ಕೊಪ್ಪಳ 23: ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಮಾಡಿದ ಸ್ವತಃ ತಂದೆಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ ರೂ. 80,000 ಗಳ ದಂಡವನ್ನು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ (ಪೋಕ್ಸೊ) ನ್ಯಾಯಾಲಯವು ವಿಧಿಸಿದೆ.
ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ವೆಂಕಟಾಪುರ ಗ್ರಾಮ ನಿವಾಸಿ ಯಂಕಪ್ಪ ತಂದೆ ಕ್ಯಾರ ಹನುಮಂತ ಗೊಲ್ಲರ ಇತನು ಸುಮಾರು 1 ವರ್ಷದ ಹಿಂದೆ ತನ್ನ ಅಪ್ರಾಪ್ತ ವಯಸ್ಸಿನ ಮಗಳಿಗೆ ದನ ಮೇಯಿಸಲು ವೆಂಕಟಾಪುರ ಮತ್ತು ಹೊಸೂರ ಸೀಮಾದಲ್ಲಿರುವ ಗುಡ್ಡಕ್ಕೆ ಕರೆದುಕೊಂಡು ಹೋದ ಸಮಯದಲ್ಲಿ ಕುಡಿದ ಅಮಲಿನಲ್ಲಿ ಹೆದರಿಸಿ ಮಗಳ ಮೇಲೆ ಅತ್ಯಾಚಾರ ಮಾಡಿ, ವಿಷಯವನ್ನು ಯಾರಿಗಾದರೂ ಹೇಳಿದರೆ ಸಾಯಿಸುವುದಾಗಿ ಹೆದರಿಸಿದ್ದು ನಂತರದಲ್ಲಿ ದಿ: 18-06-2020 ರಂದು ಗಂಗಾವತಿ ತಾಲೂಕಿನ ಡಗ್ಗಿ ಸೀಮಾದಲ್ಲಿ ಬಾಧಿತಳಿಗೆ ಹೊಟ್ಟೆ ನೋವು ಕಾಣಿಸಿದ್ದರಿಂದ ಗಂಗಾವತಿಯ ಸಿ.ಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದಾಗ ದಿ: 19-06-2020 ರಂದು ಬಾಧಿತಳಿಗೆ ಗಂಡು ಮಗು ಜನಿಸಿದ್ದು ಇರುತ್ತದೆ. ಈ ಆರೋಪದ ಹಿನ್ನೆಲೆಯಲ್ಲಿ ಕೊಪ್ಪಳ ಗ್ರಾಮೀಣ ಪೋಲಿಸರು ದೂರು ಸ್ವೀಕರಿಸಿ, ಅಂದಿನ ಪಿಎಸ್‌ಐ ಸುರೇಶ ಡಿ. ಅವರು ಈ ಪ್ರಕರಣದ ಪ್ರಥಮ ಹಂತದ ತನಿಖೆಯನ್ನು ನಿರ್ವಹಿಸಿ ಮುಂದಿನ ತನಿಖೆಯನ್ನು ಅಂದಿನ ಕೊಪ್ಪಳ ಸಿಪಿಐ ರವಿ ಉಕ್ಕುಂದ ಅವರು ನಿರ್ವಹಿಸಿ, ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣವು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ (ಪೋಕ್ಸೊ) ನ್ಯಾಯಾಲಯ ಸ್ಪೇ.ಎಸ್‌ಸಿ(ಪೋಕ್ಸೊ) ಸಂ: 38/2020ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಆರೋಪಿ ಯಂಕಪ್ಪ ತಂದೆ ಕ್ಯಾರ ಹನುಮಂತಗೊಲ್ಲರ ಸಾ: ವೆಂಕಟಾಪುರ ಇತನ ಮೇಲಿನ ಆರೋಪಣೆಗಳು ಸಾಭೀತಾಗಿದ್ದರಿಂದ ಆರೋಪಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ ರೂ. 80,000 ಗಳ ದಂಡವನ್ನು ಭರಿಸುವಂತೆ ಆದೇಶಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ (ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ ಡಿ.ಕೆ. ಅವರು ದಿ: 17-04-2025 ರಂದು ತೀರ್ಪು ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ಎಲ್. ದೇಸಾಯಿ ಅವರು ಈ ಪ್ರಕರಣ ನಡೆಸಿ ವಾದ ಮಂಡಿಸಿದ್ದರು. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಎನ್.ಮಂಜುನಾಥ ಸಿಪಿಸಿ-558 ಇವರು ಸಕಾಲಕ್ಕೆ ಸಾಕ್ಷಿದಾರರನ್ನು ನ್ಯಾಯಾಲಯದ ಮುಂದೆ ಹಾಜರಪಡಿಸುವಲ್ಲಿ ಸಹಕರಿಸಿರುತ್ತಾರೆ ಎಂದು ಹೆಚ್ದುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರ (ಪೋಕ್ಸೊ) ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.