ಮಾದಕ ದ್ರವ್ಯ ಕಡಿವಾಣಕ್ಕೆ ಜಾಗೃತಿಯೊಂದಿಗೆ ಪರೀಕ್ಷೆಗೊಳಪಡಿಸಲು ಡಿಸಿ ಟಿ.ಭೂಬಾಲನ್ ಸೂಚನೆ

DC T. Bhoobalan instructs to conduct tests with awareness to curb drug abuse

ವಿಜಯಪುರ,ಮಾ.29 : ಮಾದಕ ದ್ರವ್ಯಗಳ ಕಡಿವಾಣಕ್ಕೆ ಸಾರ್ವಜನಿಕರಲ್ಲಿ ಸೂಕ್ತ ಜಾಗೃತಿಯೊಂದಿಗೆ ಮಾದಕ ದ್ರವ್ಯ ಸೇವಿಸುವವರನ್ನು ಪರೀಕ್ಷೆಗೊಳಪಡಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.  

ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಾದಕ ದ್ರವ್ಯಗಳ ನಿರ್ಮೂಲನಾ ಸಮಿತಿ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಕಡಿವಾಣಕ್ಕಾಗಿ ಮಾದಕ ದ್ರವ್ಯಗಳ ಸೇವನೆಯಿಂದ ಜನರ ಆರೋಗ್ಯ ಮೇಲೆ ಬೀರುವ ದುಷ್ಪರಿಣಾಮಗಳ ಜಾಗೃತಿ ಜೊತೆಗೆ ಮಾದಕ ವಸ್ತು- ದ್ರವ್ಯ ಸೇವನೆಗೊಳಗಾದವರಿಗೆ ಪರೀಕ್ಷೆ ನಡೆಸಲು ಕ್ರಮ ವಹಿಸಬೇಕು. ಇದರಿಂದ ಜನರಲ್ಲಿ ಅತಿಯಾಗಿ ಜಾಗೃತಿ ಮೂಡುವುದರೊಂದಿಗೆ ಭಯದಿಂದ ಮಾದಕ ವಸ್ತುಗಳ ಬಳಕೆ ಪ್ರಮಾಣ ತಗ್ಗಲು ಸಹಕಾರಿಯಾಗಲಿರುವುದರಿಂದ ಮಾದಕ ದ್ರವ್ಯ ಸೇವನೆಗೊಳಗಾದವರನ್ನು  ಪರೀಕ್ಷೆಗೆ ಕ್ರಮ ವಹಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.   

ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಕಡಿವಾಣಕ್ಕೆ ಸಂಬಂಧಿಸಿದ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಕಳ್ಳಭಟ್ಟಿ ಸರಾಯಿ ತಯಾರಿಕೆ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಕ್ರಮ ಸಾರಾಯಿ ತಯಾರಿಕೆ ಸ್ಥಳಗಳ ಮೇಲೆ ಅನಿರಿಕ್ಷಿತವಾಗಿ ದಾಳಿ ನಡೆಸಿ, ಕಳ್ಳಭಟ್ಟಿ ಸರಾಯಿ ಕಡಿವಾಣಕ್ಕೆ ಕ್ರಮ ವಹಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು.  

ಮಾದಕ ದ್ರವ್ಯ ನಿರ್ಮೂಲನೆಗೆ ಸಂಬಂಧಿಸಿದ ಇಲಾಖೆಗಳ ಸಹಯೋಗ ಅಗತ್ಯವಾಗಿದ್ದು, ಅಬಕಾರಿ ಇಲಾಖೆ ತಮ್ಮ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ಮಾರಾಟ-ಸಂಗ್ರಹಣೆ ಬಗ್ಗೆ ತೀವ್ರ ನಿಗಾ ಇಡಬೇಕು. ಮಾದಕ ದ್ರವ್ಯ ಬೆಳೆಯುವಂತಹ ಸಸಿ, ಗಿಡಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ನಿಗಾ ಇರಿಸಿ ಕ್ರಮ ವಹಿಸಬೇಕು. ಓಷಧ ನಿಯಂತ್ರಕ ಇಲಾಖೆ ಅಧಿಕಾರಿಗಳು, ಓಷಧ ಮಳಿಗೆಗಳಲ್ಲಿ ಕಡ್ಡಾಯವಾಗಿ ಡಾಕ್ಟರ್ ಅನುಮತಿ ಪತ್ರ ಪಡೆದು ಓಷಧಿ ಮಾರಾಟಕ್ಕೆ ಕ್ರಮ ವಹಿಸಬೇಕು. ಜಿಲ್ಲೆಯ ಎಲ್ಲ ಶಾಲಾ ಕಾಲೇಜ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.  

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಜಿಲ್ಲೆಯಾದ್ಯಂತ ಅಕ್ರಮವಾಗಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗುತ್ತಿದ್ದು, ತಂಡವೊಂದರನ್ನು ರಚಿಸಿಕೊಂಡು ಇಂತಹ ಸ್ಥಳಗಳನ್ನು ಗುರುತಿಸಿ ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟವಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅವರು ಹೇಳಿದರು.  

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುತ್ತಿರುವುದರಿಂದ ಕಳ್ಳಭಟ್ಟಿ ಸರಾಯಿ ಯಥೇಚ್ಛವಾಗಿ ಮಾರಾಟವಾಗುವ ಸಂಭವವಿರುವುದರಿಂದ ಅಬಕಾರಿ ಇಲಾಖೆ ಅಧಿಕಾರಿಗಳು ಈ ಕುರಿತು ತೀವ್ರ ನಿಗಾ ವಹಿಸಬೇಕು. ಇಂತಹ ಅಕ್ರಮ ಚಟುವಟಿಕೆಗಳ ಕುರಿತು ಪೊಲೀಸ್ ಇಲಾಖೆಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಇದರಿಂದ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಜಿಲ್ಲೆಯಾದ್ಯಂತ ಎಲ್ಲ ಅಕ್ರಮಗಳಿಗೆ ಕಡಿವಾಣ ಹಾಕಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.  

ಜಿಲ್ಲೆಯು ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಯಾಗಿರುವುದರಿಂದ ಅಕ್ರಮಗಳಿಗೆ ವಿಶೇಷ ಕಾಳಜಿ ವಹಿಸುವುದು ಅತ್ಯವಶ್ಯಕವಾಗಿದೆ.  ಅಕ್ರಮ ಮದ್ಯ ಸಾಗಾಣಿಕೆಯಂತಹ ಚಟುವಟಿಕೆಗಳ ಮೇಲೆ  ತೀವ್ರ ಎಚ್ಚರಿಕೆ ವಹಿಸಿ ಗಡಿಭಾಗದಲ್ಲಿ ಅಕ್ರಮ ಮದ್ಯ ಮಾರಾಟವಾಗದಂತೆ ಕಟ್ಟೆಚ್ಚರ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.  

ಜಿಲ್ಲೆಯಾದ್ಯಂತ ಕಳೆದ 03 ವರ್ಷಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ 2023 ರಲ್ಲಿ 29 ಪ್ರಕರಣಗಳನ್ನು ದಾಖಲಿಸಿ 296 ಕೆ.ಜಿ. 403 ಗ್ರಾಂ. ಮಾದಕ ದ್ರವ್ಯ ಜಪ್ತಿ ಮಾಡಲಾಗಿದ್ದು, 200 ಕೆ.ಜಿ. 400 ಗ್ರಾಂ ಗಾಂಜಾ ನಾಶಪಡಿಸಿಲಾಗಿದೆ. ಅದರಂತೆ 2024ನೇ ಸಾಲಿನಲ್ಲಿ 28 ಪ್ರಕರಣಗಳನ್ನು ದಾಖಲಿಸಿ, 297 ಕೆ.ಜಿ. 872 ಗ್ರಾಂ ಗಾಂಜಾ ಜಪ್ತಿ ಮಾಡಿದ್ದು, 373 ಕೆಜಿ 574 ಗ್ರಾಂ ಗಾಂಜಾ ನಾಶಪಡಿಸಲಾಗಿದೆ.   2025ರಲ್ಲಿ 08 ಪ್ರಕರಣಗಳನ್ನು ದಾಖಲಿಸಿ, 283 ಕೆ.ಜಿ. 808 ಗ್ರಾಂ ಗಾಂಜಾ ಹಾಗೂ 18 ಕೆಜಿ 432 ಗ್ರಾಂ ಅಫೀಮು ವಶಪಡಿಸಿಕೊಂಡು ನಾಶಪಡಿಸಲಾಗಿದೆ ಎಂದು ಹೇಳಿದರು.  

ಸಭೆಯಲ್ಲಿ ವಿಜಯಪುರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ವಿನಯಕುಮಾರ ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಾನಂದ ಮಾಸ್ತ್ತಿಹೋಳಿ, ಅಬಕಾರಿ ಇಲಾಖೆ ಉಪ ಆಯುಕ್ತ ಮುರಳಿಧರ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಶೇಖರ ಹೊಸಮನಿ, ಪೀಟರ್ ಅಲೆಕ್ಸಾಂಡರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.