ಹಾವೇರಿ 04: ನಮ್ಮ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಅರ್ಧ ಅಂದರೆ ಮುಕ್ಕೋಟಿ ಜನರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಲುದಾರರಾಗಿದ್ದಾರೆ ಎಂದು ಜಿಲ್ಲಾ ಯೋಜನಾ ನಿರ್ದೇಶಕ ಶಿವರಾಯ ಪ್ರಭು ಹೇಳಿದರು. ಬುಧವಾರ ನಗರದ ಗುರುಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 21.13.84.445 ರೂ ಹಾಗೂ ತಾಲೂಕಿನಲ್ಲಿ 1.62. 10.580 ರೂ ಲಾಭಾಂಶವನ್ನು ವಿತರಿಸಲಾಗಿದೆ. ಮಹಿಳೆಯರಿಂದ ಮಾತ್ರ ಉಳಿತಾಯ, ಆರ್ಥಿಕತೆ ಬೆಳೆಯಲು ಸಾಧ್ಯ. ಪಡೆದ ಲಾಭಾಂಶ ಸದ್ಬಳಕೆಯಾಗಬೇಕು, ಸಂಘಗಳ ವಾರದ ಸಭೆ ಜೀವಾಳವಾದರೆ ನಿರ್ಣಯ ಪುಸ್ತಕ ನಿಮ್ಮ ಆಸ್ತಿ ಇದ್ದಂತೆ. ನಮ್ಮ ಸಂಸ್ಥೆ ಬ್ಯಾಂಕಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸುವುದು ಎಂದು ಶಿವರಾಯ ಪ್ರಭು ಹೇಳಿದರು. ಪ್ರಾದೇಶಿಕ ಕಚೇರಿಯ ಲೆಕ್ಕ ಪರಿಶೋಧಕ ಯೋಜನಾಧಿಕಾರಿ ರಾಘವೇಂದ್ರ ಮಾತನಾಡಿ ಸ್ವಸಹಾಯ ಸಂಘಗಳಿಂದ ಪಡೆದ ಸಾಲ ಮರುಪಾವತಿ, ಪಾರದರ್ಶಕ ವ್ಯವಹಾರ ಪದ್ಧತಿ ಪ್ರತಿಯೊಬ್ಬರು ತಿಳಿದಿರಬೇಕು, ಸಂಘದ ಲಾಭ ಎಲ್ಲ ಸದಸ್ಯರಿಗೂ ದೊರೆಯುವುದು ಎಂದರು. ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ ಮಹಿಳೆಯರ ಆರ್ಥಿಕ ಸಬಲೀಕರಣ ಈ ಯೋಜನೆಯಿಂದ ಸಾಧ್ಯ. ಧರ್ಮಸ್ಥಳ ಸಂಸ್ಥೆ ಒಂದು ವರದಾನವಾಗಿದೆ. ಧರ್ಮಸ್ಥಳ ಪೂಜ್ಯರ ಸಮಾಜಮುಖಿ ಕಾರ್ಯಕ್ರಮಗಳು ಅನುಕರಣೀಯ ಎಂದು ಹೇಳಿದರು. ನಗರಸಭಾ ಸದಸ್ಯೆ ಚೆನ್ನಮ್ಮ ಮಾತನಾಡಿ ಸಮಾಜದ ಉನ್ನತಿ ಅವನತಿ ಮಹಿಳೆ0ುರನ್ನು ಅವಲಂಬಿಸಿದೆ ಎಂದರು. ಮೂಕಾಂಬಿಕಾ, ಮಲ್ಲಿಗೆ, ಮುರುಡೇಶ್ವರ, ಗಣಪತಿ ಹಾಗೂ ರೋಶನಿ ಸಂಘಗಳ ಸದಸ್ಯರಿಗೆ ಲಾಭಾಂಶವನ್ನು ವಿತರಿಸಲಾಯಿತು. ಒಕ್ಕೂಟದ ಶಾಂತಮ್ಮ, ಪ್ಯಾರಿ ಜಾನ್ ಹಾಗೂ ಯೋಜನಾಧಿಕಾರಿ ನಾರಾಯಣ ವೇದಿಕೆಯಲ್ಲಿದ್ದರು.ಮೇಲ್ವಿಚಾರಕಿ ಜಯಶ್ರೀ ಸ್ವಾಗತಿಸಿದರು. ಮೇಲ್ವಿಚಾರಕಿ ಗೀತಾ ನಿರೂಪಿಸಿದರು. ಪುಷ್ಪ ವಂದಿಸಿದರು.