ಜಿಲ್ಲಾ ಬಚಾವೋ ಆಂದೋಲನ ಮೂಲಕ ಬೆಂಗಳೂರು ಚಲೋಗೆ ಕರೆ

Call for Bangalore Chalo through District Bachao Andolan

ಲೋಕದರ್ಶನ ವರದಿ 

ಜಿಲ್ಲಾ ಬಚಾವೋ ಆಂದೋಲನ ಮೂಲಕ ಬೆಂಗಳೂರು ಚಲೋಗೆ ಕರೆ 

 ಕೊಪ್ಪಳ 17: ಜಿಲ್ಲಾ ಕೇಂದ್ರದ ಹತ್ತಿರದಲ್ಲೇ ಬೃಹತ್ ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ಜನರಿಗೆ ಗೊತ್ತೇ ಆಗದಂತೆ ಅಧಿಕಾರಿಗಳು ಮಾಡಿರುವ ತಪ್ಪಿನಿಂದ ಆಗಿರುವ ಅನಾಹುತಗಳ ಬಗ್ಗೆ ಇದೇ ಅಧಿವೇಶನದಲ್ಲಿ ಚರ್ಚೆ ಮಾಡುವಂತೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಕೊನೆಯ ಕರೆ ನೀಡಿದ್ದು, ಅಧಿವೇಶನದಲ್ಲಿ ಮಾತನಾಡದಿದ್ದರೆ ಬೆಂಗಳೂರು ವಿಧಾನಸೌಧ ಚಲೋಗೆ ಕರೆ ನೀಡಲು ಸಭೆ ನಿರ್ಣಯಿಸಿತು. 

ಇದೇ ಮಾರ್ಚ್‌ 23, 24ರಂದು ಕುಷ್ಟಗಿ ತಾಲೂಕಿನ ತಾವರಗೇರ ಬುದ್ಧ ವಿಹಾರದಲ್ಲಿ ನಡೆಸಲು ಉದ್ದೇಶಿಸಿರುವ ಅಧ್ಯಯನ ಶಿಬಿರಕ್ಕೆ ಕಾರ್ಖಾನೆ ಬಾಧಿತ ಗ್ರಾಮಗಳ ಹೆಚ್ಚಿನ ಯುವಜನರನ್ನು ಭಾಗವಹಿಸುವಂತೆ ಮಾಡಲು ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆಸಿದ ಸಭೆಯಲ್ಲಿ ಈ ಕುರಿತು ನಿರ್ಣಯಿಸಲಾಯಿತು. 

ಕೊಪ್ಪಳದ ಬಲ್ಡೋಟ ಬಿಎಸ್‌ಪಿಎಲ್ ಕಂಪನಿಯ ಸ್ಪಾಂಜ್ ಐರನ್ ಮತ್ತು ಉಕ್ಕು ತಯಾರಿಕಾ ಘಟಕಕ್ಕೆ ವಿಸ್ತರಣೆಯ ಅನುಮತಿಯನ್ನು ಶಾಶ್ವತವಾಗಿ ಹಿಂಪಡೆಯಬೇಕು ಎಂದು ಆಗ್ರಹಿಸಿ ಕೊಪ್ಪಳ ಮತ್ತು ಬಾಧಿತ ಹಳ್ಳಿಗಳ ಜನರು ನಿರಂತರವಾಗಿ ಬೀದಿಗಿಳಿದು ಹೋರಾಡುತ್ತಿದ್ದಾರೆ.  ಗವಿಮಠದ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಕೊಪ್ಪಳ ಭಾಗ್ಯನಗರ ಬಂದ್ ಮತ್ತು ಬಹಿರಂಗ ಸಭೆಯಲ್ಲಿ ಪಕ್ಷಾತೀತವಾಗಿ ಈ ವಿಸ್ತರಣೆಯನ್ನು ವಿರೋಧಿಸುತ್ತೇವೆ ಎಂದು ಮೂರು ಪಕ್ಷಗಳ ಚುನಾಯಿತ ಪ್ರತಿನಿಧಿಗಳು ಹೇಳಿಕೊಂಡಿದ್ದವು. ಆದರೆ ಆಡಳಿತ ಮತ್ತು ವಿರೋಧ ಪಕ್ಷದವರು ಯಾರೂ ಸರಿಯಾಗಿ ಪ್ರಸ್ತುತ ಅಧಿವೇಶನದಲ್ಲಿ ಚರ್ಚೆಗೆ ತರುತ್ತಿಲ್ಲವಾದ್ದರಿಂದ ಕೊನೆಯ ಅವಕಾಶ ನೀಡಿದ್ದು, ತಾವು ಚರ್ಚೆ ಮಾಡದಿದ್ದಲ್ಲಿ ಜನರೇ ವಿಧಾನಸೌಧದ ಮುಂದೆ ಬಂದು ಮಾತನಾಡುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ನೇತೃತ್ವದಲ್ಲಿ ನಾಯಕರು ಜಿಲ್ಲೆಯ ಸರ್ವ ಪಕ್ಷಗಳ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳಲ್ಲಿ ಜನರ ವಿರೋಧ ಮತ್ತು ಸ್ವಾಮೀಜಿ ಹೋರಾಟದ ರಂಗಕ್ಕಿಳಿದದ್ದನ್ನು ಹೇಳಿಕೊಂಡು ಮೌಖಿಕವಾಗಿ ದೂರವಾಣಿಯಲ್ಲಿ ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್ ಮೂಲಕ ಜಿಲ್ಲಾಧಿಕಾರಿಗಳಿಗೆ ಕೆಲಸಕ್ಕೆ ತಡೆ ನೀಡಬೇಕು ಎನ್ನುವುದನ್ನೇ ದೊಡ್ಡ ಸಾಧನೆ ಮಾಡಲಾಗಿದೆ ಎನ್ನುವಂತೆ ಬಿಂಬಿಸಿ ಕೈತೊಳೆದುಕೊಂಡ ಹಾಗೆ ಕಂಡುಬರುತ್ತಿದೆ.  

ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಜಿಲ್ಲೆಯ ನಾಯಕರು ವೀರಾವೇಶದಿಂದ ಬಹಿರಂಗ ಸಭೆಯಲ್ಲಿ ಮಾತನಾಡಿ ಚಪ್ಪಾಳೆ ಗಿಟ್ಟಿಸಿಕೊಂಡು, ವಿಧಾನಸೌಧದ ಅಧಿವೇಶನದಲ್ಲಿ ಕೆಲಸಕ್ಕೆ ಬಾರದ ಮತ್ತು ಸ್ಪಷ್ಟತೆ ಇಲ್ಲದ ಪ್ರಶ್ನೆಗಳನ್ನು ಕೇಳಿ ಈ ಗಂಭೀರವಾದ ಕೊಪ್ಪಳ ಜನರ ಸಮಸ್ಯೆಯನ್ನು ಹಗುರವಾಗಿ ತೆಗೆದುಕೊಂಡು ಆಳುವ ಪಕ್ಷದೊಂದಿಗೆ ರಾಜೀ ಮಾಡಿಕೊಂಡು ಕಂಪನಿಗೆ ಬೆನ್ನೆಲುಬಾಗಿ ನಿಂತಂತೆ ಕಾಣುತ್ತಿದೆ. ಇದನ್ನು ಒಪ್ಪಲಾಗದು, ಜನರ ಹೋರಾಟ ತೀವ್ರ ಸ್ವರೂಪಕ್ಕೆ ತಿರುಗುತ್ತದೆ ಎಂದು ತಿಳಿಸಿದ್ದಾರೆ. 

ಈಗ ನಡೆದಿರುವ ಅಧಿವೇಶನದಲ್ಲಿ ಜಿಲ್ಲಾ ಮಂತ್ರಿಗಳಾದ ಶಿವರಾಜ ತಂಗಡಗಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಜನತೆಗೆ ಕೊಟ್ಟ ಭರವಸೆಯಂತೆ ಬಲ್ಟೋಟ ಬಿಎಸ್‌ಪಿಎಲ್ ವಿಸ್ತರಣೆ ಶಾಸ್ವತವಾಗಿ ಇಂಪಡೆದ ಆದೇಶವನ್ನು ಸರ್ಕಾರದಿಂದ ಮಾಡಿಸಬೇಕು. ವಿರೋಧ ಪಕ್ಷವೂ ಒತ್ತಾಯಿಸಬೇಕು. ಕಾರ್ಖಾನೆಗಳ ಕುರಿತು ಶ್ವೇತ ಪತ್ರ ಹೊರಡಿಸಬೇಕೆಂದು ಒತ್ತಡ ತರಬೇಕೆಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಸಭೆ ನಿರ್ಣಯ ತೆಗೆದುಕೊಂಡಿದ್ದು, ಮುಂದಿನ ನಿರಂತರ ಹೋರಾಟಕ್ಕೆ ಸಮಯ ನಿಗದಿ ಮಾಡಲು ನಿರ್ಧರಿಸಲಾಗಿದೆ. 

ಸಭೆಯಲ್ಲಿ ಸಮಿತಿಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಕೆ. ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಶರಣು ಗಡ್ಡಿ, ಮುದುಕಪ್ಪ ಹೊಸಮನಿ, ಶರಣು ಪಾಟೀಲ್, ಶಿವಪ್ಪ ಹಡಪದ, ಶರಣು ಶೆಟ್ಟರ್, ಲಕ್ಷ್ಮಣ ಪೀರಗಾರ, ಕಾಶಪ್ಪ ಛಲವಾದಿ ಇತರರು ಇದ್ದರು.