ಢಾಕಾ 02: ದೇಶದ್ರೋಹದ ಪ್ರಕರಣದಲ್ಲಿ ಬಂಧಿತರಾಗಿರುವ ಹಿಂದೂ ಆಧ್ಯಾತ್ಮಿಕ ನಾಯಕ ಚಿನ್ಮೋಯ್ ಕೃಷ್ಣ ದಾಸ್ ಅವರ ಜಾಮೀನು ಅರ್ಜಿ ತಿರಸ್ಕರಿಸಿದ ಬಾಂಗ್ಲಾದೇಶ ನ್ಯಾಯಾಲಯ.g
ದೇಶದ್ರೋಹದ ಆರೋಪ ಪ್ರಕರಣದಲ್ಲಿ ಬಂಧಿತರಾಗಿರುವ ಚಿನ್ಮೋಯ್ ಕೃಷ್ಣ ದಾಸ್ ಜಾಮೀನಿಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆಯೇ ಇಂದು ಬಿಗಿ ಭದ್ರತೆಯ ನಡುವೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಚಿತ್ತಗಾಂಗ್ ಕೋರ್ಟ್ ನಲ್ಲಿ ಸುಮಾರು 30 ನಿಮಿಷಗಳ ಕಾಲ ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾದೀಶರು,ಚಿನ್ಮೋಯ್ ಕೃಷ್ಣ ದಾಸ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
ಢಾಕಾದಿಂದ ಚಟ್ಟೋಗ್ರಾಮ್‌ಗೆ ತೆರಳಿದ್ದ ಸುಪ್ರೀಂ ಕೋರ್ಟ್‌ನ 11 ವಕೀಲರ ತಂಡವು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶ ಎಂಡಿ ಸೈಫುಲ್ ಇಸ್ಲಾಂ ಅವರು ಸುಮಾರು 30 ನಿಮಿಷಗಳ ಕಾಲ ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
11 ವಕೀಲರ ತಂಡದ ನೇತೃತ್ವವನ್ನು ವಕೀಲ ಅಪುರ್ಬಾ ಕುಮಾರ್ ಭಟ್ಟಾಚಾರ್ಜಿ ವಹಿಸಿದ್ದರು, ಅಪುರ್ಬಾ ಕುಮಾರ್ ಭಟ್ಟಾಚಾರ್ಜಿ ಅವರು ಚಿನ್ಮಯ್ ಸಹ ಭಾಗವಾಗಿರುವ ಸಮ್ಮಿಲಿತಾ ಸನಾತನಿ ಜಾಗರಣ್ ಜೋಟೆ ಸಂಸ್ಥೆಯ ವಕ್ತಾರರೂ ಆಗಿದ್ದಾರೆ. ಚಟ್ಟೋಗ್ರಾಮ್‌ನ ನ್ಯಾಯಾಲಯವು ಜಾಮೀನು ತಿರಸ್ಕರಿಸಿದ ಹಿನ್ನೆಲೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂದು ಚಿನ್ಮಯ್ ಅವರ ವಕೀಲ ಭಟ್ಟಾಚಾರ್ಜಿ ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಉಂಟಾದ ರಾಜಕೀಯ ಅರಾಜಕತೆ ಬಳಿಕ ಅಕ್ಟೋಬರ್ 25ರಂದು ಚಿತ್ತಾಗಾಂಗ್‌ನಲ್ಲಿ ಬಾಂಗ್ಲಾದೇಶ ರಾಷ್ಟ್ರಧ್ವಜಕ್ಕಿಂತಲೂ ಎತ್ತರದಲ್ಲಿ ಹಿಂದೂ ಧರ್ಮವನ್ನು ಸಂಕೇತಿಸುವ ಕೇಸರಿ ಧ್ವಜವನ್ನು ಹಾರಿಸುವ ಮೂಲಕ ದೇಶದ್ರೋಹ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಚಿನ್ಮಯ್ ಕೃಷ್ಣ ದಾಸ್ ಅವರ ಹಿಂದಿನ ವಕೀಲ ರವೀಂದ್ರನಾಥ್ ಘೋಷ್ ಅವರು ಡಿಸೆಂಬರ್‌ನಲ್ಲಿ ಚಿನ್ಮಯ್‌ಗೆ ಕಾನೂನು ಸಹಾಯ ಮಾಡಲು ಮುಂದಾಗಿ ಜಾಮೀನು ಅರ್ಜಿ ಸಲ್ಲಿಸಲು ಹೋದಾಗ ನ್ಯಾಯಾಲಯದ ಹೊರಗೆ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. 75 ವರ್ಷದ ಹಿರಿಯ ವಕೀಲ ಘೋಷ್ ಅವರು ನಂತರ ಹಠಾತ್ ಎದೆ ನೋವಿನಿಂದ ಕೋಲ್ಕತ್ತಾದ ಸೇಠ್ ಸುಖಲಾಲ್ ಕರ್ನಾನಿ ಸ್ಮಾರಕ ಆಸ್ಪತ್ರೆಗೆ ದಾಖಲಾಗಿದ್ದರು. ವಿಚಾರಣೆ ವೇಳೆ ನೂರಾರು ವಕೀಲರು ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿ ಗೊಂದಲ ಸೃಷ್ಟಿಸಿದ್ದರು.
ಹೆಚ್ಚುವರಿ ಬಂಧನಗಳ ನಂತರ ಪರಿಸ್ಥಿತಿ ಹದಗೆಟ್ಟಿತು. ಇಸ್ಕಾನ್ ಕೋಲ್ಕತ್ತಾದ ಪ್ರಕಾರ, ಇಬ್ಬರು ಸನ್ಯಾಸಿಗಳಾದ ಆದಿಪುರುಷ ಶ್ಯಾಮ್ ದಾಸ್ ಮತ್ತು ರಂಗನಾಥ್ ದಾಸ್ ಬ್ರಹ್ಮಚಾರಿ ಅವರನ್ನು ನವೆಂಬರ್ 29 ರಂದು ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಕಸ್ಟಡಿಯಲ್ಲಿ ಭೇಟಿ ಮಾಡಿದ ನಂತರ ಬಂಧಿಸಲಾಯಿತು. ಅಶಾಂತಿಯ ಸಮಯದಲ್ಲಿ ಗಲಭೆಕೋರರು ಬಾಂಗ್ಲಾದೇಶದ ಇಸ್ಕಾನ್ ಕೇಂದ್ರವನ್ನು ಧ್ವಂಸಗೊಳಿಸಿದ್ದಾರೆ ಎಂದು ಸಂಘಟನೆಯ ಉಪಾಧ್ಯಕ್ಷ ರಾಧಾ ರಾಮನ್ ಹೇಳಿದ್ದಾರೆ.