ಕಲ್ಲಿಕೋಟೆ, ಜೂನ್ 14, ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸಾಮಾನ್ಯ ರೀತಿಯಲ್ಲಿ ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಕೊಲ್ಲಿಯಿಂದ ಬರುವ ಎಲ್ಲಾ ವಿಮಾನಗಳು ಇಲ್ಲಿ ಇಳಿಯಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ವಿಮಾನ ನಿಲ್ದಾಣದ ಸಾಮಾನ್ಯ ಕಾರ್ಯವೈಖರಿಯ ಬಗ್ಗೆ ಯಾವುದೇ ಆತಂಕದ ಅಗತ್ಯವಿಲ್ಲ ಎಂದು ವಿಮಾನ ನಿಲ್ದಾಣದ ಫೇಸ್‌ಬುಕ್ ಪೇಜ್‌ನಲ್ಲಿ ಸಾರ್ವಜನಿಕರಿಗೆ ತಿಳಿಸಲಾಗಿದೆ.ಶನಿವಾರ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ಒಬ್ಬರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟ ನಂತರ ಅದರ ನಿರ್ದೇಶಕರು ಸೇರಿದಂತೆ ಮೂವತ್ತು ಸಿಬ್ಬಂದಿಯನ್ನು ಕ್ಯಾರೆಂಟೈನ್‌ನಲ್ಲಿ ಇಡಲಾಗಿದೆ.ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ವಿಶೇಷ ತಂಡ ಕಾರ್ಯನಿರತವಾಗಿದೆ ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ ದೃಢಪಡಿಸಿದ್ದಾರೆ. ಪ್ರಾಥಮಿಕ ಪಟ್ಟಿಯಲ್ಲಿರುವವರಿಗೆ ಕಡ್ಡಾಯವಾಗಿ ಮನೆ ಕ್ಯಾರೆಂಟೈನ್‌ನ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಎಫ್‌ಬಿ ಪೋಸ್ಟ್ ತಿಳಿಸಿದೆ.
ನಿಗದಿಪಡಿಸಿದ ನಿಯಮಗಳು ಮತ್ತು ಮಾನದಂಡಗಳ ಆಧಾರದ ಮೇಲೆ ಪ್ರಾಥಮಿಕ ಸಂಪರ್ಕಿತರ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ ಮತ್ತು ಅಂತಹ ಸಿಬ್ಬಂದಿ ಆರೋಗ್ಯ ಇಲಾಖೆಯ ಮೇಲ್ವಿಚಾರಣೆಯಲ್ಲಿ ಕ್ವಾರಂಟೈನ್‌ನಲ್ಲಿ ಇರುತ್ತಾರೆ ಎಂದು ತಿಳಿಸಲಾಗಿದೆ.ರೋಗಲಕ್ಷಣಗಳುಳ್ಳ ಇತರ ಯಾವುದೇ ಸಿಬ್ಬಂದಿ ತಕ್ಷಣ ಆರೋಗ್ಯ ಇಲಾಖೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ವಿಮಾನ ನಿಲ್ದಾಣದ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಯಾವುದೇ ದೃಢೀಕರಿಸದ ಸುದ್ದಿಗಳನ್ನು ಹರಡದಂತೆ ಕೋರಲಾಗಿದೆ ಎಂದು ಎಫ್‌ಬಿ ಪೋಸ್ಟ್ ತಿಳಿಸಿದೆ.ಶನಿವಾರದಿಂದ ಅನೇಕ ಅಧಿಕಾರಿಗಳನ್ನು ಕ್ವಾರಂಟೈನ್‌ನಲ್ಲಿ ಇರಿಸಿರುವುದರಿಂದ ನಿಲ್ದಾಣವನ್ನು ಮುಚ್ಚಬಹುದೆಂಬ ಆತಂಕ ವ್ಯಕ್ತಪಡಿಸುವ ಸುದ್ದಿಗಳು ಹಬ್ಬಿದ್ದವು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಅಧಿಕಾರಿಗಳು ಈ ಸ್ಪಷ್ಟನೆ ನೀಡಿದ್ದಾರೆ.