ಕೆ.ಎಲ್.ಇ ವಿದ್ಯಾರ್ಥಿಗಳಿಗೆ ಸಸಿ ವಿತರಣೆ

ಮಾಂಜರಿ 03: ಒಂದು ಮರ  ಒಬ್ಬ ವಿದ್ಯಾರ್ಥಿ  ಯೋಜನೆಯ ಅಂಗವಾಗಿ ಚಿಕ್ಕೋಡಿ ತಾಲುಕಿನ ಅಂಕಲಿ ಗ್ರಾಮದಲ್ಲಿರುವ ಕೆ.ಎಲ್.ಇ. ಅಂಗ ಸಂಸ್ಥೆಗಳಲ್ಲಿ ಸಸಿಗಳನ್ನು  ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಹಾಗೂ ದುಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಮಲ್ಲಿಕಾರ್ಜುನ  ಗ. ಕೋರೆಯವರು ಉಪಸ್ಥಿತಿಯಲ್ಲಿ ವಿತರಿಸಲಾಯಿತು. 

ಇಂದು ಪ್ರಕೃತಿ ಮನುಷ್ಯನ ಬದುಕಿಗೆ ಏನೆಲ್ಲಾ ಕೊಟ್ಟಿದೆ. ಆದರೆ ಮನುಷ್ಯ ಮಾತ್ರ ತನ್ನ ಸ್ವಾರ್ಥಕ್ಕೆ ಪರಿಸರದ ಮೇಲೆ ದಾಳಿ ಮಾಡುತ್ತಿದ್ದಾನೆ. ನಾವು ಪರಿಸರವನ್ನು ಮಗುವನ್ನು ರಕ್ಷಿಸುವಂತೆ ಪರಿಸರವನ್ನು ರಕ್ಷಿಸಬೇಕಾಗಿದೆ. ಇಂದಿನ ದಿನಮಾನಗಳಲ್ಲಿ ವಾಯುಮಾಲಿನ್ಯ, ಪ್ಲಾಸ್ಟಿಕ್ ಬಳಕೆಯಿಂದಾಗಿ ನಮ್ಮ ಪರಿಸರವು ಕಲುಷಿತಗೊಂಡು ಮನುಷ್ಯ ಬದುಕಲು ಅಸಾಧ್ಯವಾಗಿ ಮಾನವನ ಸರ್ವನಾಶದ ಸ್ಥಿತಿ ಕಣ್ಣೆದುರಿಗೆ ಗೋಚರಿಸುವಂತಾಗಿದೆ. ಭವಿಷ್ಯತ್ತಿನ ದಿನಗಳಲ್ಲಿ ನಾವು ಪರಿಸರವನ್ನು ನಮ್ಮ ವ್ಯವಸ್ಥೆಯ ಭಾಗವನ್ನಾಗಿ ಮಾಡಬೇಕು. ತಂತ್ರಜ್ಞಾನ ಮತ್ತು ವಿಜ್ಞಾನದ ಬೆಳವಣಿಗೆಗೆ ಅವಕಾಶ ನೀಡುವುದರ ಜೊತೆಗೆ ಪರಿಸರದ ಜೊತೆಗಿನ ಸಾಮರಸ್ಯವನ್ನು ಕಾಪಾಡುವುದು ನಮ್ಮ ಧ್ಯೇಯವಾಗಬೇಕು ಎಂದು ಅವರು ಹೇಳಿದರು. ಈ ವೆಳೆ ಕೆ.ಎಲ್.ಇ. ಅಂಗ ಸಂಸ್ಥೆಗಳಲ್ಲಿ ಒಂದು ಮರ  ಒಬ್ಬ ವಿದ್ಯಾರ್ಥಿ  ಯೋಜನೆಯ ಅಂಗವಾಗಿ ಸಸಿ ವಿತರಿಸಲಾಯಿತು. ಸರಕಾರದ ಆದೇಶದನ್ವಯ ಕೆ.ಎಲ್.ಇ. ಅಂಗಸಂಸ್ಥೆಗಳಾದ ಎಸ್.ಸಿ. ಪಾಟೀಲ ಪ್ರಾಥಮಿಕ ಶಾಲೆ,  ಎಸ್.ಎಸ್.ಕೆ. ಪ್ರೌಢ ಶಾಲೆ, ಎಸ್.ಎಸ್.ಕೆ. ಪದವಿಪೂರ್ವ ಮಹಾವಿದ್ಯಾಲಯ ಮತ್ತು ಪದವಿ ಮಹಾವಿದ್ಯಾಲಯಗಳಲ್ಲಿ ಸುಮಾರು 1000 ವಿದ್ಯಾರ್ಥಿಗಳಿಗೆ ಸಸಿ ವಿತರಿಸಲಾಯಿತು.ಅತೀಥಿಗಳಾಗಿ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಸನ್ಮಾನ್ಯ ಮಲ್ಲಿಕಾರ್ಜುನ  ಗ. ಕೋರೆಯವರು ಆಗಮಿಸಿದ್ದರು. ಮರಗಳು ಮನುಕುಲದ ಜೀವನಾಡಿಗಳು, ಮರಗಳನ್ನು ಬೆಳೆಸಿ ಪರಿಸರ ರಕ್ಷಿಸಬೇಕೆಂದು ಅತಿಥಿಗಳು ಉತ್ತೇಜಿಸಿದರು. 

ಕಾರ್ಯಕ್ರಮದಲ್ಲಿ ನಾಲ್ಕೂ ಅಂಗ ಸಂಸ್ಥೆಯ ಮುಖ್ಯಸ್ಥರಾದ ಪ್ರೊ. ಆರ್.ಸಿ. ಪಾಟೀಲ, ಜೆ.ಎಸ್. ತಮಗೊಂಡ, ಬಿ.ಎಸ್. ಅಂಬಿ, ಪ್ರೊ. ಎಸ್.ಎಸ್. ಕೋಠಿವಾಲೆ ಹಾಗೂ ಹಿರಿಯ ಬೋಧಕರಾದ ಕೆ.ಬಿ. ಶಿಂಧೆ, ಸಿ.ಬಿ. ಚೌಗುಲೆಯವರನ್ನೊಳಗೊಂಡಂತೆ ಅಂಗಸಂಸ್ಥೆಯ ಎಲ್ಲ ಬೋಧಕ ಬೋಧಕೇತರ ಸಿಬ್ಬಂಧಿ ಹಾಜರಿದ್ದರು. ಕಾರ್ಯಕ್ರಮ ಯಶಸ್ವಿಗೊಂಡಿತು.