ವೈದ್ಯ ವೃತ್ತಿ ಎನ್ನುವದು ಪವಿತ್ರವಾದ ವೃತ್ತಿ, ಅದಕ್ಕೆ ತನ್ನದೇ ಆದ ಗೌರವ ಜವಾಬ್ದಾರಿ ಎಲ್ಲವು ಇದೆ. ವೈದ್ಯರು ಹಗಲು ರಾತ್ರಿಯೆನ್ನದೆ ತಮ್ಮ ಸಂಪೂರ್ಣ ಸಮಯವನ್ನು ರೋಗಿಗಳ ಸೇವೆಗಾಗಿ ಮೀಸಲಿಟ್ಟು ಅವರನ್ನು ಗುಣಪಡಿಸುವಲ್ಲಿ ತೊಡಗಿಸಿಕೊಂಡಿರುತ್ತಾರೆ. ಜುಲೈ 1 ರಾಷ್ಟ್ರೀಯ ವೈದ್ಯರ ದಿನ. ನಮ್ಮ ಆರೋಗ್ಯ ಕಾಪಾಡುವಲ್ಲಿ ನೆರವಾಗುವ ವೈದ್ಯರಿಗೊಂದು ಕೃತಜ್ಞತೆ ಹೇಳುವ ದಿನ. ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ವೈದ್ಯರು ಎಷ್ಟು ಮುಖ್ಯವಾಗಿದ್ದಾರೆ ಎಂಬುದನ್ನು ಈ ಸಂದರ್ಭದಲ್ಲಿ ನಾವು ನೆನೆಯಬೇಕಾಗುತ್ತದೆ.
ಭಾರತದಲ್ಲಿ ಜುಲೈ 1ರಂದು ವೈದ್ಯರ ದಿನಾಚರಣೆಯನ್ನಾಗಿ ಆಚರಿಸುವದರ ಹಿಂದೆ ಹಲವು ಮಹತ್ವದ ಸಂಗತಿಗಳಿವೆ. ಅದು ಮೇಲ್ನೋಟಕ್ಕೆ ಡಾಽಽ ಬಿಧಾನ್ ಚಂದ್ರ ರಾಯ್ ಅವರ ಜನ್ಮದಿನವಾದರೂ ಆ ದಿನವನ್ನು ಆಯ್ಕೆ ಮಾಡಿಕೊಳ್ಳಲು ಹಲವಾರು ಕಾಣರಗಳಿವೆ. ಡಾಽಽ ಬಿದನ್ ಚಂದ್ರ ರಾಯ್ ಅವರು ಸ್ವಾತಂತ್ರ ಹೋರಾಟಗಾರರು ಹಾಗೂ ಮಹಾತ್ಮಾ ಗಾಂಧೀಜಿಯವರ ಖಾಸಗಿ ವೈದ್ಯರೂ ಹೌದು. ಅವರು ಲಂಡನ್‌ನಿಂದ ಎಫ್.ಆರ್.ಸಿ.ಎಸ್. ಹಾಗೂ ಎಂ.ಆರ್.ಸಿ.ಪಿ. ಪದವಿಗಳೆರಡನ್ನೂ ಪಡೆದ ತಜ್ಞ ವೈದ್ಯರು. ಅಲ್ಲದೇ ಇವರು ಅನೇಕ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವದರೊಂದಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಜನಸೇವೆಯೊಂದಿಗೆ ಪ್ರತಿದಿನ ಸುಮಾರು ಎರಡು ಗಂಟೆಗಳ ಕಾಲ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದರು. ನಿತ್ಯ ಈ ಕಾಯಕವನ್ನು ಮುಂದುವರೆಸಿಕೊಂಡು ಬರುವದರ ಜೊತೆಗೆ ಅಧಿಕಾರದ ಅಮಲಿನಲ್ಲಿ ವೃತ್ತಿ ಬದುಕನ್ನು ಎಂದೂ ಮರೆಯಲಿಲ್ಲ. ಆ ಕಾರಣಕ್ಕಾಗಿಯೇ ಡಾಽಽ ಬಿ.ಸಿ.ರಾಯ್ ಅವರ ವ್ಯಕ್ತಿತ್ವ ಸಮಾಜಕ್ಕೆ ಆದರ್ಶವಾಗಿದ್ದೆನ್ನುವದು ಎಲ್ಲರೂ ಒಪ್ಪುವಂತಹ ಮಾತು. ವೈದ್ಯ ವೃತ್ತಿಯಲ್ಲಿ ತಮ್ಮದೇ ಆದ ಮಹತ್ವದ ಸೇವೆ ಸಲ್ಲಿಸಿ ಮಾದರಿಯಾದ ಡಾಽಽ ಬಿ.ಸಿ.ರಾಯ್ ಅವರ ಜನ್ಮ ದಿನ ಜುಲೈ 1ನ್ನು ರಾಷ್ಟ್ರೀಯ ವೈದರ ದಿನವಾಗಿ ಆಚರಣೆ ಮಾಡಲು ನಿರ್ಧರಿಸಲಾಯಿತು.
ಡಾಽಽ ಬಿ.ಸಿ.ರಾಯ್ ಅವರು 1882ರ ಜುಲೈ 1ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದರು. ನಂತರ ಪಾಟ್ನಾ ಹಾಗೂ ಕೋಲ್ಕತ್ತಾಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ ಅವರು ಕೋಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪೂರೈಸಿ, ಕಡಿಮೆ ಅವಧಿಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿಗಳನ್ನು ಪೂರೈಸಿ ಮೊದಲಿಗರಾಗುತ್ತಾರೆ. ನಂತರ ಕೋಲ್ಕತ್ತಾಗೆ ಹಿಂದುರಗಿ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇರಿಕೊಳ್ಳುತ್ತಾರೆ. ಕೆಲವೇ ವರ್ಷಗಳಲ್ಲಿ ಉನ್ನತ ಹುದ್ದೆಗೇರಿ ಕೋಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿ ಆಗುವ ಅವರು ಹತ್ತಾರು ವೈದ್ಯಕೀಯ ಪದ್ಧತಿಯ ಆಸ್ಪತ್ರೆಗಳನ್ನು, ವೈದ್ಯಕೀಯ ಕಾಲೇಜುಗಳನ್ನು ತೆರೆಯುತ್ತಾರೆ. ಅಲ್ಲದೇ ಸಾಮಾನ್ಯ ಜನರಿಗೆ ಕೈಗೆಟುಕುವ ಹಾಗೆ ಸಾರ್ವಜನಿಕ ಆಸ್ಪತ್ರೆಗಳನ್ನು ತೆರೆದು ವೈದ್ಯಕೀಯ ಸೌಲಭ್ಯ ಕಲ್ಪಿಸುತ್ತಾರೆ. 1925ರಲ್ಲಿ ರಾಜಕೀಯ ಪ್ರವೇಶಿಸಿದ ಅವರು 1948ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸತತ 14 ವರ್ಷಗಳ ಸೇವೆಸಲ್ಲಿಸಿದರು. ಪ್ರಸ್ತುತ 2ಲಕ್ಷಕ್ಕೂ ಹೆಚ್ಚು ವೈದ್ಯ ಸದಸ್ಯರನ್ನು ಹೊಂದಿರುವ ಭಾರತೀಯ ವೈದ್ಯಕೀಯ ಸಂಘದ ಸಂಸ್ಥಾಪಕರಾಗಿ ಹಾಗೂ ಮೊದಲ ಅಧ್ಯಕ್ಷರಾಗಿಯೂ ಡಾ.ಬಿ.ಸಿ.ರಾಯ್ ಕಾರ್ಯನಿರ್ವಹಿಸಿದರು. ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ಪ್ರಶಸ್ತಿಯನ್ನು 4ನೆಯ ಫೆಬ್ರುವರಿ 1961ರಲ್ಲಿ ನೀಡಲಾಗುತ್ತದೆ. ಅವರು 1962ರ ಜುಲೈ 1ರ ಬೆಳಿಗ್ಗೆ ರೋಗಿಗಳನ್ನು ನೋಡಿ ಕೆಲಸ ಮಾಡುತ್ತಿದ್ದಾಗಲೇ ಕೊನೆಯುಸಿರೆಳೆದರು. ಅವರು ಜುಲೈ 1ರಂದು ಜನಿಸಿ, ಜುಲೈ 1ರಂದು ಇಹಲೋಕ ತ್ಯಜಿಸಿದ್ದು ವಿಶೇಷ. ಅವರ ನೆನವು ಚಿರವಾಗಿರಲೆಂದೇ ವೈದ್ಯರ ದಿನಾಚರಣೆಯನ್ನು ಅಸ್ತಿತ್ವಕ್ಕೆ ತರಲಾಗಿದೆ.
ಇವತ್ತು ವೈದ್ಯಲೋಕ ಆಗಾಧವಾಗಿ ಬೆಳೆದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಾಣಸಿಗುವ ಆರೋಗ್ಯ ಕೇಂದ್ರದಿಂದ ಆರಂಭವಾಗಿ ಸೂಪರ್ ಸ್ಪೆಷಾಲಿಟಿ, ಹೈಟೆಕ್ ಆಸ್ಪತ್ರೆಗಳು ನಮ್ಮ ದೇಶದಲ್ಲಿವೆ. ಇವತ್ತು ವೈದ್ಯಕೀಯ ಲೋಕವು ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ ಹೊಸ ವೈದ್ಯರು ವೈದ್ಯಕೀಯ ಕ್ಷೇತ್ರವನ್ನು ಪ್ರವೇಶಿಸುತ್ತಲೇ ಇದ್ದಾರೆ. ಇಂದು ಎಂಥ ರೋಗಗಳನ್ನಾದರೂ ಗುಣಪಡಿಸುತ್ತೇವೆ ಎಂಬ ವಿಶ್ವಾಸವು ವೈದ್ಯರಿಗೆ ಬಂದಿದೆ. ವೈದ್ಯಕೀಯ ಶಿಕ್ಷಣವು ಇಂದು ದುಬಾರಿಯಾಗಿದೆ. ಸಾಮಾನ್ಯರಿಗೆ ಕೈಗೆಟುಕದ ಶಿಕ್ಷಣವಾಗಿದೆ. ಆರೋಗ್ಯ ಕ್ಷೇತ್ರವು ಇಂದು ಕವಲುದಾರಿಯಲ್ಲಿದೆ. ನೂರಾರು ಲಕ್ಷ ರೂಪಾಯಿಗಳನ್ನು ಶಿಕ್ಷಣಕ್ಕಾಗಿ ವ್ಯಯಿಸಿದ ವೈದ್ಯರುಗಳಿಗೆ ನೀವು ಸೇವಾ ಮನೋಭಾವದಿಂದ ಕೆಲಸ ಮಾಡಿ ಎಂದು ಹೇಗೆ ತಾನೆ ಹೇಳಲು ಸಾಧ್ಯ? ಸೇವೆ ಮತ್ತು ವ್ಯಾಪಾರದ ನಡುವಿನ ವ್ಯತ್ಯಾಸದ ತಿಳುವಳಿಕೆಯ ಕೊರತೆಯಿಂದ ಸಮಾಜ ಮತ್ತು ವೈದ್ಯರು ಇಂದು ಗೊಂದಲದಲ್ಲಿದ್ದಾರೆ. ವೈದ್ಯಕೀಯ ಸೇವೆಯನ್ನು ಗ್ರಾಹಕ ರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ತಂದಂತಹ ಸರ್ಕಾರವೇ ವೈದ್ಯರನ್ನು ಅಸಹಾಯಕರನ್ನಾಗಿಸಿದೆ. ಇದನ್ನೇ ನೆಪವಾಗಿಸಿಕೊಂಡು ಕೆಲರೋಗಿಗಳು ಮತ್ತು ಸಂಬಂಧಿಕರು ಇಲ್ಲಸಲ್ಲದ ದೂರುಗಳನ್ನು ನೀಡಿ ವೈದ್ಯರುಗಳನ್ನು ಧೃತಿಗೆಡಿಸುತ್ತಿದ್ದಾರೆ. ಕ್ಷುಲಕ ಕಾರಣಗಳಿಗಾಗಿ ವೈದ್ಯರು ವೈದ್ಯಕೀಯ ಸಿಬ್ಬಂದಿ ಮತ್ತು ಆಸ್ಪತ್ರೆಗಳ ಮೇಲಿನ ದೈಹಿಕ ಮತ್ತು ಮಾನಸಿಕ ದಾಳಿಗಳು ನಿಲ್ಲಬೇಕಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈದ್ಯರುಗಳ ಬಗ್ಗೆ ಅವಹೇಳನಕಾರಿ ಬರಹಗಳು ಸಾಮಾನ್ಯವಾಗಿವೆ. ಪ್ರಜ್ಞಾವಂತ ನಾಗರೀಕ ಸಮಾಜ ಇದನ್ನು ವಿರೋಧಿಸಬೇಕು. ಇಂದು ವೈದ್ಯ ಸಮುದಾಯ ಬಯಸುತ್ತಿರುವದು ಭಯ ಮುಕ್ತವಾಗಿ ಕೆಲಸ ಮಾಡುವಂತಹ ವಾತಾವಾರಣ. ಇದನ್ನು ನೀಡುವದು ಸರ್ಕಾರದ ಕರ್ತವ್ಯ.
ರೋಗಿಗಳು ವೈದ್ಯರಿಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು. ವೈದ್ಯರ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಹೇಳಬೇಕು. ಯಾವದೇ ವಿಚಾರವನ್ನು ಸಂಕೋಚವಿಲ್ಲದೆ ಹೇಳಬೇಕು. ತಮ್ಮ ಹಿಂದಿನ ರೋಗಗಳು, ವೈದ್ಯರ ವರದಿಗಳು, ಆಸ್ಪತ್ರೆಯ ಭೇಟಿಗಳನ್ನು ದಿನಾಂಕ್ಕನುಗುಣವಾಗಿ ತೆಗೆದುಕೊಂಡು ಬಂದರೆ ರೋಗದ ಚಿಕಿತ್ಸೆ ಮಾಡಲು ವೈದ್ಯರಿಗೆ ಅನೂಕುಲವಾಗುತ್ತದೆ. ವೈದ್ಯರಲ್ಲಿ ಹಾಗೂ ಅವರು ಅನುಸರಿಸುವ ಪದ್ಧತಿಯಲ್ಲಿ ಆಲೋಪತಿಯಾಗಲಿ, ಆಯುರ್ವೇದವಾಗಲಿ, ಹೋಮಿಯೋಪತಿಯಾಗಲಿ ಸಂಪೂರ್ಣ ನಂಬಿಕೆಯನ್ನಿಡುವದು ಮುಖ್ಯ. ವೈದ್ಯರು ರೋಗಿಗೆ ಬೇಕಾದ ಚಿಕಿತ್ಸೆ ನೀಡುವ ಸ್ವಾತಂತ್ರ ನೀಡಬೇಕಾದುದು ಅತ್ಯಂತ ಅವಶ್ಯಕ.
ಇಂದಿನ ಪ್ರಚಲಿತ ವೈದ್ಯಕೀಯ ವಿದ್ಯಮಾನದಲ್ಲಿ ಬಹುತೇಕ ವೈದ್ಯರು ರೋಗಿಗೆ ರೋಗದ ನಿರ್ಧಾರವಾಗಿದ್ದರೂ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಪ್ರಯೋಗ ಶಾಲೆಯ ಕ್ಷ-ಕಿರಣ, ಸಿಟಿ ಸ್ಕ್ಯಾನ್ ಮುಂತಾದ ಪರೀಕ್ಷೆಗಳ ಮೊರೆ ಹೋಗುತ್ತಾರೆ. ಇತ್ತೀಚಿಗೆ ರೋಗಿಗಳು ಹಾಗೂ ಅವರ ಸಂಬಂಧಿಕರು ಅನೇಕ ಪರೀಕ್ಷೆಗಳನ್ನು ಮಾಡಲು ಒತ್ತಡ ಹೇರುವದು ಸ್ವಾಭಾವಿಕವಾಗಿದೆ.. ಇದು ವೈದ್ಯರಿಗೂ ಅನುಕೂಲವಾಗುತ್ತದೆ ಈ ಎಲ್ಲಾ ಸಂಕೀರ್ಣ ಪರಿಸ್ಥಿತಿಗಳ ಪರಿಣಾಮದಿಂದ ವೈದ್ಯಕೀಯ ವೆಚ್ಚ ಏರುತ್ತಿರುವದಕ್ಕೆ ಕಾರಣವಾಗುತ್ತದೆ. ಬಹುತೇಕ ರೋಗಿಗಳು ವೈದ್ಯಕೀಯ ವೆಚ್ಚದ ಭಾರವನ್ನು ತಡೆದುಕೊಳ್ಳಲು ಶಕ್ತರಾಗಿರುವದಿಲ್ಲ. ಆದ್ದರಿಂದ ವೈದ್ಯರು ವೃತ್ತಿಯ ಆರಂಭದಲ್ಲಿ ತೆಗೆದುಕೊಂಡ ಪ್ರತಿಜ್ಞೆ ನೆನಪಿಸಿಕೊಂಡು, ನ್ಯಾಯಯುತವಾಗಿ ನಡೆಯುತ್ತಿದ್ದೇವೆಯೇ ಎನ್ನುವದನ್ನು ಅರ್ಥಮಾಡಿಕೊಳ್ಳಲು ಇದು ಸಕಾಲ, ವೃತ್ತಿಧರ್ಮ ಮರೆತ ವೈದ್ಯರನ್ನು ಯಾವ ಸಮಾಜವು ನೆನಪಿಸಿಕೊಳ್ಳುವುದಿಲ್ಲ. ಅದೇ ಸ್ನೇಹಿತರಂತೆ ಚಿಕಿತ್ಸೆ ನೀಡುವ ವೈದ್ಯರು ಯಶಸ್ವಿನ ಹಾದಿಯಲ್ಲಿ ಮುನ್ನಡೆಯುತ್ತಾರೆ ಎನ್ನುವದು ಹಿರಿಯ ವೈದ್ಯರ ಅಭಿಪ್ರಾಯ.
ಇತ್ತೀಚಿನ ಕೊರೋನಾ ವೈರಸ್ ನಿಯಂತ್ರಣದ ನಿಟ್ಟಿನಲ್ಲಿ ತಮ್ಮ ಜೀವನವನ್ನೇ ಪಣಕ್ಕಿಟ್ಟು ಹಗಲು ರಾತ್ರಿ ಹೋರಾಡುತ್ತಿರುವ ವೈದ್ಯರುಗಳ ಶ್ರಮ ಮನ ಕರಗಿಸುವಂತಿದೆ. ಮಾನಸಿಕ ಒತ್ತಡಗಳ ನಡುವೆಯೂ ಸಮಾಜದ ಸ್ವಾಸ್ಥ್ಯಕ್ಕಾಗಿ ದುಡಿಯುತ್ತಿರುವ ವೈದ್ಯರುಗಳ ಬಗ್ಗೆ ಹೆಮ್ಮೆಯಿದೆ. ವೈದ್ಯರ ಕೊರತೆಯ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಹೆಚ್ಚಿನ ಒತ್ತಡ ಅನುಭವಿಸುತ್ತಿದ್ದಾರೆ. ವೈದ್ಯರ ರಕ್ಷಣೆಗೆ ಇರುವ ಕಾನೂನುಗಳು ಸರಿಯಾಗಿ ಪಾಲನೆಯಾಗದ ಕಾರಣ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ 9 ವರ್ಷಗಳಲ್ಲಿ 300ಕ್ಕೂ ಹೆಚ್ಚು ವೈದ್ಯರ ಮೇಲೆ ಹಲ್ಲೆಯಾಗಿದ್ದು, ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ. ತಮ್ಮ ರಕ್ಷಣೆಗಾಗಿ ಕಠಿಣ ಕಾನೂನು ಜಾರಿಯಾಗಬೇಕೆಂದು ಒತ್ತಾಯಿಸಿ ವೈದ್ಯರು ಚಿಕಿತ್ಸೆ ನಿಲ್ಲಿಸಿ ಬೀದಿಗಿಳಿದು ಹೋರಾಡಿದ್ದಾರೆ. ಆದರೆ ಜಾರಿಯಾಗಬೇಕಾದ ಕಾನೂನನ್ನು ಮೀರಿ ವೈದ್ಯರು ಮತ್ತು ರೋಗಿಗಳ ನಡುವೆ ನಂಬಿಕೆ ಮೂಡಬೇಕಾಗಿದೆ. ಖ್ಯಾತ ಹಿರಿಯ ವೈದ್ಯ ಎಸ್.ಆರ್. ರಾಮನಗೌಡರು ವೈದ್ಯ ರೋಗಿಯ ವೈರಿಯಲ್ಲ, ಅವನ ಆರೋಗ್ಯಕ್ಕೆ ಸದಾ ಸ್ಪಂದಿಸುವ ಕರುಣಾಮಯಿ. ಅವನು ಯಮದೂತನಲ್ಲ, ಮೃತ್ಯುಂಜಯನೂ ಅಲ್ಲ, ರೋಗಿಯ ಸ್ಥಿತಿ ಉಲ್ಬಣಗೊಂಡು ಮೃತಪಟ್ಟರೆ ಅದಕ್ಕೆ ವೈದ್ಯ ಕಾರಣ ಎಂದು ಆರೋಪಿಸಿ ದಾಂಧಲೆ ಮಾಡುವ ಪ್ರವೃತ್ತಿ ಖಂಡನೀಯ’ ಎಂದು ಖಂಡಿಸುತ್ತಾರೆ.
ಅರೋಗ್ಯ ಶಿಬಿರಗಳಲ್ಲಿ ಮತ್ತು ತಮ್ಮ ಚಿಕಿತ್ಸಾಲಯಗಳಲ್ಲಿ ಎಲೆಯ ಮರೆಯ ಕಾಯಿಗಳಂತೆ ಯಾವದೇ ಪ್ರಚಾರವಿಲ್ಲದೇ ಉಚಿತವಾಗಿ ಸೇವೆ ಸಲ್ಲಿಸುವ ಸಾವಿರಾರು ವೈದ್ಯರುಗಳು ಸಮಾಜದಲ್ಲಿದ್ದಾರೆ. ಇಂಥ ಸೇವಾ ಮನೋಭಾವದ ವೈದ್ಯರಿಗೆ ಕೊರತೆಯಿಲ್ಲ. ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದರೂ ಅದರಲ್ಲಿ ಒಂದಿಬ್ಬರಾದರೂ ವೈದ್ಯರಿಗೆ ಧನ್ಯವಾದ ಹೇಳಿದಾಗ ಸಿಗುವಂತಹ ತೃಪ್ತಿಯೇ ವೈದ್ಯರನ್ನು ಮತ್ತಷ್ಟು ಸೇವೆ ಮಾಡಲು ಪ್ರೇರೇಪಿಸುತ್ತದೆ. ವೈದ್ಯ ವಿಜ್ಞಾನದ ಅವಿಷ್ಕಾರಗಳನ್ನು ‘ಇತಿ-ಮಿತಿ’ ಯನ್ನರಿತು, ‘ಹಿತ-ಮಿತ’ ವಾಗಿ ಉಪಯೋಗಿಸುವ ಹೊಣೆ ವೈದ್ಯಕೀಯ ರಂಗದಲ್ಲಿರುವವರ ಜವಾಬ್ದಾರಿಯಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿರುವದು ಒಂದು ವೃತ್ತಿಯಲ್ಲ. ಬದಲಾಗಿ ಮಾನವೀಯತೆ, ಶ್ರದ್ಧೆ ಹಾಗೂ ಸೇವಾಮನೋಭಾವದ ಸಂಬಂಧವಾಗಿದೆ. ತಾವು ನೋವು ಅನುಭವಿಸುತ್ತಿದ್ದರೂ, ರೋಗಿಯ ನೋವಿಗೆ ಸಾಂತ್ವನ ಹೇಳುವ ವೈದ್ಯರನ್ನು ನೆನೆಯುವ ದಿನ. ನಮ್ಮ ಜೀವ ಉಳಿಸುವ, ಆಪತ್ಭಾಂಧವರಂತೆ ಕಾಪಾಡುವ ವೈದ್ಯರಿಗೆ ಈ ವಿಶೇಷ ದಿನದಂದು ಗುಲಾಬಿ ನೀಡುವದರ ಮೂಲಕ ಶುಭಾಶಯಗಳನ್ನು ಸಲ್ಲಿಸೋಣ.
- ಸುರೇಶ ಗುದಗನವರ
ಧಾರವಾಡ
9449294694
- * * * -