ಮತ್ತಿಘಟ್ಟಾ, ಕೇಳಗಿನಕೇರಿಗೆ ರಸ್ತೆ ನಿರ್ಮಾಣ ಮಾಡಿಕೊಡಿ : ಅನಂತ ಹೆಗಡೆ ನೇತೃತ್ವದಲ್ಲಿ ಪ್ರತಿಭಟನೆ

Construct a road to Mattighatta and Kelaginakeri: Protest led by Anantha Hegde

ಮತ್ತಿಘಟ್ಟಾ, ಕೇಳಗಿನಕೇರಿಗೆ ರಸ್ತೆ ನಿರ್ಮಾಣ ಮಾಡಿಕೊಡಿ : ಅನಂತ ಹೆಗಡೆ ನೇತೃತ್ವದಲ್ಲಿ ಪ್ರತಿಭಟನೆ 

ಕಾರವಾರ, 17 : ಮತ್ತಿಘಟ್ಟಾ ಸಮೀಪದ ಕೆಳಗಿನಕೇರಿ ಸೇರಿ ಆರೇಳು ಹಳ್ಳಿಗಳಿಗೆ ಸಂಪರ್ಕ ಕೊಂಡಿಯಾಗಿರುವ ರಸ್ತೆಯನ್ನು ತಕ್ಷಣ ನಿರ್ಮಾಣಮಾಡಿಕೊಡ ಬೇಕೆಂದು ಬಿಜೆಪಿ ರೈತ ವಿಭಾಗದ ಧುರೀಣ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಕಾರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಸಾಂಕೇತಿಕ ಪ್ರತಿಭಟನೆ ಮಾಡಲಾಯಿತು.ಮತ್ತಿಘಟ್ಟಾ ಕೆಳಗಿನಕೇರಿ ಗ್ರಾಮಸ್ಥರು ರಸ್ತೆಗಾಗಿ ಪ್ರತಿಭಟನೆಯ ವೇಳೆ ಮಾತನಾಡಿದ ಅನಂತಮೂರ್ತಿ ಹೆಗಡೆ , ಕಳೆದ ಎರಡು ವರ್ಷಗಳಿಂದ ಸತತ ಭೂಕುಸಿತದ ಪರಿಣಾಮವಾಗಿ ಈ ಪ್ರದೇಶದ ಸಂಪರ್ಕ ಕೊಂಡಿಯಾಗಿರುವ ರಸ್ತೆಯು ಹಾಳಾಗಿದೆ. ಕಳೆದ ಮಳೆಗಾಲದಲ್ಲಿ15 ದಿನ ಈ ಭಾಗಕ್ಕೆ ಸಂಪರ್ಕವೂ ಇಲ್ಲವಾಗಿತ್ತು. ಜನಪ್ರತಿನಿಧಿಗಳು ಮತ್ತಿಘಟ್ಟಕ್ಕೆ ಒಮ್ಮೆಯೂ ಬಂದಿಲ್ಲ. ಗ್ರಾಮಸ್ಥರೇ ಹಣ ಹಾಕಿ ತುರ್ತು ರಸ್ತೆ ಮಾಡಿಕೊಂಡಿದ್ದಾರೆ. ಸರಕಾರಗಳು ಇದೆಯೋ, ಇಲ್ಲವೋ ತಿಳಿಯುತ್ತಿಲ್ಲ. ಈ ಕೂಡಲೇ ಉಸ್ತುವಾರ ಸಚಿವರು ಹಾಗು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದರು. 

ಇದೇ ವೇಳೆ ಕೆಳಗಿನಕೇರಿ ಗ್ರಾಮದ ರೇಣುಕಾ ಸಿದ್ದಿ ಮಾತನಾಡಿ, ನಮಗೆ ಕೆಲಸಕ್ಕೆ ಪ್ರತಿದಿನ ತೆರಳಲು ರಸ್ತೆಯ ಅವಶ್ಯಕತೆ ಇದೆ. ಮಕ್ಕಳಿಗೆ ಶಾಲೆಗೆ ಹೋಗಲು, ರೇಷನ್ ತರಲು ರಸ್ತೆಯ ಅನಿವಾರ್ಯತೆ ಇದೆ. ಮತ್ತೆ ಈ ಮಳೆಗಾಲದಲ್ಲಿ ಭೂಕುಸಿತ ಸಂಭವಿಸಿದರೆ ಮತ್ತೆ ಸಮಸ್ಯೆ ಆಗುವುದರಿಂದ, ಜಿಲ್ಲಾಧಿಕಾರಿಗಳು ಈ ಕೂಡಲೇ ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸಬೇಕೆಂದರು.ಈ ಕೂಡಲೇ ನಮ್ಮ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ತಕ್ಷಣ ಆಗಮಿಸಿ, ಸ್ಥಳ ವೀಕ್ಷಣೆ ನಡೆಸಿ ತುರ್ತು ಕ್ರಮ ಕೈಗೊಳ್ಳಬೇಕು. ಮುಂಬರುವ ಮಳೆಗಾಲದೊಳಗೆ 38 ಕುಟುಂಬಕ್ಕೆ ಅನಿವಾರ್ಯ ಆಗಿರುವ ಹಳ್ಳಿಯ ರಸ್ತೆ ಸಂಪರ್ಕವನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು. ಭೂ ಕುಸಿತಕ್ಕೆ ತಡೆಯೊಡ್ಡಲು ಈ ರಸ್ತೆಗೆ ತಡೆಗೋಡೆ ನಿರ್ಮಿಸಲು ಮತ್ತು ಕಾಮಗಾರಿ ಆರಂಭಿಸಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿಕೊಂಡರು. 

ಪ್ರತಿಭಟನೆಯಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಶ್ರೀಕಾಂತ ಬಳ್ಳಾರಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಶಿರಸಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ, ದೇವನಳ್ಳಿ ಪಂಚಾಯತ ಉಪಾಧ್ಯಕ್ಷೆ ಜಯಭಾರತಿ ಭಟ್ಟ, ಪಂಚಾಯತ ಸದಸ್ಯ ನಾರಾಯಣ ಹೆಗಡೆ, ಪ್ರಮುಖರಾದ ಗಣಪತಿ ಸಿದ್ದಿ ಸೇರಿದಂತೆ 50 ಕ್ಕೂ ಅಧಿಕ ಮತ್ತಿಘಟ್ಟಾ ಕೆಳಗಿನಕೇರಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 

ಮನವಿ ಸ್ವೀಕಾರ :ಮತ್ತಿಘಟ್ಟಾ ಸಮೀಪದ ಕೆಳಗಿನಕೇರಿ ಸೇರಿ ಆರೇಳು ಹಳ್ಳಿಗಳಿಗೆ ಸಂಪರ್ಕ ಕೊಂಡಿಯಾಗಿರುವ ರಸ್ತೆಯು ಭೂಕುಸಿತದಿಂದಾಗಿ ಕಳೆದ ಮಳೆಗಾಲದಲ್ಲಿ ಹಾನಿಯುಂಟಾಗಿತ್ತು. ಈ ಸ್ಥಳಕ್ಕೆ ಕೂಡಲೇ ಭೇಟಿ ನೀಡಿ ಗ್ರಾಮಸ್ಥರ ರಸ್ತೆ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಭರವಸೆ ನೀಡಿದ್ದಾರೆಂದು ಪ್ರತಿಭಟನಾಕಾರರು ಮಾದ್ಯಮ ಗಳಿಗೆ ಕೊನೆಯಲ್ಲಿ ತಿಳಿಸಿದರು.