ಮುಸ್ಲಿಂ ಬಾಂಧವರಿಂದ ಈದ್ ಮಿಲಾದ ಶಾಂತಿ ಸಂಭ್ರಮದಿಂದ ಆಚರಣೆ

ಮುಂಡಗೋಡ 21: ಮುಂಡಗೋಡ ತಾಲೂಕಾದ್ಯಂತ ಇಸ್ಲಾಂ ಧರ್ಮದ ಸಂಸ್ಥಾಪಕ ಹಜರತ್ ಮಹ್ಮದ ಪೈಗಂಬರ ಜನ್ಮದಿನವಾದ ಈದ್ ಮೀಲಾದ ಹಬ್ಬವನ್ನು ಶಾಂತಿ,ಸಡಗರ ಸಂಭ್ರಮದಿಂದ ಮುಸ್ಲೀಂ ಬಾಂದವರು ಆಚರಿಸಿದರು.

ಬುಧವಾರ ಪಟ್ಟಣದ ಐದು ಮಸೀದಿಗಳ ಜಮಾತಿನ ಹಾಗೂ  ತಾಲೂಕಿನ ಮುಸ್ಲೀಂ ಬಾಂದವರು ಬೆಳಗ್ಗೆ ಯಲ್ಲಾಪುರ ರಸ್ತೆ(ಬನ್ನಿಕಟ್ಟೆ)ಹತ್ತಿರ ಇರುವ ನೂರಾನಿ ಮಸ್ಜೀದ ಹತ್ತಿರ ಶುಭ್ರವಾಗಿ ಶ್ವೇತ ಬಟ್ಟೆಗಳನ್ನು ಧರಿಸಿ ಜಮಾವಣೆಗೊಂಡು ಅಲ್ಲಾಹನ ಸ್ತೋತ್ರಗಳು ಹೇಳುತ್ತಾ ಮಹ್ಮದ ಪೈಗಂಬರ ತೋರಿಸಿಕೊಟ್ಟ ಹಾದಿಯನ್ನು ನೆನೆಯುತ್ತಾ ಅವರಿಗೆ ಜೈಘೋಷ ಹಾಕುತ್ತಾ 10 ಗಂಟೆಗೆ ಮೆರವಣಿಗೆ ಹೋರಟಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಮೆರವಣಿಗೆ ನೋಡಲು ಇಕ್ಕೆಲಗಳಲ್ಲಿ ಜನರು ತಂಡೋಪತಂಡವಾಗಿ ನೋಡುತ್ತಿರುವುದು ಕಂಡು ಬಂದಿತು. ಮೆರವಣಿಗೆಯಲ್ಲಿ ಅಬಾಲ-ವಯೋವೃದ್ಧರು ಭಾಗವಹಿಸಿದ್ದರು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿರುವ ಮುಂಡಗೋಡ ಮುಸ್ಲೀಂ ಮುಖಂಡ ಬಿ.ಎಫ್.ಬೆಂಡಿಗೇರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು

  ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಸೇರಿದಂತೆ ಮೆರವಣಿಗೆಯನ್ನು ನೋಡುತ್ತಾ ನಿಂತಿರುವವರಿಗೆ ಸಿಹಿ ಹಂಚುತ್ತಿರುವುದು ಕಂಡು ಬಂದಿತು. ಮಕ್ಕಳು ಚಾಕಲೇಟ್ ಪಡೆಯಲು ನಾಮುಂದು ತಾಮುಂದು ಮಾಡುತ್ತಿರುವುದು ಕಂಡು ಬಂದಿತು. ಮತ್ತೆ ಕೆಲವರು ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಬಿಸ್ಲೇರಿ ನೀರಿನ ಬಾಟಲಿ ಪೂರೈಸಿ ದಾಹ ತೀರಿಸಿದರು.

ಮೆರವಣಿಗೆಯಲ್ಲಿ ಕೆಲವರು ಸ್ವಯಂ ವಾಲಂಟರ್ ಗಳಾಗಿ ಕೆಲಸಮಾಡುತ್ತಿದ್ದರು.