ವಿಜಯಪುರ 17: ಸಿದ್ಧೇಶ್ವರ ಶ್ರೀಗಳ ಆಶಯ, ಸಚಿವ ಎಂ.ಬಿ.ಪಾಟೀಲರ ಸಂಕಲ್ಪ, ಸರ್ಕಾರ-ಸಂಘ ಸಂಸ್ಥೆಗಳ ಸಹಭಾಗಿತ್ವ ಹಾಗೂ ಸಾರ್ವಜನಿಕರ ಪಾಲ್ಗೊಳ್ಳವಿಕೆ ವಿಜಯಪುರ ಜಿಲ್ಲೆಯನ್ನು ಇನ್ನೂ ಹಸಿರಾಗಿಸಲು ಪ್ರತಿ ತಿಂಗಳು ಹಸಿರು ಚಟುವಟಿಕೆಗಳನ್ನು ಏರಿ್ಡಸುವ ಮೂಲಕ ಕೋಟಿ ವೃಕ್ಷ ಅಭಿಯಾನವನ್ನು ನಿರಂತರವಾಗಿ ಮುನ್ನಡೆಸಲಾಗುವುದು ಎಂದು ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಹೇಳಿದರು.
ನಗರದಲ್ಲಿ ವೃಕ್ಷೋಥಾನ್ ಹೆರಿಟೇಜ್ ರನ್-2025 ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೇವಲ ಜೂನ್ ತಿಂಗಳಲ್ಲಿ ಸಸಿಗಳನ್ನು ನೆಟ್ಟು, ವನ ಮಹೋತ್ಸವ ಮಾಡುವುದು ಹಾಗೂ ಡಿಸೆಂಬರ್ ತಿಂಗಳಲ್ಲಿ ವೃಕ್ಷೋಥಾನ್ ಹೆರಿಟೇಜ್ ರನ್ ಕಾರ್ಯಕ್ರಮಗಳಿಗೆ ಸೀಮಿತವಾಗದೆ ವರ್ಷಪೂರ್ತಿ ಹಸಿರು ಕಾರ್ಯಕ್ರಮಗಳು ವಿಜಯಪುರದಲ್ಲಿ ನಡೆಯಬೇಕು ಎಂದು ಸಚಿವ ಎಂ.ಬಿ.ಪಾಟೀಲರು ಸೂಚಿಸಿದ್ದು, ಆ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು, ಸಾರ್ವಜನಿಕರು ಪ್ರತಿ ತಿಂಗಳು ಹಸಿರು ಪೂರಕ ಕಾರ್ಯಕ್ರಮಗಳನ್ನು ಅಲ್ಲಿಲ್ಲಿ ನಡೆಸಬೇಕು ಎಂದರು.
ಬರುವ ಡಿಸೆಂಬರ್‌ನಲ್ಲಿ ನಡೆಯುವ ವೃಕ್ಷಥಾನ್ ಹೆರಿಟೇಜ್ ರನ್‌ನಲ್ಲಿ ಯಾವುದೇ ಲೋಪವಾಗದಂತೆ ಸಮರ್ಕವಾಗಿ ನಡೆಸಲು ಈಗಿನಿಂದಲೇ ಸಿದ್ಧತೆಗಳನ್ನು ಆರಂಭಿಸಲಾಗಿದೆ. ವೃಕ್ಷಥಾನ್ ರನ್ ವಿಜಯಪುರದೊಂದಿಗೆ ಭಾವನಾತ್ಮಕ ಸಂಬಂಧ ಬೆಸೆದಿದ್ದು, ಇದನ್ನು ಗಟ್ಟಿಗೊಳಿಸಲು ವಿಜಯಪುರದಿಂದ ಹೊರಗಡೆ ಇರುವ ಎಲ್ಲರೂ ಈ ರನ್‌ನಲ್ಲಿ ಕುಟುಂಬ ಸಮೇತ ಪಾಲ್ಗೊಳ್ಳುವಂತೆ ಮಾಡುವುದು.
ಅಲ್ಲದೇ, ಕಾಲೇಜು ವಿದ್ಯಾರ್ಥಿಗಳು 5ಕಿ.ಮೀ ಓಟದಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳುವಂತೆ ಅನುಕೂಲ ಕಲ್ಪಿಸಲು ನೋಂದಣಿ ಫೀ ಅನ್ನು ಕಡಿಮೆ ಮಾಡುವುದು, ಕಾಲೇಜು ವಿದ್ಯಾರ್ಥಿಗಳ ದಾಖಲಾತಿ ಸಮಯದಲ್ಲಿಯೇ ಈ ನೋಂದಣಿ ಫೀ ಅನ್ನು ಭರಿಸುವಂತೆ ಎಲ್ಲಾ ಕಾಲೇಜು ಪ್ರಾಚಾರ್ಯರಿಗೆ ವಿನಂತಿಸುವುದು ಸೇರಿದಂತೆ ವಿವಿಧ ವಿಷಯಗಳನ್ನು ಇಂದಿನ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.
ಕೋಟಿವೃಕ್ಷ ಅಭಿಯಾನ ಸಂಚಾಲಕ ಡಾ. ಮುರುಗೇಶ ಪಟ್ಟಣಶೆಟ್ಟಿ, ಡಾ.ವಿಜಯಪುರ ಸೈಕ್ಲಿಂಗ್ ಗ್ರುಪ್ನ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಸದಸ್ಯರಾದ ಸಂಕೇತ ಬಗಲಿ, ಸಂತೋಷ ಓರಸಂಗ, ಡಾ. ರಾಜು ಯಲಗೊಂಡ, ರವೀಂದ್ರ ಗುಚ್ಚಟ್ಟಿ, ಗುರುಶಾಂತ ಕಾಪಸೆ, ಶಂಭು ಕಪೂರಮಠ, ಅಪ್ಪು ಭೈರಗೊಂಡ, ಡಾ.ಪ್ರವೀಣ ಚೌರ, ಅಶ್ಪಾಕ ಮನಗೂಳಿ, ಸಮೀರ ಬಳಗಾರ, ನಾವೀದ ನಾಗಠಾಣ, ವೀಣಾ ದೇಶಪಾಂಡೆ, ಅಮೀತ ಬಿರಾದಾರ, ಶಿವಾನಂದ ಯರನಾಳ, ಜಗದೀಶ ಪಾಟೀಲ, ಆಕಾಶ ಚೌಕಿಮಠ, ಪ್ರದೀಪ ಕುಂಬಾರ, ಡಿ.ಕೆ.ತಾವಸೆ, ಸಂದೀಪ ಮಡಗೊಂಡ ಮುಂತಾದವರು ಉಪಸ್ಥಿತರಿದ್ದರು.