ಯುದ್ಧದ ಕ್ರೆಡಿಟ್ ಸೇನೆಯವ್ರಿಗೆ ಮಾತ್ರ ಸಲ್ಲಬೇಕು, ಯಾವ ಪಕ್ಷಕ್ಕೂ ಅಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Credit for the war should go to the army alone, not to any party: Chief Minister Siddaramaiah

ಮೈಸೂರು 12: ಯುದ್ಧದ ಕ್ರೆಡಿಟ್ ಸೇನೆಯವ್ರಿಗೆ ಮಾತ್ರ ಸಲ್ಲಬೇಕು ಅದು ಬಿಟ್ಟು ಯಾವ ಪಕ್ಷವೂ ಅದನ್ನ ಕ್ಲೈಂ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ಪತ್ರಕರ್ತರೊಂದಿಗೆ ಮೈಸೂರಿನ ಎಚ್.ಡಿ.ಕೋಟೆಯಲ್ಲಿ ಮಾತನಾಡಿದ ಅವರು,  ಯುದ್ಧದ ಕ್ರೆಡಿಟ್ ಸೇನೆಯವ್ರಿಗೆ ಮಾತ್ರ ಸಲ್ಲಬೇಕು. ಇವತ್ತು ಎರಡೂ ದೇಶದ ಡಿಜಿಎಂ ಗಳ ಸಭೆ ಇದೆ. ಸಭೆಯಲ್ಲಿ ಏನು ತಿರ್ಮಾನ ಆಗುತ್ತದೆ ನೋಡೋಣ ಎಂದು ಹೇಳಿದರು. 

1971ರ ಯುದ್ಧಕ್ಕೂ- ಇವತ್ತಿನ ಸಂದರ್ಭಕ್ಕೂ ಹೋಲಿಕೆ ಮಾಡಿ ನಾನು ಮಾತನಾಡುವುದಿಲ್ಲ. ಆಗಿನ ಪರಿಸ್ಥಿತಿಗಳೇ ಬೇರೆ, ಇವತ್ತಿನ ಪರಿಸ್ಥಿತಿಗಳೇ ಬೇರೆ. ಟ್ರಂಪ್ ಟ್ವಿಟ್ ಬಗ್ಗೆಯಾಗಲಿ, ಪಾಕಿಸ್ತಾನದವರು ಮಾಡಿದ ಕದನ ವಿರಾಮ ಉಲ್ಲಂಘನೆಯ ಬಗ್ಗೆಯಾಗಲಿ ನಾನು ಮಾತನಾಡುವುದಿಲ್ಲ ಎಂದರು.

ಯುದ್ಧ ವಿರಾಮ ಘೋಷಣೆಗೂ ಮುನ್ನ ಸರ್ವ ಪಕ್ಷಗಳ ಸಭೆ ಕರೆಯಬೇಕಿತ್ತು. ವಿಶೇಷ ಅಧಿವೇಶನ ಕರೆಯಬೇಕಿತ್ತು. ಸರ್ವಪಕ್ಷ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಪ್ರಕಟಿಸಬಹುದಿತ್ತು ಎಂದು ಹೇಳಿದರು.

ರಾಜ್ಯದಲ್ಲಿನ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಹೊರಗೆ ಕಳುಹಿಸಿದ್ದೇವೆ‌. ಮೈಸೂರಿನಲ್ಲಿ ಮೂವರು ಮಕ್ಕಳು ಮಾತ್ರ ಇದ್ದಾರೆ. ಅವರನ್ನು ಹೊರಗೆ ಕಳುಹಿಸಲು ತಾಂತ್ರಿಕ ಸಮಸ್ಯೆ ಇವೆ‌. ಗಂಡ ಪಾಕಿಸ್ತಾನಿ, ಹೆಂಡತಿ ಮೈಸೂರಿನವಳು. ಹೀಗಾಗಿ ಮಕ್ಕಳ ವಿಚಾರದಲ್ಲಿ ತಾಂತ್ರಿಕ ಸಮಸ್ಯೆ ಇದೆ. ಆದ್ದರಿಂದ ಮಕ್ಕಳು ಮಾತ್ರ ಇಲ್ಲೇ ಇದ್ದಾರೆ ಎಂದು ಪ್ರತಿಕ್ರಿಯಿಸಿದರು.

ಸಚಿವ ಸಂಪುಟ ಪುನಾರಚನೆ ಬಗ್ಗೆ ಯಾಕೆ ಕೇಳುತ್ತೀರಾ? ಆ ಕೆಲಸ ನೀವು ಮಾಡ್ತಿರಾ? ಎಂದ ಮುಖ್ಯಮಂತ್ರಿ, ನಾನೇ ಮಾಡಬೇಕು. ನಿಮಗೆ (ಮಾಧ್ಯಮದವರಿಗೆ) ಹೇಳಿಯೇ ಮಾಡುತ್ತೇನೆ ಎಂದರು.

ಸರ್ಕಾರದ ಎರಡು ವರ್ಷದ ಸಂಭ್ರಮಾಚರಣೆ ಮಾಡುತ್ತೇವೆ. ಯುದ್ಧ ವಿರಾಮ ಘೋಷಣೆ ಆಗಿರುವ ಕಾರಣ ಈ ಕಾರ್ಯಕ್ರಮ ನಡೆಸುತ್ತೇವೆ. ನುಡಿದಂತೆ ನಡೆದ ಸರ್ಕಾರ ಇದ್ದರೆ ಅದು ನಮ್ಮದು ಮಾತ್ರ. ಇದೇ ನಮ್ಮ ಸರ್ಕಾರದ ಯಶಸ್ಸು ಎಂದರು.

ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಅನಿಲ್ ಚಿಕ್ಕಮಾದು, ಡಿ.ರವಿಶಂಕರ್, ಡಾ.ಡಿ. ತಿಮ್ಮಯ್ಯ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್, ಮುಖಂಡರಾದ ಸೀತಾರಾಮು, ಕೆ.ಮರೀಗೌಡ ಇದ್ದರು.