ಬೆಂಬಲ ಬೆಲೆ ಯೋಜನೆಯಡಿ ಜೋಳ ಉತ್ಪನ್ನ ಖರೀದಿ ಕೇಂದ್ರ ಆರಂಭಿಸಲು ಡಿಸಿ ಸೂಚನೆ

DC orders to start a procurement center for Jowar products under the support price scheme

ಹಾವೇರಿ.ಮಾ.21: ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ಜೋಳ ಉತ್ಪನ್ನ ಖರೀದಿ ಕೇಂದ್ರಗಳನ್ನು ಜಿಲ್ಲೆಯ ಏಳು ತಾಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ಟಾಸ್ಕ್‌ಫೋರ್ಸ್‌ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ನಿಗಧಿಪಡಿಸಿದ ಬೆಂಬಲ ಬೆಲೆ ಹಾಗೂ ಮಾರ್ಗಸೂಚಿ ಅನ್ವಯ ಎಫ್‌.ಎ.ಕ್ಯೂ ಗುಣಮಟ್ಟದ ಜೋಳ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. 

ಬೆಂಬಲ ಬೆಲೆ: ಬಿಳಿಜೋಳ (ಮಾಲ್ದಂಡಿ) ಪ್ರತಿ ಕ್ವಿಂಟಲ್‌ಗೆ ರೂ.3,421 ಹಾಗೂ  ಜೋಳ (ಹೈಬ್ರಿಡ್) ಪ್ರತಿ ಕ್ವಿಂಟಾಲ್‌ಗೆ ರೂ.3,371 ರಂತೆ ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ.  ಮಾರ್ಚ್‌ 25 ರಿಂದ   ರೈತರ ನೋಂದಣಿ ಆರಂಭಿಸಿ, ದಿನಾಂಕ 01-04-2025 ರಿಂದ ದಿ.31-05-2025ರವರೆಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ನಿಯಮಿತ ಸಂಸ್ಥೆಯ ಮೂಲಕ  ಜೋಳ ಖರೀದಿಗೆ ಕ್ರಮವಹಿಸುವಂತೆ ಸೂಚನೆ ನೀಡಿದರು. 

ಖರೀದಿ ಕೇಂದ್ರ: ಜೋಳ ಖರೀದಿ ಕೇಂದ್ರಗಳನ್ನು  ಹಾವೇರಿ,  ರಾಣೇಬೆನ್ನೂರು, ಬ್ಯಾಡಗಿ, ಹಿರೇಕೆರೂರು, ಹಾನಗಲ್, ಸವಣೂರ ಹಾಗೂ ಶಿಗ್ಗಾಂವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲ್ಲಿ ತೆರೆಯಲು ಸೂಚಿಸಿದರು.. 

ಬೆಂಬಲ ಬೆಲೆಯಡಿ  ಜೋಳವನ್ನು ಪ್ರತಿ ರೈತರಿಂದ ಜೋಳದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 20 ಕ್ವಿಂಟಲ್‌ನಂತೆ  ಗರಿಷ್ಠ 150 ಕ್ವಿಂಟಲ್ ಜೋಳ ಖರೀದಿಗೆ ಅವಕಾಶವಿದೆ.  ಜೋಳ ಖರೀದಿ  ಮೊತ್ತವನ್ನು ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ  ಹಣ ಜಮೆ ಮಾಡಬೇಕು ಎಂದು ಸಲಹೆ ನೀಡಿದರು.   

ನೋಡಲ್ ಅಧಿಕಾರಿಗಳ ನೇಮಕ: ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳ ಪ್ರಕ್ರಿಯೆ ಮೇಲೆ ನಿಗಾ ವಹಿಸಲು ಆಯಾ ತಾಲೂಕಿನ ತಹಶೀಲ್ದಾರ ಅವರನ್ನು ತಾಲೂಕು ನೋಡಲ್ ಅಧಿಕಾರಿಯಾಗಿ ಹಾಗೂ  ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರನ್ನು  ಜಿಲ್ಲಾ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.  

ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳ ಮುಂದೆ ಬ್ಯಾನರ್ ಅಳವಡಿಕೆ, ಕರಪತ್ರ  ಮೂಲಕ ಖರೀದಿ ಕೇಂದ್ರಗಳ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು  ಹಾಗೂ ಖರೀದಿಸುವ ಜೋಳ ದಾಸ್ತಾನು ಮಾಡಲು ಗೋದಾಮುಗಳನ್ನು  ಕಾಯ್ದಿರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಕೃಷಿ ಜಂಟಿ ನಿರ್ದೇಶಕರು ಅವರು ಮಾತನಾಡಿ,  ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ  ಹಾವೇರಿ ತಾಲೂಕಿನಲ್ಲಿ 7695 ಹೆ., ರಾಣೇಬೆನ್ನೂರು-12,022 ಹೆ., ಹಾನಗಲ್‌-3,105 ಹೆ., ಬ್ಯಾಡಗಿ-7,270 ಹೆ., ಸವಣೂರ-7,902 ಹೆ. ಹಾಗೂ ಶಿಗ್ಗಾಂವ-6,923, ಹಿರೇಕೆರೂರು-2,760 ಹಾಗೂ ರಟ್ಟಿಹಳ್ಳಿ ತಾಲೂಕಿನಲ್ಲಿ 2,548 ಹೆಕ್ಟೇರ್ ಸೇರಿ  50,225 ಹೆಕ್ಟೇರ್ ಪ್ರದೇಶದಲ್ಲಿ ಜೋಳ  ಬೆಳೆಯಲಾಗಿದೆ  ಎಂದು ಸಭೆಗೆ ಮಾಹಿತಿ ನೀಡಿದರು. 

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಸಹಕಾರಿ ಸಂಘಗಳ ಉಪನಿಬಂಧಕರು,  ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಶಾಖಾ ವ್ಯವಸ್ಥಾಪಕರು, ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.