ಮುಂಡಗೋಡ, 29 : ಇಲ್ಲಿಯ ಪಟ್ಟಣ ಪಂಚಾಯತ ಸಭಾಭವನದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣದಲ್ಲಿ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷಗಳಿಂದ ಗಟಾರ್ ಸ್ವಚ್ಛ ಇಲ್ಲದೆ ತ್ಯಾಜ್ಯ ತುಂಬಿಕೊಂಡಿವೆ. ಈ ಕೂಡಲೇ ಎಲ್ಲಾ ವಾರ್ಡಿನ ಗಟರಗಳನ್ನು ಸ್ವಚ್ಛ ಗೊಳಿಸುವಂತೆ ಪ.ಪಂ ಸದಸ್ಯರು ವಿಶ್ವನಾಥ್ ಪವಾರಶೆಟ್ಟರ್ ಆಗ್ರಹಿಸಿದರು.
ಪಟ್ಟಣದ ವಾರದ ಸಂತೆ ಮಾರುಕಟ್ಟೆ ಹರಾಜು ಗುತ್ತಿಗೆ ಪಡೆದವರಿಂದ ತಕ್ಷಣ ಶೇ. 25 ರಷ್ಟು ಮುಂಗಡ ಹಣ ಪಾವತಿಸಿಕೊಳ್ಳಬೇಕು ಅಥವಾ ಸಂತೆ ಮಾರುಕಟ್ಟೆಯ ಟೆಂಡರ್ ಹೊಸದಾಗಿ ಕರೆಯಬೇಕೆಂದು ಪ.ಪಂ ಸದಸ್ಯರು ಒತ್ತಾಯಿಸಿದರು. ಪಟ್ಟಣ ವ್ಯಾಪ್ತಿಯ ಕಂಬಾರಗಟ್ಟಿ, ಗಾಂಧಿನಗರ, ಲಮಾಣಿ ತಾಂಡ, ಅಂಬೇಡ್ಕರ್ ಓಣಿಯ ವಾರ್ಡ್‌ಗಳಿಗೆ ಸ್ಲಂ ಬೋರ್ಡ್ ನೀಡಿದ ಖಾತೆಯೆಸರಿನಲ್ಲಿ ಹಕ್ಕು ಪತ್ರ ವಿತರಿಸಿದಂತೆ ಆ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕು ಎಂದು ಠರಾವಿಸಲಾಯಿತು. ಪಟ್ಟಣದ ಆನಂದ ನಗರ ,ಗಣೇಶ ನಗರ ಹಾಗೂ ಇಂದಿರಾನಗರ ಗಳಲ್ಲಿ ಮನೆಗಳಿಗೆ ನಲ್ಲಿಗಳ ಮೂಲಕ ಬರುವ ನೀರು ಕೆಟ್ಟ ವಾಸನೆಯಿಂದ ಕೂಡಿರುತ್ತದೆ ಇದಕ್ಕೆ ಆದಷ್ಟು ಬೇಗ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.
ಪ.ಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಸುಬ್ಬಾಯವರ, ಶ್ರೀಕಾಂತ ಸಾನು, ಫಣಿರಾಜ ಹದಳಗಿ, ಅಶೋಕ ಚಲವಾದಿ, ಮಹ್ಮದಗೌಸ ಮಖಾಂದಾರ, ರಜಾ ಪಠಾಣ, ಮಂಜುನಾಥ ಹರಲಕರ, ಶೇಖರ ಲಮಾಣಿ, ನಿರ್ಮಲಾ ಬೆಂಡ್ಲಗಟ್ಟಿ, ಕುಸುಮಾ ಹಾವಣಗಿ, ಶಕುಂತಲಾ ನಾಯಕ, ಸುವರ್ಣ ಕೊಟಗೊಣಸಿ, ಜೈನು ಬೆಂಡಿಗೇರಿ, ಇಂಜಿನಿಯರ ಗಣೇಶ ಭಟ್ ಮುಂತಾದವರು ಉಪಸ್ಥಿತರಿದ್ದರು.