ಖಾಲಿ ಇರುವ ವೈದ್ಯರ ಹುದ್ದೆ ಎರಡು ತಿಂಗಳಲ್ಲಿ ಭರ್ತಿ: ಆರೋಗ್ಯ ಸಚಿವ ಬಿ.ಶ್ರೀರಾಮುಲು

ಬೆಂಗಳೂರು, ಮಾ.12, ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿರುವ ವೈದ್ಯರ ಕೊರತೆಯನ್ನು ಎರಡು ತಿಂಗಳಲ್ಲಿ ಭರ್ತಿ ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದ್ದಾರೆ.ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಎ.ಟಿ.ರಾಮಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ರಾಜ್ಯದ ಜನಸಂಖ್ಯೆಯ ಶೇಕಡಾ 60ರಷ್ಟು ಮಂದಿ ಸರ್ಕಾರಿ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ. ತಾವು ಕೂಡ ಜಿಲ್ಲೆಗೆ ಭೇಟಿ ನೀಡಿದಾಗ ಆಸ್ಪತ್ರೆಗಳಲ್ಲೇ ವಾಸ್ತವ್ಯ ಹೂಡಿ ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿಯ ಸಮಸ್ಯೆಗಳನ್ನು ಆಲಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.ತಮಗೂ ಬಡವರ ಬಗ್ಗೆ ಕಳಕಳಿಯಿದೆ. ಖಾಸಗಿ ಆಸ್ಪತ್ರೆಯ ಮಾದರಿಯಲ್ಲಿ ಸರ್ಕಾರಿ ಆಸ್ಪತ್ರೆ ಇರಬೇಕು ಎಂಬುದು ತಮ್ಮ ಉದ್ದೇಶವಾಗಿದೆ. ರಾಜ್ಯದಲ್ಲಿ 2359 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 1437 ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿದ್ದಾರೆ. 236 ಆಯುಷ್ ವೈದ್ಯರು ಕೆಲಸ ನಿರ್ವಹಿಸುತ್ತಿದ್ದಾರೆ. ಒಟ್ಟು 2000 ವೈದ್ಯರ ಕೊರತೆ ಇದ್ದು, ಅದನ್ನು ಇನ್ನೆರಡು ತಿಂಗಳಲ್ಲಿ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.ಈ ಮೊದಲು ವೈದ್ಯರ ನೇಮಕಾತಿ ಲೋಕಸೇವಾ ಆಯೋಗದ ಮೂಲಕ ನಡೆಯುತ್ತಿತ್ತು. ಆದರೆ ಈ ಪ್ರಕ್ರಿಯೆ ವಿಳಂಬವಾಗುತ್ತಿದ್ದುದರಿಂದ ಇದನ್ನು ರದ್ದುಪಡಿಸಿ ನೇರ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವೈದ್ಯರ ನೇಮಕಾತಿ ಆಗದಿದ್ದುದಕ್ಕೆ ತಮ್ಮ ಮೇಲೆ ಸಿಟ್ಟಾಗಿದ್ದರು. ಆದ್ದರಿಂದ ತಾವು ಕೂಡ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಈಗಾಗಲೇ 800 ನರ್ಸ್ಗಳ ನೇಮಕಾತಿ ಆಗಿದೆ. 2 ತಿಂಗಳೊಳಗೆ ವೈದ್ಯರ ನೇಮಕಾತಿಯೂ ಆಗಲಿದೆ ಎಂದರು.ಇದಕ್ಕೂಮೊದಲು ಎ.ಟಿ.ರಾಮಸ್ವಾಮಿ ಮಾತನಾಡಿ, ಎಲ್ಲಾ ಸೇವೆಗಿಂತ ಆರೋಗ್ಯ ಸೇವೆ ಮುಖ್ಯವಾದುದು. ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ವಸತಿ ಗೃಹಗಳು ಶಿಥಿಲಗೊಂಡಿವೆ. ಜಿಲ್ಲಾಧಿಕಾರಿಯವರು ನೇರ ನೇಮಕಾತಿ ಮಾಡಿಕೊಂಡ ವೈದ್ಯರು ಎರಡೇ ತಿಂಗಳೊಳಗೆ ಬೇರೆಡೆ ಹೋಗುತ್ತಿದ್ದಾರೆ. ಆದ್ದರಿಂದ ಖಾಯಂ ಆಗಿ ವೈದ್ಯರನ್ನು ನೇಮಿಸಿ ಎಂದರು.ಮಾಜಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ಈ ಎಲ್ಲಾ ಸಮಸ್ಯೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ವೈದ್ಯರ ನಡುವಿನ ವೇತನ ತಾರತಮ್ಯವೇ ಕಾರಣ. ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಹೆಚ್ಚಿನ ವೇತನ ಇದೆ. ಆದ್ದರಿಂದ ವೈದ್ಯರು ಅಲ್ಲಿಗೆ ವರ್ಗಾ ಆಗುತ್ತಿದ್ದಾರೆ. ಆದ್ದರಿಂದ ಈ ವೇತನ ತಾರತಮ್ಯವನ್ನು ಸರಿಪಡಿಸಿ. ತಾವು ಸಚಿವರಾಗಿದ್ದಾಗ ಈ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದರು.800 ನರ್ಸ್ಗಳ ನೇಮಕಾತಿ ತಾವು ಆರೋಗ್ಯ ಸಚಿವರಾಗಿದ್ದಾಗ ನಡೆದಿತ್ತು. ಈಗ ನಡೆದ ನೇಮಕಾತಿ ಅಲ್ಲ ಎಂದು ಸ್ಪಷ್ಟಪಡಿಸಿದರು.ಪರಮೇಶ್ವರ್ ನಾಯ್ಕ್ ಮಾತನಾಡಿ, ಆದಷ್ಟು ಬೇಗ ವೈದ್ಯರ ನೇಮಕಾತಿ ಮಾಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.