ಮಾಲಿನ್ಯವನ್ನು ನಿಯಂತ್ರಿಸಿ ಪರಿಸರ ಸಂರಕ್ಷಿಸಿ : ಅಶೋಕ ಭಟ್

ಲೋಕದರ್ಶನ ವರದಿ

ಯಲ್ಲಾಪುರ, 30: ವಾಯು ಮಾಲಿನ್ಯವನ್ನು ತಡೆಗಟ್ಟಿ ಉತ್ತಮ ಪರಿಸರವನ್ನು ಕಾಪಾಡಿಕೊಂಡುಹೋಗುವುದು ನಮ್ಮೆಲ್ಲರ ಹೊಣೆಯಾಗಿದೆ. ಮಾಲಿನ್ಯವನ್ನು ನಿಯಂತ್ರಿಸಿ  ಪರಿಸರವನ್ನು ಸಂರಕ್ಷಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಏಸಿಎಫ್ ಅಶೋಕ ಭಟ್ಟ ಹೇಳಿದರು. ಅವರು ಪಟ್ಟಣದ ಎಪಿಎಂಸಿ ಆವಾರದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆಯ ಪ್ರಯುಕ್ತ  ವಾಹನ ಸವಾರರಿಗೆ ಉಚಿತವಾಗಿ ಸಸಿಗಳನ್ನು ವಿತರಿಸಿ ಅವರು ಮಾತನಾಡಿದರು. ಪ್ರಾಕೃತಿಕ ಸಂಪತ್ತಿನಿಂದ ಕೂಡಿದ ನಮ್ಮ ಸುತ್ತಲಿನ ಪರಿಸರವು ಇಂದು ನಾನಾ ಕಾರಣಗಳಿಂದ ಮಾಲಿನ್ಯವಾಗುತ್ತಿದೆ. ವಾಹನಗಳಿಂದ ಹೊರಬರುವ ಹೊಗೆಯಿಂದಾಗಿಯೂ ಪರಿಸರ ಮಾಲಿನ್ಯವಾಗುತ್ತಿದೆ. ವಾಹನ ಮಾಲಿಕರು, ವಾಹನ ಸವಾರರು ಜಾಗೃತರಾಗಬೇಕಾದ ಅವಶ್ಯಕತೆ ಇದೆ. ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಬೇಕು ಎಂದರು. ಶಿರಸಿ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ವಾಸೀಂ ಬಾಬಾ ಮಾತನಾಡಿ, ವಾಹನಗಳಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ನಾವೆಲ್ಲರೂ ಸೇರಿ ತಡೆಗಟ್ಟಬೇಕಾಗಿದೆ. ನಿಯಮಿತವಾಗಿ ವಾಹನಗಳ ತಪಾಸಣೆ ಮಾಡಿಸಿಕೊಳ್ಳಬೇಕು. ನಮ್ಮ ಸುತ್ತಲೂ ಗಿಡ,ಮರಗಳನ್ನು ಬೆಳೆಸುವ ಮೂಲಕ ವನ್ಯ ಸಂಪತ್ತನ್ನು ಹೆಚ್ಚಿಸಬೇಕು. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ವತಿಯಿಂದ ಅರಣ್ಯ ಇಲಾಖೆಯ ಸಹಕಾರದೊಂದಿಗೆ  ಉಚಿತವಾಗಿ ಸಸಿಗಳನ್ನು ವಿತರಿಸುವ ಕಾರ್ಯವನ್ನು  ಮಾಡಲಾಗುತ್ತಿದೆ ಎಂದರು.

   ಕಾ.ನಿ.ಪ ಸಂಘದ ಉಪಾಧ್ಯಕ್ಷ ಜಿ.ಎನ್.ಭಟ್  ಮಾತನಾಡಿ, ವಾಯುಮಾಲಿನ್ಯವನ್ನು ತಡೆಗಟ್ಟಿ ಉತ್ತಮ ಪರಿಸರವನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ಹಸ್ತಾಂತರಿಸುವ ಬಹು ದೊಡ್ಡ ಜವಾಭ್ದಾರಿ ನಮ್ಮೆಲ್ಲರ ಮೇಲಿದೆ. ನಾವೆಲ್ಲರೂ  ಮರ,ಗಿಡಗಳನ್ನು ಉಳಿಸಿ,ಬೆಳೆಸಿ ಹಸಿರು ಪರಿಸರವನ್ನು  ಕಾಪಾಡಬೇಕು ಎಂದರು. 

ಈ ಸಂದರ್ಭದಲ್ಲಿ ವಾಹನ ಸವಾರರಿಗೆ ಉಚಿತವಾಗಿ ನೂರಾರು ಸಸಿಗಳನ್ನು ವಿತರಿಸಲಾಯಿತು.

ಸಾರಿಗೆ ಅಧಿಕಾರಿ ಶೇಖರ್ ಸ್ವಾಗತಿಸಿ, ನಿರೂಪಿಸಿದರು.