ಧರ್ಮಗುರುಗಳು, ಜನಪ್ರನಪ್ರತಿನಿಧಿಗಳು ಬ್ರೇನ್ ವಾಷ್ ಮಾಡಬಾರದು: ಶೆಟ್ಟರ್

ಬೆಂಗಳೂರು,ಏ 20 (ಯುಎನ್ಐ) ಕೊರೋನಾ ವೈರಸ್ ನಿಯಂತ್ರಣ ಕುರಿತು ಆಯಾ ಧರ್ಮದ ಧರ್ಮ ಗುರುಗಳು ಹಾಗೂ ಜನಪ್ರತಿನಿಧಿಗಳು ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.ವಿಧಾನಸೌಧಲ್ಲಿ ಮಾತನಾಡಿದ ಅವರು, ಧರ್ಮ ಗುರುಗಳು, ಜನಪ್ರತಿನಿಧಿಗಳು ಯುವಕರ ಮನಃ ಪರಿವರ್ತನೆ ಮಾಡುವ ಕೆಲಸ‌ ಮಾಡಬೇಕು. ಅದು ಬಿಟ್ಟು ಬ್ರೇನ್ ವಾಷ್ ಮಾಡುವ ಕೆಲಸ‌ ಮಾಡಬಾರದು ಎಂದು ಕಿಡಿ ಕಾರಿದರು.ಕೊರೋನಾ ಯಾವ ಜಾತಿ, ಧರ್ಮಕ್ಕೆ ಸಂಬಂಧಪಟ್ಟ ರೋಗ ಅಲ್ಲ. ಹಾಗಾಗಿ ಎಲ್ಲಾ ಧರ್ಮದವರೂ ಇದರ ನಿಯಂತ್ರಣಕ್ಕೆ ಸಹಕಾರ ನೀಡಬೇಕು. ನಾನು ಬೆಳಗಾವಿ ಉಸ್ತುವಾರಿ ಸಚಿವನಾಗಿದ್ದೇನೆ. ಇತ್ತೀಚೆಗೆ ಕುಡುಚಿಯಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಲಾಗಿತ್ತು. ಹಲ್ಲೆ ನಡೆಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಾನೇ ಸೂಚನೆ ನೀಡಿದ್ದೆ. ಬಳಿಕ ಈಗ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಇದು ವೈರಾಣು ವಿರುದ್ಧದ ಹೋರಾಟ ಎಂದು ತಿಳಿಸಿದರು. ಆಶಾ ಕಾರ್ಯಕರ್ತರು ನಿಮ್ಮ ರಕ್ಷಣೆಗೆ ಬಂದಿದ್ದಾರೆ. ಅವರು ನಿಮ್ಮನ್ನು ಜೈಲಿಗೆ ಕೊಂಡೊಯ್ಯಲು ಬಂದಿಲ್ಲ. ಯಾರು ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಾರೋ ಅವರನ್ನು ಬಂಧಿಸಿ ಅವರ ಮೇಲೆ ಎಫ್ ಐ ಆರ್ ದಾಖಲಿಸಬೇಕು. ಆಶಾ ಕಾರ್ಯಕರ್ತರು ನಮ್ಮೆಲ್ಲರ ಆರೋಗ್ಯ ರಕ್ಷಣೆಗೆ ಬಂದಿರುವವರು, ಕ್ವಾರಂಟೈನ್ ಮಾಡಿದರೆ ಶಂಕಿತರ ಆರೋಗ್ಯ ಸರಿ ಹೋಗುತ್ತದೆ. ಸಮಾಜದ ಆರೋಗ್ಯವೂ ರಕ್ಷಣೆಯಾಗುತ್ತದೆ. ಇಂತಹ ದಾಳಿಗಳು ಮರುಕಳಿಸಬಾರದು. ಇಲ್ಲವಾದರೆ ಪರಿಸ್ಥಿತಿ ಕೈ ಮೀರಿ ಹೋಗುತ್ತದೆ ಎಂದರು.