ಮುನಿರತ್ನ ಪ್ರಕರಣದಲ್ಲಿ ಡಿಕೆಶಿ ನೇರ ಕೈವಾಡ: ರಮೇಶ ಜಾರಕಿಹೊಳಿ ಆರೋಪ

ಅಥಣಿ 16: ಮುನಿರತ್ನ ಪ್ರಕರಣದಲ್ಲಿ ಸೀಡಿ ಶಿವು ಎಂದೇ ಕುಖ್ಯಾತ ಡಿ.ಕೆ. ಶಿವುಕುಮಾರನ ನೇರ ಕೈವಾಡ ಅಥವಾ ಷಡ್ಯಂತ್ರ ಇದ್ದು, ಇಂತಹ ದ್ವೇಷದ ರಾಜಕೀಯವನ್ನು ನಿಯಂತ್ರಿಸದೇ ಹೋದಲ್ಲಿ ಡಿ.ಕೆ ಬ್ರದರ್ಸಗಳ ಕುತಂತ್ರಕ್ಕೆ ವಿರೋಧ ಪಕ್ಷದ ಶಾಸಕರಷ್ಟೇ ಅಲ್ಲ ಕಾಂಗ್ರೆಸ್ ಪಕ್ಷದ ಶಾಸಕರೂ ಕೂಡ ಬಲಿಯಾಗುವುದು ನಿಶ್ಚಿತ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.  

ಮುನಿರತ್ನ ಪ್ರಕರಣದಲ್ಲಿ ಡಿ.ಕೆ.ಶಿವುಕುಮಾರ, ಡಿ.ಕೆ.ಸುರೇಶ ಮತ್ತು ಕಾಂಗ್ರೆಸ್ ನಾಯಕಿ ಕುಸುಮಾ ಮುಖ್ಯ ಪಾತ್ರಧಾರಿಗಳಾಗಿದ್ದು, ಈ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿದಲ್ಲಿ ಡಿ.ಕೆ.ಬ್ರದರ್ಸ ಕೈವಾಡ ಬಹಿರಂಗವಾಗಲಿದೆ ಎಂದ ಅವರು ಇದೇ ಡಿ.ಕೆ. ಬ್ರದರ್ಸ ಮೊದಲು ಸಿಡಿ ಪ್ರಕರಣದಲ್ಲಿ ನನ್ನನ್ನು ನಂತರ ದೇವೆಗೌಡರ ಕುಟುಂಬ ಈಗ ಮುನಿರತ್ನನನ್ನು ಬಲಿ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.     ರಾಜ್ಯದಲ್ಲಿ ನಡೆಯುತ್ತಿರುವ ದ್ವೇಷ ರಾಜಕಾರಣಕ್ಕೆ ಅಂತ್ಯ ಹಾಡಲೇ ಬೇಕು. ಇದಕ್ಕಾಗಿ ಎಲ್ಲರೂ ಒಂದಾಗಿ ಹೋರಾಟ ಮಾಡಬೇಕಿದೆ ಎಂದ ಅವರು ಡಿ.ಕೆ.ಶಿವಕುಮಾರ ನಾಯಕನೇ ಅಲ್ಲ ಮೊದಲಿನಿಂದಲೂ ಹೊಂದಾಣಿಕೆ ರಾಜಕೀಯ ಮಾಡುತ್ತಲೇ ಆಯ್ಕೆ ಆಗಿದ್ದಾರೆ. ಇದೇ ಪ್ರಥಮ ಬಾರಿಗೆ ಹೊಂದಾಣಿಕೆ ಇಲ್ಲದೆ ಚುನಾವಣೆ ನಡೆದ ಪರಿಣಾಮವೇ ಡಿ.ಕೆ.ಸುರೇಶ ಸುಮಾರು 2 ಲಕ್ಷ ಮತಗಳ ಅಂತರದಿಂದ ಪರಾಭವಗೊಂಡರು ಎಂದರು. ವಾಲ್ಮೀಕಿ ಹಗರಣ ಮೂಡಾ ಹಗರಣಕ್ಕಿಂತ ದೊಡ್ಡದು. ಆದರೆ ರಾಜ್ಯದ ನಾಯಕರು ಮೂಡಾ ಹಗರಣವನ್ನೇ ದೊಡ್ಡದು ಮಾಡಿದರು. ಇದರ ಜೊತೆಗೆ ವಾಲ್ಮೀಕಿ ಹಗರಣಕ್ಕೂ ಮಹತ್ವ ನೀಡಬೇಕು ಎನ್ನುವುದೇ ನಮ್ಮ ಅಭಿಪ್ರಾಯವಾಗಿತ್ತು ಹೊರತು ಪಕ್ಷದ ವಿರೋಧಿಗಳಲ್ಲ ಎಂದ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ನಾಯಕತ್ವವನ್ನು ನಾವು ಒಪ್ಪುವುದಿಲ್ಲ. ಇದೇ ವಿಜಯೇಂದ್ರನಿಂದಲೇ ಬಿಜೆಪಿಗೆ ಭ್ರಷ್ಟ ಪಟ್ಟ ಬಂದಿದ್ದು, ಒಪ್ಪಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟ ಪಡಿಸಿದರು.       ಬಿ.ಎಸ್‌.ಯಡಿಯುರ​‍್ಪ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ ಅವರ ಬಗ್ಗೆ ಈ ಹಿಂದಿನಂತೆ ಈಗಲೂ ಗೌರವ ಇದೆ. ಆದರೆ ಅವರಿಗೆ ವಯಸ್ಸಾಗಿದ್ದರಿಂದ ಪಕ್ಷದ ಸಂಘಟನೆಯಲ್ಲಿ ನೇರವಾಗಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ ಎಂದ ಅವರು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಅಥಣಿ, ಕಾಗವಾಡ, ಕುಡಚಿ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕಿದೆ ಇದಕ್ಕಾಗಿ ಪಕ್ಷದ ಸಂಘಟನೆ ಮಾಡುತ್ತಿರುವೆ ಎಂದು ಹೇಳಿದರು.   

ಮಾಜಿ ಸಚಿವ ಶ್ರೀಮಂತ ಪಾಟೀಲ, ಶಾಸಕ ಮಹೇಶ ಕುಮಠಳ್ಳಿ, ಬಿಜೆಪಿ ಧುರೀಣರಾದ ಅಪ್ಪಾಸಾಹೇಬ ಅವತಾಡೆ, ಗೀರೀಶ ಬುಟಾಳಿ, ರವಿ ಪೂಜಾರಿ, ಮಲ್ಲಿಕಾರ್ಜುನ ಅಂದಾನಿ, ನಾನಾಸಾಹೇಬ ಅವತಾಡೆ, ಅಶೋಕ ಯಲ್ಲಡಗಿ, ಪ್ರಕಾಶ ಚನ್ನಣ್ಷವರ, ಕುಮಾರ ಪಡಸಲಗಿ, ರಾವಸಾಬ ಬಿಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.