ರಾಯಬಾಗ 21: ತಾಲೂಕಿನ ಭೆಂಡವಾಡ ಗ್ರಾಮದಲ್ಲಿರುವ ಗ್ರಾಮ ಪಂಚಾಯತಿ ಕಾರ್ಯಾಲಯದ ಪಕ್ಕದಲ್ಲಿಯೇ ಇರುವ ಆಶ್ರಯ ಕಾಲಿನಿ (ನವಗ್ರಾಮ) ಯಲ್ಲಿ ಸರಿಯಾಗಿ ರಸ್ತೆಗಳು ಇಲ್ಲದೇ, ಚರಂಡಿ ಸ್ವಚ್ಛತೆ ಇಲ್ಲದೇ ಮತ್ತು ಕುಡಿಯುವ ನೀರು ಇಲ್ಲದೇ ಮೂಲಭೂತ ಸೌಕರ‌್ಯಗಳಿಂದ ಇಲ್ಲಿನ ಜನರು ವಂಚಿತರಾಗಿದ್ದಾರೆ.
ಗ್ರಾಮ ಪಂಚಾಯತಿ ಕಾರ್ಯಾಲಯದ ಸುತ್ತಮುತ್ತ ಇರುವ ಆಶ್ರಯ ಕಾಲಿನಿಯಲ್ಲಿ ಸುಮಾರು 100ಕ್ಕಿಂತ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದರೂ, ಇಲ್ಲಿನ ಪಂಚಾಯತಿಯವರು ಮಾತ್ರ ಇಲ್ಲಿನ ಜನರಿಗೆ ನೀರಿನ ಸೌಲಭ್ಯ ಕಲ್ಪಿಸಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಈಗ ತೀವ್ರಗತಿಯಲ್ಲಿ ಬೇಸಿಗೆ ಪ್ರಾರಂಭವಾಗಿದ್ದು ಇಲ್ಲಿನ ಜನರು ಕುಡಿಯಲು ಮತ್ತು ದನಕರುಗಳಿಗೆ ನೀರು ಬೇಕಾದರೆ ಸುಮಾರು 1 ಕಿ.ಮೀ. ದೂರಿನಿಂದ ತೋಟಪಟ್ಟಿಗಳಲ್ಲಿ ತಿರುಗಾಡಿ ನೀರು ತರುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಇಲ್ಲಿ ಹೆಚ್ಚಿನ ಕುಟುಂಬಗಳು ದಲಿತ ವರ್ಗಕ್ಕೆ ಸೇರಿದ್ದು, ಅವರು ನಿತ್ಯ ಕೂಲಿ ಮಾಡಿ ತಮ್ಮ ಜೀವನ ಸಾಗಿಸಬೇಕಾಗಿರುವುದು ಅನಿವಾರ್ಯ ಇದೆ. ಈಗ ಕೂಲಿ ಕೆಲಸಗಳನ್ನು ಬಿಟ್ಟು ನಿತ್ಯ ನೀರಿಗಾಗಿ ಹೆಚ್ಚಿನ ಸಮಯ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಮನೆಯಲ್ಲಿರುವ ಮಹಿಳೆಯರು ಮತ್ತು ಮಕ್ಕಳು ಕೂಡ ಬೀಸೀಲಿನಲ್ಲಿ ನೀರಿಗಾಗಿ ಅಲೆಯುವುದು ತಪ್ಪಿಲ್ಲ.
ನೀರಿಗಾಗಿ ಪಂಚಾಯತಿಯವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ, ಪ್ರತಿಭಟನೆ ನಡೆಸಿದರೂ ಯಾವುದೇ ಅಧಿಕಾರಿಗಳಾಗಲಿ ಇತ್ತ ತಿರುಗಿ ನೋಡುತ್ತಿಲ್ಲವೇಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಮಗೆ 15 ದಿನಗಳಿಗೆ, ತಿಂಗಳಿಗೆ ಒಮ್ಮೆ ರಾತ್ರಿ ವೇಳೆಯಲ್ಲಿ ನೀರು ಬಿಡುತ್ತಿರುವುದರಿಂದ ತುಂಬ ತೊಂದರೆಯಾಗುತ್ತಿದೆ. ನೀರು ಇಲ್ಲದೇ ಇರುವುದರಿಂದ ಜಾನುವಾರುಗಳನ್ನು ಮಾರಾಟ ಮಾಡುವ ಪರಿಸ್ಥಿತಿ ಉಂಟಾಗಿದೆ. ನಿತ್ಯ ಬಳಕೆಗೆ ನೀರು ಇಲ್ಲದೇ ಇರುವುದರಿಂದ ಅಡುಗೆ ಮಾಡಲು, ಸ್ನಾನ ಮಾಡಲು, ಬಟ್ಟೆ ತೊಳೆಯಲು ನೀರು ಅಭಾವದಿಂದ ಪರದಾಡುವಂತೆ ಆಗಿದೆ” ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಮಾಲಾ ಕಿರಣಗಿ, ಮಹಾದೇವಿ ನಾವ್ಹಿ, ಚಂದ್ರಿಕಾ ಡಂಗ, ಇಂದ್ರಿಕಾ ನಂದಿಬಿಸೆ, ಪದ್ಮಾವತಿ ತಳವಾರ, ರೇಣುಕಾ ಪೂಜೇರಿ, ಶಿಲ್ಪಾ ಈರಗಾರ, ಕೆಂಪವ್ವ ಪುಜೇರಿ, ಶಾಂತವ್ವ ಜೋಗಿ, ಶೈಲಾ ಪಾತ್ರೋಟ ಸೇರಿದಂತೆ ನಿವಾಸಿಗಳು ಖಾಲಿ ಬಿಂದಿಗೆಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.