ಕೊರೊನ ರೋಗಿ ಆತ್ಮಹತ್ಯೆ ಹಿನ್ನಲೆ, ರಾಜ್ಯದ ನಿಯೋಜಿತ ಕೋವಿಡ್ ಆಸ್ಪತ್ರೆಗಳಲ್ಲಿ ಬಿಗಿ ಭದ್ರತೆ

ಮೈಸೂರು, ಏ 27, ಸೋಮವಾರ ಬೆಳಗ್ಗೆ  ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ -19 ರೋಗಿಯೊಬ್ಬರು  ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನಲೆಯಲ್ಲಿ   ಆಸ್ಪತ್ರೆ ವಾಸ್ತವ್ಯದ ವೇಳೆ ಕೊರೊನಾ ಸೋಂಕಿತ ರೋಗಿಗಳ  ಸುರಕ್ಷತೆಯನ್ನು ಖಾತರಿಪಡಿಸಲು ಜಿಲ್ಲಾಡಳಿತ  ಹಾಗೂ ಆರೋಗ್ಯ ಇಲಾಖೆ  ಮುನ್ನೆಚ್ಚರಿಕೆ  ಕ್ರಮಗಳನ್ನು  ಕೈಗೊಂಡಿದೆ. ಮೈಸೂರು ಜಿಲ್ಲೆಯ  ಎಲ್ಲ ಕೋವಿಡ್ -19 ರೋಗಿಗಳನ್ನು,   ಕೆ ಆರ್ ಎಸ್  ರಸ್ತೆಯಲ್ಲಿರುವ ಹೊಸ ಜಿಲ್ಲಾ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ಕಲ್ಪಿಸಲಾಗುತ್ತಿದ್ದು,  ರೋಗಿಗಳ  ಭದ್ರತೆ ಖಾತರಿಪಡಿಸಲು  ಭದ್ರತಾ ವ್ಯವಸ್ಥೆಯನ್ನು   ಬಿಗಿಗೊಳಿಸಲಾಗಿದೆ ಎಂದು  ಜಿಲ್ಲಾ ಆರೋಗ್ಯ ಅಧಿಕಾರಿ  ಡಾ. ಆರ್. ವೆಂಕಟೇಶ್  ಸೋಮವಾರ ತಿಳಿಸಿದ್ದಾರೆ.
 ನೂತನ ಜಿಲ್ಲಾ ಆಸ್ಪತ್ರೆ ಕಟ್ಟಡಕ್ಕೆ ಭದ್ರತೆ ಕಲ್ಪಿಸಲಾಗಿದ್ದು,  ಯಾವುದೇ ಅಹಿತಕರ ಘಟನೆ  ನಡೆಯಲು  ಅವಕಾಶವಿಲ್ಲ  ಎಂದು  ವಿಶ್ವಾಸ ವ್ಯಕ್ತಪಡಿಸಿದ್ದಾರೆ.ನಿಯೋಜಿತ  ಕೋವಿಡ್ -19  ಆಸ್ಪತ್ರೆಯಲ್ಲಿ  ರೋಗಿಗಳ  ನಡುವೆ  ಸಾಕಷ್ಟು ಅಂತರವನ್ನು ಕಾಪಾಡಲಾಗಿದ್ದು,  ದಿನವಿಡೀ ರೋಗಿಗಳ ಮೇಲೆ ನಿಗಾ ವಹಿಸಲು  ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.  ಜೊತೆಗೆ ಮನಶಾಸ್ತ್ರಜ್ಞರಿಂದ  ರೋಗಿಗಳಿಗೆ ನಿರಂತರವಾಗಿ  ಆಪ್ತ ಸಮಾಲೋಚನೆ ಕಲ್ಪಿಸಲಾಗುತ್ತಿದೆ.  ರೋಗಿಗಳಲ್ಲಿ ಆತ್ಮ ವಿಶ್ವಾಸ ಹಾಗೂ ನೈತಿ ಸ್ಥೈರ್ಯ ಮೂಡಿಸಲು  ಮನಶಾಸ್ತ್ರಜ್ಞರನ್ನು  ನಿಯೋಜಿಸಲಾಗಿದೆ   ಎಂದು ವಿವರಿಸಿದರು.  ಮೈಸೂರಿನಲ್ಲಿರುವ  ಎಲ್ಲ  ರೋಗಿಗಳು   ಸಹಕಾರ ಮನೋಭಾವದವರಾಗಿದ್ದು,   ಚೇತರಿಸಿಕೊಳ್ಳುವ   ಭರವಸೆ ಹೊಂದಿದ್ದಾರೆ. ನಾವು  ಅತಿಹೆಚ್ಚಿನ  ಮುತುವರ್ಜಿಯಿಂದ ಅವರಿಗೆ  ಆರೋಗ್ಯ ರಕ್ಷಣೆ ಕಲ್ಪಿಸುತ್ತಿದ್ದು, ಎಲ್ಲ ರೋಗಿಗಳು  ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು  ಡಾ. ವೆಂಕಟೇಶ್ ತಿಳಿಸಿದ್ದಾರೆ.