ಲೋಕದರ್ಶನ ವರದಿ
ಗಡಿನಾಡಿನಲ್ಲಿ ಕನ್ನಡ ಜಾಗೃತಿ, ಸಾಂಸ್ಕೃತಿಕ ಸಂಭ್ರಮ
ಕನ್ನಡ ಅತ್ಯಂತ ಶ್ರೀಮಂತ ಭಾಷೆ: ಡಾ. ಗುರುಲಿಂಗಪ್ಪಾ ದಬಾಲೆ
ಕಾಗವಾಡ 24: ಕನ್ನಡ ನಾಡಿನ ಸಾಹಿತ್ಯ ಅದರ ಐತಿಹಾಸಿಕ ಅಸ್ಮಿತೆ ಕಾವೇರಿಯಿಂದ ನರ್ವದಾ ನದಿಯ ವರೆಗೆ ಹಬ್ಬಿದ್ದು, ಕದಂಬರು, ಶಾತವಾಹಣರ ಕಾಲದಿಂದ ಎರಡೂವರೆ ಸಾವಿರ ವರ್ಷಗಳ ಇತಿಹಾಸದೊಂದಿಗೆ ಕನ್ನಡ ಭಾಷೆ ಶ್ರೀಮಂತಿಕೆಯನ್ನು ಹೊಂದಿದೆ. ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆಯೆಂದು ಮಹಾರಾಷ್ಟ್ರದ ಅಕ್ಕಲಕೋಟದ ಹಿರಿಯ ವಿದ್ವಾಂಸ ಡಾ. ಗುರುಲಿಂಗಪ್ಪಾ ದಬಾಲೆ ಹೇಳಿದ್ದಾರೆ.
ಅವರು ಗುರುವಾರ ದಿ. 24 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ಕರ್ನಾಟಕ ಗಡಿ ಪ್ರದೇಶ ಅಭಿವೃಧ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಶಿವಾನಂದ ಮಹಾವಿದ್ಯಾಲಯ ಕಾಗವಾಡ ಇವರ ಸಹಯೋಗದಲ್ಲಿ ಗಡಿನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಗಡಿನಾಡಿನಲ್ಲಿ ಕನ್ನಡ ಉಳಿದರೆ ಮಾತ್ರ ಒಳನಾಡಿನಲ್ಲಿ ಕನ್ನಡ ಉಳಿಯಲು ಸಾಧ್ಯ. ಕನ್ನಡಭಾಷೆ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಕನ್ನಡದ ಗಡಿ ದಾಟಿಯೂ ಉಳಿಸಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ವಹಿಸಿ, ಮಾತನಾಡುತ್ತ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಕನ್ನಡ ಉಳಿಸಿ-ಬೆಳೆಸಲು ಅಘಾದವಾದ ಪ್ರಯತ್ನ ಮಾಡಬೇಕು. ನಮ್ಮತನ ನಮ್ಮ ಪ್ರಾದೇಶಿಕತೆಯನ್ನು ನಾವೇ ಸಮೃಧ್ಧಗೊಳಿಸಬೇಕಾಗಿದೆ. ಕ್ರಿ.ಶ. 11 ನೇ ಶತಮಾನದ ವರೆಗೆ ಕನ್ನಡಿಗರೆ ಕನ್ನಡದ ರಾಜ್ಯವನ್ನು ಆಳಿದ್ದಾರೆ. ಇವತ್ತು ನಾವು ನಮ್ಮ ಭಾಷಾ ಸಮೃಧ್ಧಿಯನ್ನು ಕಾಯ್ದುಕೊಂಡು ಶ್ರೀಮಂತರಾಗಬೇಕಾಗಿದೆ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ ರಾಜೇಶ ಬುರ್ಲಿ ಮಾತನಾಡಿದರು. ಸಾನಿಧ್ಯವನ್ನು ಸಂಸ್ಥೆಯ ಏಕನ್ಯಾಸಧಾರಿ ಯತೀಶ್ವರಾನಂದ ಸ್ವಾಮೀಜಿ ವಹಿಸಿ, ಆಶಿರ್ವಚಿಸಿದರು.
ಬಿಇಓ. ಎಂ. ಆರ್. ಮುಂಜೆ, ಸಿಡಿಪಿಓ ಸಂಜೀವಕುಮಾರ ಸದಲಗೆ, ಪ್ರೊ. ಬಿ.ಎ. ಪಾಟೀಲ, ಮೇ.ವ್ಹಿ.ಎಸ್. ತುಗಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷ ಡಾ. ಸಿದ್ಧಗೌಡ ಕಾಗೆ, ಜ್ಯೋತಿಕುಮಾರ ಪಾಟೀಲ ಸೇರಿದಂತೆ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು, ಧಾರವಾಡದ ಸಾಹಿತ್ಯಾಭಿಮಾನಿಗಳು, ಕಾಲೆಜೀನ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಗಡಿನಾಡಿನ ಸಮಸ್ತ ಕನ್ನಡಿಗರು, ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಡಾ. ಎಸ್.ಎ. ಕರ್ಕಿ ಸ್ವಾಗತಿಸಿದರು. ವಿದ್ಯಾರ್ಥಿನಿಯರು ನಾಡಗೀತೆ ಮತ್ತು ಕನ್ನಡದ ಗೀತೆ ಹಾಡಿದರು. ಪ್ರೊ. ಎಸ್.ಎಸ್. ಫಡತರೆ ನಿರೂಪಿಸಿದರು. ಪ್ರೊ. ಚಂದ್ರಶೇಖರ ವೈ. ವಂದಿಸಿದರು