ಸಂಬರಗಿ 23: ಗಡಿ ಭಾಗದ ಗ್ರಾಮಗಳಲ್ಲಿ ದಿನ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾಗಿ 40 ಅಂಶಕ್ಕೆ ಏರಿದೆ. ಬಿಸಿಲಿನಿಂದ ತೋಟಪಟ್ಟಿ ವಸತಿಗಳಿಗೆ ನೀರಿನ ಸಮಸ್ಯೆ ಹಾಹಾಕಾರ ಎದ್ದಿದೆ. ಜನರಿಗೆ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದಿದೆ. ತಾಲೂಕಾ ಆಡಳಿತ ಗ್ರಾಮ ಪಂಚಾಯತಿಗೆ ಟ್ಯಾಂಕರ್ ಪ್ರಾರಂಭ ಮಾಡಬೇಕೆಂದು ಸೂಚನೆ ನೀಡಿದ್ದಾರೆ. ಆದರೆ ಪಂಚಾಯತಿಗೆ ಅನುದಾನ ಇಲ್ಲದೆ ಯಾವುದೇ ತೋಟದ ವಸತಿಗಳಿಗೆ ಟ್ಯಾಂಕರ್ ಪ್ರಾರಂಭವಾಗಿಲ್ಲ. ಜನರು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಎದುರಾಗುತ್ತಿದೆ.
ಗಡಿ ಭಾಗದ ಮೂವತ್ತು ಗ್ರಾಮಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದು, ತೆರೆದ ಬಾವಿ ಹಾಗೂ ಕೊಳವೆಬಾವಿ ಬತ್ತಿಹೋಗುತ್ತಿವೆ. ಆ ಕಾರಣದಿಂದ ನೀರಿನ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತಿದೆ. ಈ ಭಾಗದಲ್ಲಿ ಮಳೆ ಇದ್ದರೆ ನೀರು, ಇಲ್ಲವಾದರೆ ಕುಡಿಯಲು ನೀರು ಇಲ್ಲ. ಮಲ್ಟಿವಿಲೇಜ್ ನೀರಿನ ಯೋಜನೆ ಇದ್ದರೂ, ಇಲ್ಲದ ಹಾಗೇ ಆಗಿದೆ. ವಿಶೇಷವಾಗಿ ಮದಬಾವಿ, ಸಂಬರಗಿ, ಜಂಬಗಿ, ಖಿಳೇಗಾಂವ, ಹಣಮಾಪೂರ, ಶಿವನೂರ, ಕಿರಣಗಿ, ಬೆವನೂರ, ಚಮಕೇರಿ, ಬೇಡರಹಟ್ಟಿ ಸೇರಿದಂತಹ ಈ ಭಾಗದಲ್ಲಿ ಇರುವ ಎಲ್ಲ ಗ್ರಾಮಗಳಿಗೆ ಕಳೆದ 15 ದಿನದಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ಕೃಷ್ಣಾ ನದಿಯಲ್ಲಿ ನೀರಿದೆ ಆದರೆ ಮಲ್ಟಿವಿಲೇಜ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ. ಅದರಲ್ಲಿ ತೋಟಪಟ್ಟಿ ಕೊಳವೆಬಾವಿಗಳು ಬತ್ತಿಹೋಗಿದ್ದಾವೆ. ಟ್ಯಾಂಕರ್ ಪ್ರಾರಂಭ ಮಾಡದೇ ಹೋದರೆ ನೀರಿನ ಸಮಸ್ಯೆ ಗಂಭೀರವಾಗುವ ಸಮಸ್ಯೆ ಇದೆ.
ಪ್ರತಿ ವರ್ಷ ಗಡಿ ಭಾಗದ ಕೆಲವೇ ಅಂತರದಿಂದ ಮಹಾರಾಷ್ಟ್ರದಿಂದ ತಾಕಾರಿ-ಮಹಿಷಾಳ ಕಾಲುವೆ ಮುಖಾಂತರ ನೀರನ್ನು ಜತ್ತ, ಸಾಂಗೋಲಾಕ್ಕೆ ಹೋಗುತ್ತದೆ. ಪ್ರತಿ ವರ್ಷ ಮಾನವೀಯತೆ ದೃಷ್ಠಿಯಿಂದ ಅಗ್ರಾಣಿ ನದಿಗೆ ನೀರು ಬಿಟ್ಟು ಕುಡಿಯುವ ನೀರಿನ ಸಮಸ್ಯೆಯನ್ನು ಪರ್ಯಾಗೊಳಿಸುತ್ತಿದ್ದರು. ಆದರೆ ಈ ವರ್ಷ ಅಗ್ರಾಣಿ ನದಿಗೆ ಬಿಟ್ಟಿಲ್ಲ. ಆ ಕಾರಣ ಕೆಲವೆ ಗ್ರಾಮದದಲ್ಲಿ ಹಾಗೂ ಎಲ್ಲ ತೋಟದ ವಸತಿಗಳಿಗೆ ನೀರಿನ ಸಮಸ್ಯೆ ಹೆಚ್ಚಾಗಿದೆ. ತಾಲೂಕಾ ಆಡಳಿತ ಗಮನ ಹರಿಸಿ, ಶೀರ್ಘದಲ್ಲಿ ನೀರಿನ ಸಮಸ್ಯೆಯನ್ನು ಪರ್ಯಾಯ ಗೊಳಿಸಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ. ಇಲ್ಲದೇ ಹೋದರೆ ಜನರು ಬೀದಿಗಿಳಿದು ಹೋರಾಟ ಮಾಡಲು ಸಜ್ಜಾಗಿದ್ದಾರೆ.
ಈ ಕುರಿತು ಮದಬಾವಿ ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವ ಕೋರೆ ಇವರನ್ನು ಸಂಪರ್ಕಿಸಿದಾಗ ತೋಟಪಟ್ಟಿ ವಸತಿಗಳಿಗೆ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಈ ಕುರಿತು ತಾಲೂಕಾ ಆಡಳಿತದ ಗಮನಕ್ಕೆ ತಂದಿದ್ದೇನೆ. ಇನ್ನೂ ತನ ಯಾವುದೇ ಕ್ರಮ ಕೈಗೊಂಡಿಲ್ಲ. ಜನರು, ಜಾನುವಾರುಗಳು ನೀರಿಗಾರಿ ಪರದಾಡುವ ಸ್ಥಿತಿ ಬಂದಿದ್ದು, ಪ್ರತಿ ವರ್ಷಕ್ಕಿಂತ ಈ ವರ್ಷ ನೀರಿನ ಸಮಸ್ಯೆ ಹೆಚ್ಚಾಗಿದೆ.
ತಹಶೀಲ್ದಾರ ಸಿದರಾಯ ಭೋಸಗಿ ಇವರನ್ನು ಸಂಪರ್ಕಿಸಿದಾಗ ಸರ್ಕಾರ ಬರಗಾಲ ಘೋಷಣೆ ಮಾಡಿಲ್ಲ, ಆ ಕಾರಣ ತಾಲೂಕಾ ಅಭಿವೃದ್ಧಿಗೆ ಟ್ಯಾಂಕರ್ ಪ್ರಾರಂಭ ಮಾಡಲು ಮೇಲಾಧಿಕಾರಿಳಿಗೆ ಯಾವುದೇ ಸೂಚನೆ ಇಲ್ಲ. ಈ ಕುರಿತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸಭೆ ಕರೆದು ಗ್ರಾಮ ಪಂಚಾಯತಿಯ ವತಿಯಿಂದ ನೀರಿನ ಟ್ಯಾಂಕರ್ ಪ್ರಾರಂಭ ಮಾಡಬೇಕೆಂದು ಸೂಚನೆ ನೀಡಲಾಗಿದೆ.
ಗ್ರಾಮ ಪಂಚಾಯತಿಗೆ ಅನುದಾನದ ಕೊರತೆಯಿಂದ ಟ್ಯಾಂಕರ್ ಪ್ರಾರಂಭ ಮಾಡಲು ಅಭಿವೃದ್ಧಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಯಾವುದೇ ತೋಟದ ವಸತಿ ಗ್ರಾಮಗಳಿಗೆ ಟ್ಯಾಂಕರ್ ಪ್ರಾರಂಭವಿಲ್ಲ. ಅಧಿಕಾರಿಗಳು ಮೇಲಾಧಿಕಾರಿಗಳ ಮುಂದೆ ಒಪ್ಪಿ, ನೀರಿನ ಸಮಸ್ಯೆ ಇಲ್ಲ ಎಂದು ಹೇಳಿಕೊಂಡು ಜಾರಿಕೊಳ್ಳುತ್ತಿದ್ದಾರೆ.