಗಿಸುತ್ತಿರುವ ಸರಕಾರಿ ಅಧಿಕಾರಿಗಳು ಸಮಸ್ಯೆಗೆ ಕ್ರಮ ಕೈಗೊಳ್ಳದೆ ತಮ್ಮ ನಿರ್ಲಕ್ಷವನ್ನು ಮುಂದುವರೆಸಿದರೆ ಜನ ದಂಗೆ ಹೇಳುವುದು ಖಚಿತ,’  

ಎಂದು ಜಿಲ್ಲಾ ವಕ್ತಾರ ಮಲ್ಲನಗೌಡ ಕೋಣನಗೌಡ್ರು ಎಚ್ಚರಿಸಿದರು. ’ಕೈಗಾರಿಕೆಗಳು ನೆಲೆಗೊಳ್ಳುವ ಮೊದಲು ಅವುಗಳಿಂದ ಆಗುವ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರಿಗೆ ಮನದಟ್ಟು ಮಾಡಬೇಕು.ಕೊಪ್ಪಳದಲ್ಲಿ ನೆಲೆಗೊಂಡ  ಕಾರ್ಖಾನೆಗಳ ವಿಷಯಗಳಲ್ಲಿ ಇದು ಪಾಲನೆಯಾಗಿಲ್ಲ. ಎರಡು ದಶಕಗಳ ನಂತರ ಈ ವಿಷಯದಲ್ಲಿ ಜನಪ್ರತಿನಿಧಿಗಳು ಗ್ರಾಮಸ್ಥರನ್ನು ದೂರುತ್ತಿರುವುದು ತರವಲ್ಲ. ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಘಟಕಗಳಿಂದ ಹೊಮ್ಮುವ ಮಾಲಿನ್ಯ ತಗ್ಗಿಸಬೇಕು. ಇಲ್ಲದಿದ್ದರೆ ನಾವು ಆ ಘಟಕಗಳನ್ನು ಇಲ್ಲಿಂದ ಓಡಿಸಬೇಕಾಗುತ್ತದೆ,’ ಎಂದು ಜಿಲ್ಲಾ ಉಪಾಧ್ಯಕ್ಷ ಮೂರ್ತ್ಯಪ್ಪ ಗಿಣಿಗೇರಿ ಹೇಳಿದರು.ಕೈಗಾರಿಕೆಗಳ ಆಡಳಿತ ಮಂಡಳಿಗಳಿಗೆ ಅಧಿಕಾರಿಗಳ ಭಯ ಇಲ್ಲವಾಗಿದೆ. ಅವರು ಗ್ರಾಮಸ್ಥರ  ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಎಂಬತ್ತರದಶಕದಲ್ಲಿ ನರಗುಂದದಲ್ಲಿ ಉಂಟಾದ ರೈತರ ಬಂಡಾಯದಂತೆ ಹಿರೆಬಗನಾಳ ಗ್ರಾಮದಲ್ಲಿ ಬಂಡಾಯದ ಕಿಡಿ ಹತ್ತಿದೆ. ಇದು ಆಳುವವರ ಮತ್ತು ಅಧಿಕಾರಿಗಳಲ್ಲಿ ತಲ್ಲಣ ಮೂಡಿಸಿದೆ.  

ಹೀಗಾಗಿ 15 ದಿನಗಳಲ್ಲಿ ಕ್ರಮ ಕೈಗೊಳ್ಳುವ ನಾಟಕ ಮಾಡುತ್ತಿದ್ದಾರೆ. ಯಾವುದೆ ಕ್ರಮ ಕೈಗೊಳ್ಳದಿದ್ದರೆ ನಾವು ಉಗ್ರ ಹೋರಾಟಕ್ಕೆ ಸಿದ್ಧ ಎಂದು ಜಿಲ್ಲಾ ಒಬಿಸಿ ಅಧ್ಯಕ್ಷ ಕರಿಯಪ್ಪ ಹಾಲವರ್ತಿ ಹೇಳಿದರು.’ಧೂಳು ಇಲ್ಲದೆ ಘಟಕಗಳನ್ನು ನಿರ್ವಹಿಸುವುದಾದರೆ ನಮ್ಮ ಅಭ್ಯಂತರವಿಲ್ಲ. ಇದಾಗದಿದ್ದರೆ ಘಟಕಗಳನ್ನು ಕೂಡಲೇ ಮುಚ್ಚಬೇಕು. ಈ ಹೋರಾಟ ಹಳಿ ತಪ್ಪಬಾರದು. ನಮ್ಮಲ್ಲಿ ಐಕ್ಯತೆ ಮುಖ್ಯ. ಮೊದಲಿನಿಂದಲೂ ರೈತ ಚಳುವಳಿಗೆ ಬೆಂಬಲ ನೀಡಿರುವ ನಾವು ಈ ಹೋರಾಟ ತಾರ್ಕಿಕ ಅಂತ್ಯ ತಲುಪುವವರೆಗೂ ಗ್ರಾಮಸ್ಥರ ಜೊತೆ ನಿಲ್ಲುತ್ತೇವೆ,’ ಎಂದು  ತಾಲೂಕು ಗೌರವಾಧ್ಯಕ್ಷ ಈಶಪ್ಪ ಮಾದಿನೂರು ಹೇಳಿದರು.ಗ್ರಾಮಸ್ಥರು ಉಂಟಾಗಿರುವ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಸಮಸ್ಯೆ ಪರಿಹಾರವಾಗದಿದ್ದರೆ ದಯಾಮರಣಕ್ಕೆ ಅನುಮತಿ ಕೊಡಿಸಿ ಎಂದು ವಿನಂತಿಸಿದರು. ಈ ಹೋರಾಟವನ್ನು ಮತ್ತಷ್ಟು ಉಗ್ರರೂಪಕ್ಕೆ ತೆಗೆದುಕೊಂಡು ಹೋಗುವುದಾಗಿ ಎಚ್ಚರಿಸಿದರು.  

ಕೇಂದ್ರ ಸರಕಾರ ಈ ಕೂಡಲೇ ಮಧ್ಯ ಪ್ರವೇಶಿಸುವಂತೆ ನೋಡಿಕೊಳ್ಳಬೇಕು ಎಂದು ಜೆಡಿಎಸ್ ಪಕ್ಷವನ್ನು ಒತ್ತಾಯಿಸಿದರು.ತಾಲೂಕು ಅಧ್ಯಕ್ಷ ವೀರೇಶ್ ಗೌಡ, ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ,ಎಸ್ ಸಿ ಘಟಕದ ತಾಲೂಕು ಅಧ್ಯಕ್ಷ ಸುರೇಶ್ ಪೂಜಾರ್,ತಾಲೂಕು ಕಾರ್ಯದರ್ಶಿ, ಜಿಲ್ಲಾ ಕೈಗಾರಿಕಾ ಅಧ್ಯಕ್ಷ ಮಾರುತಿ ಗೌಡ ಪೊಲೀಸ್ ಪಾಟೀಲ್, ನಗರ ಕಾನೂನು ಅಧ್ಯಕ್ಷ ಬಸವರಾಜ ಎಸ್, ನಗರ ಉಪಾಧ್ಯಕ್ಷ ಗಂಗಾಧರ್ ವಸ್ತ್ರದ , ನಗರ ಪರಿಸರ ಹಕ್ಕು ವಿಭಾಗದ ಅಧ್ಯಕ್ಷ ಪ್ರಾಣೇಶ್ ಕಂಪ್ಲಿ,ಯುವ ಘಟಕದ ಅಧ್ಯಕ್ಷ ರೋಹಿತ್ ಹಣವಾಳ, ಮುಖಂಡರಾದ  ಶರಣಪ್ಪ ಮರ್ಕಟ್, ಆನಂದ ಕೆ, ವಿರೇಶ್ ವಕ್ರದ್, ವಿರೇಶ್ ಕುಟಗನಹಳ್ಳಿ ಹಾಜರಿದ್ದರು.ಶೀರ್ಷಿಕೆಗಳು:ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರಕಾರ್ಖಾನೆ ಮಾಲಿನ್ಯದಿಂದ ಉಂಟಾಗಿರುವ ಸಮಸ್ಯೆ ಕುರಿತು  ಕಾಸನಕಂಡಿ ಗ್ರಾಮಸ್ಥರ ಜೊತೆಗೆ ಮಾತನಾಡಿದರು. ಕಾರ್ಖಾನೆ ಮಾಲಿನ್ಯದಿಂದ ಭಾದಿತ ಹಿರೆಬಗನಾಳ ಗ್ರಾಮಸ್ಥರೊಂದಿಗೆ ಜೆಡಿಎಸ್ ಮುಖಂಡರು ನಿಯೋಗ ಸಂವಾದ ನಡೆಸಿದರು.