ಲಕ್ನೋ, ಜನವರಿ 22 , ಅಯೋಧ್ಯೆಯಲ್ಲಿ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕೆಲಸ ಪ್ರಾರಂಭವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ ಬೆನ್ನಲ್ಲೆ ಟ್ರಸ್ಟ್ ರಚನೆ ಈ ತಿಂಗಳಲ್ಲೇ ಘೋಷಣೆಯಾಗುವ ಸಾಧ್ಯತೆ ಇದೆ. ಲಭ್ಯವಾಗಿರುವ ಉನ್ನತ ಮೂಲಗಳ ಪ್ರಕಾರ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಗೃಹ ಸಚಿವಾಲಯವು ರಾಮ ಮಂದಿರ ಟ್ರಸ್ಟ್ ರಚನೆಯ ಕಾರ್ಯವಿಧಾನವನ್ನು ಅಂತಿಮಗೊಳಿಸಿದ್ದು, ಅದು ಈ ತಿಂಗಳೊಳಗೆ ಅಧಿಕೃತವಾಗಿ ಪ್ರಕಟವಾಗಲಿದೆ.ಸುಪ್ರೀಂ ಕೋರ್ಟ್, ಕಳೆದ ನ. 9ರಂದು ರಾಮಮಂದಿರದ ಪರವಾಗಿ ತೀರ್ಪು ನೀಡಿದ್ದ ಸಮಯದಲ್ಲಿ ಮುಂದಿನ ಮೂರು ತಿಂಗಳ ಒಳಗಾಗಿ ಟ್ರಸ್ಟ್ ರಚಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು.
ಟ್ರಸ್ಟ್‌ನ ಸದಸ್ಯರು ಯಾರು ಎಂದು ಬಹಿರಂಗಪಡಿಸಲಾಗಿಲ್ಲವಾದರೂ, ರಾಮಮಂದಿರ ಆಂದೋಲನದಲ್ಲಿ ಸಕ್ರಿಯವಾಗಿ ಭಾಗಿಯಾಗಿರುವ ಕೆಲವು ಹಿರಿಯ ಸಂತರಿಗೆ ಟ್ರಸ್ಟ್ ನಲ್ಲಿ ಅವಕಾಶ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.ಆದರೆ ವಿಶ್ವ ಹಿಂದೂ ಪರಿಷತ್, ಮತ್ತು ಕೆಲವು ಸಂತರು ರಾಮ ಜನ್ಮಭೂಮಿ ನಿಯಾಸ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರನ್ನು ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಟ್ರಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ , ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೇರಿದಂತೆ 11 ಸದಸ್ಯರು ಇರಲಿದ್ದಾರೆ ಎಂದು ಉನ್ನತ ಮೂಲಗಳ ತಿಳಿಸಿವೆ.ಮುಂದಿನ ಏಪ್ರಿಲ್ ನಲ್ಲಿ ನಡೆಯಲಿರುವ ರಾಮ ನವಮಿ ಸಂದರ್ಭದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಸಾಧುಗಳು ಮತ್ತು ಸಂತರು ಈಗಾಗಲೇ ತೀರ್ಮಾನಿಸಿದ್ದಾರೆ.