ಲೋಕದರ್ಶನ ವರದಿ
ಬ್ಯಾಡಗಿ: ಪಟ್ಟಣದ ದೈವೀವನದ ಬಳಿ ಜಿಂಕೆ ಬೇಟೆಗೆ ಹೊಂಚು ಹಾಕಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾದ ಘಟನೆ ಶನಿವಾರ ಸಂಜೆ ನಡೆದಿದೆ.
ಕಳೆದೆರಡು ದಿನಗಳ ಹಿಂದಷ್ಟೇ ಜಿಂಕೆಯೊಂದನ್ನು ಕೊಂದು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ಬೆನ್ನಲ್ಲೇ ಅದೇ ಪ್ರದೇಶದ ಸುತ್ತಮುತ್ತಲ ಜಾಗದಲ್ಲಿ ಇದೀಗ ಇನ್ನೊಬ್ಬ ಜಿಂಕೆ ಕಳ್ಳನನ್ನು ಬಂಧಿಸಿರುವುದು ಸಾರ್ವಜನಿಕರಲ್ಲಿ ಆತಂಕದ ಛಾಯೆ ಮೂಡುವಂತೆ ಮಾಡಿದೆ. ಆರೋಪಿ ಹಾವೇರಿ ತಾಲೂಕಿನ ಕುರಬಗೊಂಡ ಗ್ರಾಮದ ಮುತ್ತಪ್ಪ ಬಸವರಾಜಪ್ಪ ವಡ್ಡರ (37) ಎಂದು ಗುತರ್ಿಸಲಾಗಿದ್ದು ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ, ಜಿಂಕೆ ಸೇರಿದಂತೆ ಇನ್ನಿತರ ಕಾಡುಪ್ರಾಣಿಗಳನ್ನು ಹಿಡಿಯಲು ಬಳಕೆ ಮಾಡಲಾಗುತ್ತದೆ ಎನ್ನಲಾದ ಬಲೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ, ಆರೋಪಿಯು ಬಲೆಯನ್ನು ಬೀಸಿ ಕುಳಿತಿದ್ದ ಸಮಯವನ್ನು ನೋಡಿ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಯು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನೊಬ್ಬ ಪರಾರಿ:ಕಾಡುಬೆಕ್ಕು, ಕೌಜುಗ, ಜಿಂಕೆ ಸೇರಿದಂತೆ ಅಪರೂಪದ ಪಕ್ಷಿಗಳನ್ನು ಬೇಟೆಯಾಡುತ್ತಿದ್ದು, ಅವುಗಳ ಮಾಂಸವನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದು ಕಳೆದ ಹಲವಾರು ವರ್ಷಗಳಿಂದ ಇದೇ ವೃತ್ತಿಗಿಳಿದಿದ್ದು ಇಂದೂ ಸಹ ಇನ್ನೊಬ್ಬ ಸಹಚರನೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗಿ ವಿಚಾರಣೆ ಸಮಯದಲ್ಲಿ ಅರಣ್ಯಾಧಿಕಾರಿಗಳ ಎದುರು ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ, ಆದರೆ ಇನ್ನೊಬ್ಬ ಸಹಚರ ಪರಾರಿ ಯಾಗಿದ್ದು ಆರೋಪಿಯಿಂದ ಮಾಹಿತಿ ಪಡೆದುಕೊಂಡ ಅಧಿಕಾರಿಗಳು ಆತನಿಗಾಗಿಯೂ ವ್ಯಾಪಕ ಬಲೆ ಬೀಸಿದ್ದಾರೆ.
ವ್ಯವಸ್ಥಿತ ಜಾಲವಿರುವುದಾಗಿ ಶಂಕೆ: ಮಹಾನಗರಗಳಲ್ಲಿರುವ ಶ್ರೀಮಂತ ಕುಟುಂಬಗಳು ಜಿಂಕೆ ಮಾಂಸವನ್ನು ಅಪೇಕ್ಷಿಸುತ್ತಿದ್ದು ಹೀಗಾಗಿ ಇದಕ್ಕೆ ವ್ಯಾಪಕ ಬೇಡಿಕೆಯಿದೆ, ಹಣದಾಸೆ ಗಾಗಿ ನಿರುದ್ಯೋಗಿ ಯುವಕರು ಜಿಂಕೆ ಬೇಟೆಗೆ ಮುಂದಾಗುತ್ತಿದ್ದು ಇಂತಹದ್ದೊಂದು ವ್ಯವಸ್ಥಿತ ಜಾಲವಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ಅರಣ್ಯ ಇಲಾಖೆ ಸಿಬ್ಬಂದಿಯು ಅರಣ್ಯ ಪ್ರದೇಶದ ಸುತ್ತಮುತ್ತಲೂ ತೀವ್ರ ನಿಗಾ ವಹಿಸಿದ್ದಾರೆ.
ಎ.ಸಿ.ಎಫ್.ಅಶೋಕ ಗೊಂಡೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿ ಮಹೇಶ ಮರೆಣ್ಣನವರ ಅರಣ್ಯ ಇಲಾಖೆಯ ಬೇಟೆ ಪ್ರಕರಣ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಎಂ.ಎಂ ಪೂಜಾರ, ವಸಂತ ಪಾಟೀಲ, ಅರಣ್ಯ ರಕ್ಷಕರಾದ ನಾಗರಾಜ ಮಣ್ಣೆಣ್ಣನವರ, ಜಗದೀಶ ದಿವಟರ, ಗಣೇಶ ಬೊಮ್ಮನಹಳ್ಳಿ, ಭರತ ಪಾಸಿ, ವೀಕ್ಷಕರಾದ ಎಮ್.ಎ.ಇಟಗಿ, ಬಿ.ಎಮ್.ಮಳ್ಳಳ್ಳಿ ಇನ್ನಿತತರು ಇದ್ದರು.