ಲೋಕದರ್ಶನ ವರದಿ
ಕಕ್ಕೇರಿ 12: ಖಾನಾಪೂರ ತಾಲೂಕು ಬಹುಪಾಲು ಕಾಡು ಮೇಡುಗಳ ದುರ್ಗಮ ಪ್ರದೇಶವಾಗಿದೆ.ಕಾಡಂಚಿನ ಭಾಗದ ಜನರು ಮೂಲಸೌಕರ್ಯ ವಂಚಿತರಾಗಿ ಬದುಕಲು ಪರದಾಡುವ ಸ್ಥಿತಿ ಇದೆ.ಪ್ರವಾಹ ಬಂದು ಹೋದರೂ 3-4 ತಿಂಗಳುಗಳ ಕಾಲ ಅವರು ಜೀವನದ ಮುಖ್ಯವಾಹಿನಿಗೆ ಬರದೇ ಸಂಕಷ್ಟ ಪಡುವಂತಾಗಿದೆ.ವಯಸ್ಸಾದವರು,ಮಹಿಳೆಯರು,ಚಿಕ್ಕ ಮಕ್ಕಳು,ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿ, ಬದುಕ ಸಾಗಿಸಲು ಹೆಣಗಾಡುವಂತಾಗಿದೆ.ಬಡ ಗರ್ಭಿಣಿಯರನ್ನು ನಾಲ್ಕು ಕಾಲಿನ ಹೊರಸಿನ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿಸಿ ಹೆರಿಗೆ ಮಾಡಿಸಿದ ಪ್ರಸಂಗಗಳು ನಡೆದಿವೆ.
ಕಾಡಂಚಿನ ಸುಮಾರು ಹತ್ತು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಹಳೆಯ ಕಾಲು ದಾರಿಗಳಲ್ಲಿಯೇ ಫುಟ್ ಬ್ರಿಜ್ ಗಳ ನಿರ್ಮಾಣ ಕಲ್ಪಿಸಲು ಮುಂದಾದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಮೇಲೆ ಅರಣ್ಯ ಇಲಾಖೆಯವರು ಕೇಸ್ ದಾಖಲಿಸಿ,ಅಡ್ಡಿ ಪಡಿಸಿರುವ ಪ್ರಸಂಗ ನಡೆದಿದೆ.ಇದರಿಂದಾಗಿ ನದಿ,ಹಳ್ಳ-ಕೊಳ್ಳಗಳಾಚಿನ ಗ್ರಾಮಸ್ಥರನ್ನು ಪ್ರವಾಹ ಪರಿಸ್ಥಿತಿಯಿಂದ ಹೊರತರಲಾಗದೇ ಶಾಸಕಿಯಾದ ನಾನು ಪರದಾಡುವಂತಾಗಿದೆ.ಅವರ ಕಣ್ಣೀರು ಒರೆಸಲು ಸಾಧ್ಯವಾಗುತ್ತಿಲ್ಲ. ತಕ್ಷಣವೇ ಮುಖ್ಯ ಮಂತ್ರಿಗಳು ಖಾನಾಪೂರ ತಾಲೂಕಿನ ಸಮಸ್ಯೆಗಳಿಗೆ ಸ್ಪಂದಿಸಿ ಅನುದಾನ ಬಿಡುಗಡೆಗೊಳಿಸಬೇಕು ಎಂದು ಶಾಸಕಿ ಡಾ.ಅಂಜಲಿ ಹೇಮಂತ ನಿಂಬಾಳಕರ ಅವರು ತಾಲೂಕಿನ ಅಭಿವೃದ್ಧಿಗಾಗಿ ಸದನದಲ್ಲಿ ಧ್ವನಿ ಎತ್ತಿದರು. ಶುಕ್ರವಾರ ಅಧಿವೇಶನದ ವೇಳೆ ವಿಧಾನ ಸೌಧದಲ್ಲಿ ಸಡೆದ ಕಾರ್ಯ ಕಲಾಪಗಳ ಚರ್ಚೆಯಲ್ಲಿ ಭಾಗವಹಿಸಿದ ಶಾಸಕಿ ಡಾ.ಅಂಜಲಿ ನಿಂಬಾಳಕರ ಖಾನಾಪೂರ ತಾಲೂಕಿನ ಸಮಸ್ಯೆಗಳ ಕುರಿತು ನೈಜ ಚಿತ್ರಣ ನೀಡಿ ಸದನದ ಗಮನ ಸೆಳೆದರು.
ತಾಲೂಕಿನ ಜನರಿಗೆ ಈ ಸನ್ನಿವೇಶ ಮುಖದ ಮೇಲೆ ಮಂದಹಾಸ ಮೂಡಿಸಿ, ಅಭಿವೃದ್ಧಿಯ ಕನಸು ನನಸಾಗುವ ಆಸೆಗಣ್ಣಿನಿಂದ ಶಾಸಕಿಯತ್ತ ನೋಡುವಂತಾಗಿದೆ.