ಕಾರವಾರ, ಏ.24 : ಶಿರಸಿಯ ತೋಟಗಾರಿಕೆ ಇಲಾಖೆಯ ಉಪ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನೂತನ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಪ್ರಥಮ ಸಭೆ ನಾರಾಯಣ ಹೆಗಡೆ ಕರಿಕಲ್ ರವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಸಭೆಯಲ್ಲಿ ಕೃಷಿಕರಿಗಾಗಿ ಕೃಷಿ ಸಂಬಂಧಿತ ವಿವಿಧ ಇಲಾಖೆಗಳಾದ ಕೃಷಿ ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಅರಣ್ಯ ಹಾಗೂ ಕೃಷಿ ಮಾರುಕಟ್ಟೆ ಇಲಾಖೆಗಳ ವಿವಿಧ ಯೋಜನೆಗಳ ಕುರಿತು ಚರ್ಚಿಸಲಾಯಿತು. ಮುಖ್ಯವಾಗಿ ಹವಾಮಾನ ಆಧಾರಿತ ಬೆಳೆ ವಿಮೆ ಜಮಾ ಆಗದಿರುವ ಕುರಿತು ಸಭೆಯಲ್ಲಿ ವಿವರವಾಗಿ ಚರ್ಚಿಸಿ ಈ ಬಗ್ಗೆ ತಕ್ಷಣ ಬೆಳೆ ವಿಮೆ ಬಿಡುಗಡೆ ಕುರಿತು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಕಾಡು ಪ್ರಾಣಿಗಳಿಂದ ಅದರಲ್ಲೂ ಮುಖ್ಯವಾಗಿ ಮಂಗಗಳ ಹಾವಳಿಯಿಂದ ಬೆಳೆ ಹಾನಿ ಸಂಭವಿಸುತ್ತಿದ್ದು ಈ ಬಗ್ಗೆ ಅರಣ್ಯ ಇಲಾಖೆ ಕ್ರಮವಹಿಸಲು ಸಭೆಯಲ್ಲಿ ಒತ್ತಾಯ ಮಾಡಲಾಯಿತು. ಕಬ್ಬಿನ ಬೆಳೆಯನ್ನೂ ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸುವ ಮತ್ತು ಬೆಳೆ ಸಾಲವನ್ನು 5 ಲಕ್ಷದವರೆಗೆ ನೀಡಲು ಕೆ.ಡಿ.ಸಿ.ಸಿ ಬ್ಯಾಂಕಿಗೆ ಸೂಚಿಸಲು ಆಗ್ರಹಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.