ಬೆಂಗಳೂರು,ಫೆ.15: ವೈದ್ಯರು ಕೇವಲ ಹಣ ಸಂಪಾದನೆಗೆಂದು ತಮ್ಮ ವೃತ್ತಿಯನ್ನು ಮೀಸಲಿಡದೆ, ಹಣ ಸಂಪಾದನೆಗಿಂತ ಹೆಚ್ಚಿನದಾಗಿ ನಾವು ರೋಗಿಗಳ ವಿಶ್ವಾಸ ಗಳಿಸಿಕೊಳ್ಳಬೇಕು. ಜೊತೆಗೆ ಮಾನವೀಯ ಮೌಲ್ಯಗಳನ್ನು ಅರ್ಥೈಸಿಕೊಂಡು ವೃತ್ತಿ ನಿರ್ವಹಿಸಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಬೆಂಗಳೂರು ಮೆಡಿಕಲ್ ಕಾಲೇಜ್‌ನ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳ ಜೊತೆಗೆ ಅರ್ಹತಾ ಪತ್ರಗಳನ್ನು ವಿತರಿಸಿ ಅವರು, ಮಾತನಾಡಿದರು. ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಒಂದೊಂದು ವೈದ್ಯಕೀಯ ಕಾಲೇಜು ತೆರೆಯುವ ಇರಾದೆ ಹೊಂದಿದ್ದು, ನಾನು ನೂತನ ವೈದ್ಯಕೀಯ ಶಿಕ್ಷಣ ಸಚಿವನಾಗಿ ಕೆಲ ನಿಯಮಗಳನ್ನು ಹೊಸದಾಗಿ ಜಾರಿಗೆ ತರಲು ಇಚ್ಛಿಸಿದ್ದೇನೆ. ಯಾವ ವೈದ್ಯರು ನಗರವನ್ನು ಬಿಟ್ಟು ಹಳ್ಳಿಗಾಡಿನ ಕಡೆ ಮುಖ ಮಾಡಿ, ಅಲ್ಲಿನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೋ ಅಂತಹ ವೈದ್ಯರಿಗೆ
ಸರ್ಕಾರದ ವತಿಯಿಂದ ವಿಶೇಷ ಪ್ರೋತ್ಸಾಹ ಸಿಗುವ ಹಾಗೇ ಮಾಡುತ್ತೇನೆ ಎಂದರು.
ದೇಶದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಬೆಂಗಳೂರು ಮೆಡಿಕಲ್ ಕಾಲೇಜು, ದೇಶದ ಗಮನ ಮಾತ್ರವಲ್ಲದೇ, ಇಡೀ ವಿಶ್ವದ ಗಮನ ಸೆಳೆದಿದೆ ಎಂದು ಉಲ್ಲೇಖಿಸಿದರು.
ವೈದ್ಯರು ತಮ್ಮ ವೃತ್ತಿಯನ್ನು ಹಣ ಸಂಪಾದನೆಗೆ ಮೀಸಲಿಡದೆ ಜನ ಸೇವೆ ಮಾಡಬೇಕು. ರೋಗಿಗಳ ವಿಶ್ವಾಸ ಗಳಿಸಿಕೊಳ್ಳಬೇಕು. ಯಾವ ವೈದ್ಯ ರೋಗಿಯ ವಿಶ್ವಾಸ ಗಳಿಸುತ್ತಾನೋ, ಆಗ ರೋಗಿ ಬದುಕಿರುವವರೆಗೂ ಅದೇ ವೈದ್ಯನನ್ನು ಹುಡುಕಿಕೊಂಡು ಬರುತ್ತಾನೆ. ತಾನು ಯಾರಿಗೂ ಹೇಳದ ಅದೆಷ್ಟೋ ವೈಯಕ್ತಿಕ ವಿಚಾರಗಳನ್ನು ವೈದ್ಯರ ಬಳಿ ಹೇಳಿಕೊಂಡು, ತನಗೆ ಇರುವ ಕಾಯಿಲೆಯಿಂದ ಗುಣಮುಖನಾಗುತ್ತಾನೆ. ನಾವೆಲ್ಲರೂ, ರೋಗಿಗಳ ವಿಶ್ವಾಸ ಗಳಿಸುವತ್ತಾ ನಿಗಾವಹಿಸಬೇಕು ಎಂದು ಹೇಳಿದರು.
ಯೋಗ ವಿಜ್ಞಾನದ ಬಗ್ಗೆ ಮಾತನ್ನಾಡಿದ ಸಚಿವರು, ಭಾರತೀಯರು ಪುರಾತನವಾದ ಯೋಗಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತೇವೆ. ನಮ್ಮಲ್ಲಿ ಯೋಗಾಭ್ಯಾಸದಿಂದಲೇ ಹಲವು ಕಾಯಿಲೆಗಳು ಬಗೆಹರಿಯುತ್ತದೆ. ಇಂದು ನಮ್ಮ ದೇಶದಲ್ಲಿ ಮಾತ್ರವಲ್ಲದೇ, ಇಡೀ ವಿಶ್ವ ಯೋಗ ವಿಜ್ಞಾನದತ್ತ ಮುಖ ಮಾಡಿರುವುದು ನಮ್ಮ ಸಾಧನೆ. ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಿಂದ ಪ್ರತಿ ಬಡ ಕುಟುಂಬವು ಇಂದು 5 ಲಕ್ಷದವರೆಗೆ ವಿಮೆ ಪಡೆಯುವ ಮೂಲಕ ರೋಗಗಳಿಂದ ಮುಕ್ತಿ ಹೊಂದುತ್ತಿದೆ. ಕೇಂದ್ರ ಸರ್ಕಾರದ ಜೊತೆಗೆ ರಾಜ್ಯವು ಕೂಡ ಸಶಕ್ತ ಭಾರತ ನಿರ್ಮಿಸುವ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದೆ ಎಂದರು.
ಈ ಸಂದರ್ಭದಲ್ಲಿ ಲೇಖಕಿ ಹಾಗೂ ಇನ್ಫೋಸಿಸ್ ಸಂಸ್ಥೆಯ ಡಾ.ಸುಧಾಮೂರ್ತಿ, ಕಾಲೇಜಿನ ಡೀನ್ ಹಾಗೂ ಪ್ರಾಂಶುಪಾಲರು ಉಪಸ್ಥಿತರಿದ್ದರು.