ಲೋಕದರ್ಶನ ವರದಿ
ಗಂಗಾವತಿ ೧೬: ಹಾವೇರಿ ಜಿಲ್ಲೆಯ ಸುಕ್ಷೇತ್ರ ನರಸೀಪುರದಲ್ಲಿ ನಡೆಯಲಿರುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನ ಗ್ರಂಥ ಮಹಾ ರಥೋತ್ಸವ ನಿಮಿತ್ಯ ತಾಲೂಕಿನ ಗಂಗಾಮತ ಸಮುದಾಯದವರಿಂದ ಸಂಗ್ರಹಿಸಲಾದ ದೇಣಿಗೆ ಹಾಗೂ ಧಾನ್ಯಗಳನ್ನು ಗಂಗಾಮತ ಸಮುದಾಯದ ತಾಲೂಕಾಧ್ಯಕ್ಷ ಈ.ಧನರಾಜ್ ಅವರ ನೇತೃತ್ವದಲ್ಲಿ ಮಂಗಳವಾರದಂದು ಸುಕ್ಷೇತ್ರಕ್ಕೆ ರವಾನಿಸಲಾಯಿತು.
ನಗರದ ಸುಣ್ಣಗಾರ ಓಣಿಯ ಶ್ರೀ ಗಂಗಾಪರಮೇಶ್ವರಿ ಮಂದಿರದ ಬಳಿ ಸಮಾವೇಶಗೊಂಡ ಸಮಾಜ ಬಾಂಧವರು ಸಂಗ್ರಹಿದ್ದ ಇಪ್ಪತ್ತೊಂದು ಕ್ವಿಂಟಾಲ್ ಅಕ್ಕಿ ಹಾಗೂ ದೇಣಿಗೆಯನ್ನು ಸದ್ಭಕ್ತರೊಂದಿಗೆ ವಾಹನದ ಮೂಲಕ ಸುಕ್ಷೇತ್ರ ನರಸೀಪುರದಲ್ಲಿ ನಡೆಯಲಿರುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಶರಣ ಸಂಸ್ಕೃತಿ ಉತ್ಸವಕ್ಕೆ ಕಳುಹಿಸಿ ಕೊಡಲಾಯಿತು.
ನೇತೃತ್ವ ವಹಿಸಿದ್ದ ತಾಲೂಕ ಅಧ್ಯಕ್ಷ ಈ.ಧನರಾಜ್ ಮಾತನಾಡಿ, ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಶರಣ ಸಂಸ್ಕೃತಿ ಉತ್ಸವದ ನಿಮಿತ್ಯ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಉತ್ಸವದಲ್ಲ್ಲಿ ದೇಶದ ವಿವಿಧ ರಾಜ್ಯಗಳಿಂದ ನಾನಾ ಕಲಾ ತಂಡಗಳು ಭಾಗವಹಿಸಲಿವೆ. ತಮಿಳುನಾಡಿನ ಕಲಾತಂಡಗಳಿಂದ ಕಾವಡಿ, ಅಸ್ಸಾಂನ ಕಲಾತಂಡಗಳಿಂದ ಬೀಹು, ಕೇರಳದ ಕಲಾತಂಡಗಳಿಂದ ಕಥಕಲಿ, ಮೋಹಿನಿ ಅಟ್ಟಂ, ರಾಜಸ್ಥಾನದ ಕಲಾತಂಡಗಳಿಂದ ಕುಚ್ಚಿ ಘೋಡಿ, ಕಾಲ್ಬೆಲಿಯಾ, ಭವಾಯ್, ಸಪೇರಾ ಡ್ಯಾನ್ಸ್, ಆಂಧ್ರದ ಕಲಾತಂಡಗಳಿಂದ ಕೊಲ್ಲಾಟಂ, ವಿಲಾಸಿನಿ ನಾಟ್ಯಂ, ಧಿಮ್ಸಾ, ಮಣಿಪುಂ ಕಲಾತಂಡಗಳಿಂದ ಖಂಬಾತೋಯ್ಬಿ, ಪುಂಗಾ ಛೋಲಂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ನೃತ್ಯ ಪ್ರಕಾರಗಳು ಪ್ರದರ್ಶನಗೊಳ್ಳಲಿವೆ ಮತ್ತು ಕರ್ನಾಟಕದ ಜನಪದ ಕಲಾತಂಡಗಳಿಂದ ವೀರಗಾಸೆ, ಡೊಳ್ಳು, ತಮಟೆ, ಲಮಾಣಿ ಕುಣಿತ, ಮರುಗಾಲು ನಡಿಗೆಯಂತಹ ಜನಪದ ಕಲೆಗಳು ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.
ಉತ್ಸವದ ನಿಮಿತ್ಯ ರಾಜ್ಯದ ವಿವಿಧ ಜಿಲ್ಲೆಗಳಿಂದ ದೇಣಿಗೆಯನ್ನು ಸಂಗ್ರಹಿಸಿ ಸುಕ್ಷೇತ್ರಕ್ಕೆ ಕಳುಹಿಸಲಾಗುತ್ತಿದೆ. ಅದೇ ರೀತಿ ಗಂಗಾವತಿ ತಾಲೂಕಿನ ಸಮಾಜದ ಬಾಂಧವರಿಂದ ಸಂಗ್ರಹಿಸಲಾದ ಒಟ್ಟು 21 ಕ್ವಿಂಟಾಲ್ ಅಕ್ಕಿ, 70 ಸಾವಿರ ನಗದು ಹಣವನ್ನು ಸುಕ್ಷೇತ್ರಕ್ಕೆ ಗುರುಗಳ ಸನ್ನಿಧಿಗೆ ರವಾನಿಸಲಾಗುತ್ತಿದ್ದು, ಶರಣ ಸಂಸ್ಕೃತಿ ಉತ್ಸವದ ಯಶಸ್ವಿಗೆ ಶ್ರಮಿಸುತ್ತಿರುವ ಸಮಾಜದ ಮುಖಂಡರ ಅವಿರತ ಶ್ರಮಕ್ಕೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಬಿ.ಲಿಂಗರಾಜು, ಗೌರವ ಅಧ್ಯಕ್ಷರಾದ ಆಂಜನೇಯ, ಕಾರ್ಯದಶರ್ಿ ವೀರಣ್ಣ, ಅಂಬಿಗರ ಚೌಡಯ್ಯ ಸಂಘದ ತಾಲೂಕ ಅಧ್ಯಕ್ಷ ಹನುಮೇಶ ಬಟಾರಿ, ತಾಯಪ್ಪ ಕೊಟ್ಯಾಳ, ರಮೇಶ ಗೋನಾಳ, ಸಿದ್ದು ಹೊಸಳ್ಳಿ, ನಿರುಪಾದೆಪ್ಪ ಮರಳಿ, ಆನಂದ ಹೆಬ್ಬಾಳ, ರವಿಚಂದ್ರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.