ಲೋಕದರ್ಶನ ವರದಿ
ಕಂಪ್ಲಿ 14: ದರೋಜಿ ಕೆರೆ ನೀರನ್ನು ಅನಧಿಕೃತವಾಗಿ ಎಚ್ಎಲ್ಸಿ ವ್ಯಾಪ್ತಿಯ ರೈತರು ಬಳಸಿಕೊಳ್ಳುತ್ತಿದ್ದು, ದರೋಜಿ ಕೆರೆ ವ್ಯಾಪ್ತಿಯ ರೈತರಿಗೆ ನೀರಿನ ತೊಂದರೆಯಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕೇಂದ್ರ ಸಮಿತಿ ಸದಸ್ಯ ಕರಿಯಪ್ಪ ಗುಡಿಮನಿ ನೇತೃತ್ವದಲ್ಲಿ ಸುಗ್ಗೇನಹಳ್ಳಿ ರೈತರು ಆಗ್ರಹಿಸಿದರು.
ತಾಲೂಕು ಕಛೇರಿಯ ಶಿರಸ್ತೆದಾರ ಶ್ರೀಧರ ಅವರಿಗೆ ಸುಗ್ಗೇನಹಳ್ಳಿ ರೈತರು ತಹಶೀಲ್ದಾರರಿಗೆ ಬರೆದ ಮನವಿ ಪತ್ರ ಸಲ್ಲಿಸಿ ಮಾತನಾಡಿ, ಬಲಾಢ್ಯರು ದರೋಜಿ ಕೆರೆ ನೀರನ್ನು ಎಚ್ಎಲ್ಸಿ ಕಾಲುವೆಗೆ ಹರಿಸಿಕೊಂಡು ನೀರನ್ನು ಬಳಸಿಕೊಳ್ಳುತ್ತಿದ್ದಾರೆ. ದರೋಜಿ ಕೆರೆ ವ್ಯಾಪ್ತಿಯ ಹಂಪಾದೇವನಹಳ್ಳಿ, ಎಮ್ಮಿಗನೂರು, ಸುಗ್ಗೇನಹಳ್ಳಿ ಸೇರಿ ಹತ್ತನ್ನೆರೆಡು ಗ್ರಾಮಗಳ ಸುಮಾರು 1500ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳಿಗೆ ಕಳೆದ ಹದಿನೈದು ದಿನಗಳಿಂದ ನೀರಿನ ತೊಂದರೆಯಾಗಿದೆ. ಸದ್ಯ ಭತ್ತ ಬೆಳೆ ಕುಸುಮದ ಹಂತದಲ್ಲಿದ್ದು ನೀರಿನ ತೊಂದರೆಯಾಗಿದ್ದು, ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ದರೋಜಿ ಕೆರೆಯ ನೀರನ್ನು ವಂಚಿಸಿ ಎಚ್ಎಲ್ಸಿ ಕಾಲುವೆಗೆ ಸೆಳೆದುಕೊಳ್ಳುವ ವ್ಯವಸ್ಥೆಯನ್ನು ಕಂದಾಯ ಸಿಬ್ಬಂದಿ ವೀಕ್ಷಿಸಿ ವಾಸ್ತವತೆಯನ್ನು ಅರಿತು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರೊದಗಿಸುವಲ್ಲಿ ಮುಂದಾಗಬೇಕು. ಎಂದು ಒತ್ತಾಯಿಸಿದರು.
ನೀರಾವರಿ ಇಲಾಖೆ ಆವರಣದಲ್ಲಿ ಸುಗ್ಗೇನಹಳ್ಳಿ ರೈತರು ಸಾಂಕೇತಿಕ ಧರಣಿ ನಡೆಸಿ, ಬೆಳೆಗಳಿಗೆ ನೀರಿಲ್ಲದೆ ಬೆಳೆಗಳು ಒಣಗುತ್ತಿವೆ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ. ಅಚ್ಚುಕಟ್ಟು ಪ್ರದೇಶದ ಭೂಮಿಗೆ ನೀರೊದಗಿಸಬೇಕು. ಇಲ್ಲದಿದ್ದರೆ ರೈತರು ಸಾಮೂಹಿಕವಾಗಿ ವಿಷ ಕುಡಿದು ಸಾಯುತ್ತೇವೆ ಎಂದು ಕ್ರಿಮಿನಾಶಕ ಬಾಟಲ್ಗಳನ್ನು ಪ್ರದರ್ಶಿಸಿ ಆಗ್ರಹಿಸಿದರು.
ನೀರಾವರಿ ಇಲಾಖೆಯ ಎಇಇ ಪುರುಷೋತ್ತಮ, ಜೆಇ ಯಲ್ಲಪ್ಪ ಇವರು ರೈತರೊಂದಿಗೆ ಮಾತನಾಡಿ, ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ನೀರು ಒದಗಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಮೊಟಕುಗೊಳಿಸಿ ಮನವಿ ಪತ್ರ ಸಲ್ಲಿಸಲು ತಹಶೀಲ್ದಾರ ಕಛೇರಿಗೆ ತೆರಳಿದರು. ಮನವಿ ಪತ್ರ ಅಪರ್ಿಸುವಲ್ಲಿ ಸುಗ್ಗೇನಹಳ್ಳಿ ರೈತ ಮುಖಂಡರಾದ ಎನ್.ರಾಮಾಂಜಿನೇಯ, ಪಿ.ಅಲ್ಲಿಸಾಬ್, ಎನ್.ಜಡೇಶ್, ವಿ.ವೆಂಕಟಸ್ವಾಮಿ, ವಿ.ಕೇಶಪ್ಪ, ಎಚ್.ಹನುಮಂತಪ್ಪ, ಕೆ.ಯಲ್ಲಪ್ಪ, ಆರ್.ಕೇಶರೆಡ್ಡಿ, ಎಂ.ರಾಮಾಂಜಿನಿ, ಸಿ.ಲೋಕೇಶ್, ವಿ.ಕೆ.ಈರಣ್ಣ, ಎಸ್.ನಾಗೇಶಪ್ಪ, ಎಚ್.ದುರುಗಪ್ಪ, ಸಿ.ರಾಮಯ್ಯ ಸೇರಿ ರೈತರನೇಕರು ಉಪಸ್ಥಿತರಿದ್ದರು.