ಉದ್ಯೋಗ ಖಾತರಿ ಪ್ರಚಾರ ವಾಹನಕ್ಕೆ ಚಾಲನೆ

ಲೋಕದರ್ಶನ ವರದಿ

ರಾಯಬಾಗ 11: ಪ್ರವಾಹದಿಂದಜನರು ಮತ್ತು ರೈತರು ಎಲ್ಲವನ್ನು ಕಳೆದುಕೊಂಡಿ ನಿರಾಶ್ರಿತರಾಗಿದ್ದಾರೆ. ಅವರ ಕಷ್ಟದ ಈ ದಿನಗಳಲ್ಲಿ ಜೀವನ ಸಾಗಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಆಶಾ ಕಿರಣವಾಗಿದೆ ಎಂದು ತಾ.ಪಂ.ಅಧ್ಯಕ್ಷೆ ಸುಜಾತಾ ಪಾಟೀಲ ಹೇಳಿದರು.

ಗುರುವಾರ ಪಟ್ಟಣದ ತಾ.ಪಂ.ಕಚೇರಿ ಆವರಣದಲ್ಲಿ ತಾಲೂಕಿನ 38 ಗ್ರಾ.ಪಂ.ಗಳಲ್ಲಿ ಸಂಚರಿಸಲಿರುವ ಉದ್ಯೋಗ ಖಾತರಿ ಪ್ರಚಾರ ವಾಹಿನಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರ್ಥಿಕ ವರ್ಷದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕುಟುಂಬಕ್ಕೆ 100 ದಿನಗಳಿಗಿಂತ ಕಡಿಮೆ ಇಲ್ಲದಂತೆ ಉದ್ಯೋಗ ನೀಡುತ್ತಿದ್ದು, ಇದರ ಸದುಪಯೋಗವನ್ನುಗ್ರಾಮೀಣ ಜನರು ಪಡೆದುಕೊಳ್ಳಬೇಕೆಂದರು. 

ತಾ.ಪಂ. ಪ್ರಭಾರಿ ಕಾರ್ಯನಿರ್ವಾಹಕಾಧಿಕಾರಿ ಸುದೀಪ ಚೌಗಲಾ ಮಾತನಾಡಿ, ಗ್ರಾಮೀಣ ಭಾಗದ ಜನರು ಕೂಲಿಗಾಗಿ ವಲಸೆ ಹೋಗದಂತೆ ತಡೆಯಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳಸಿಲು ಸರಕಾರ ಪ್ರಚಾರ ಕೈಗೊಂಡಿದೆ. ಒಂದು ದಿನಕ್ಕೆ 249 ರೂ. ಕೂಲಿ ನಿಗದಿಪಡಿಸಲಾಗಿದೆ. 

ಉದ್ಯೋಗ ಕೋರಿದ 15 ದಿನದೊಳಗೆ ಉದ್ಯೋಗ ಒದಗಿಸದಿದ್ದಲ್ಲಿ ಅರ್ಜಿದಾರರು ನಿರುದ್ಯೋಗ ಭತ್ಯೆಗೆ ಅರ್ಹರರಾಗುತ್ತಾರೆಂದು ತಿಳಿಸಿದರು. ಉದ್ಯೋಗ ಚೀಟಿ ಪಡೆಯಲು ಅರ್ಜಿದಾರರು ಗ್ರಾಮ ಪಂಚಾಯತಿಗೆ ವೈಯಕ್ತಿಕ ಬ್ಯಾಂಕ್ಖಾತೆ, ಆಧಾರಕಾರ್ಡ ಮತ್ತು ಫೋಟೊದೊಂದಿಗೆ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದರು.

ಮಾಹಿತಿ ಮತ್ತು ಶಿಕ್ಷಣ ಸಂವಹನ ಸಂಯೋಜಕ ಮುತ್ತು ರಾಜಗದಾಡಿ, ರೋಹಿತ ಹೊನಕಂಡೆ, ಶಂಕರ ಶಾಸ್ತ್ರಿ, ಸಂಜು ಹುದ್ದಾರ, ಎ.ಡಿ.ಅನ್ಸಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.