ಅಮಾಯಕರ ಮೇಲೆ ದೇಶ ದ್ರೋಹ ಪ್ರಕರಣ: ಕಾಂಗ್ರೆಸ್ ನಿಂದ ಪ್ರತಿಭಟನೆ

ಬೆಂಗಳೂರು,ಫೆ‌.15 :   ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಅಮಾಯಕರ ವಿರುದ್ಧ ದೇಶದ್ರೊಹ ಮತ್ತಿತರ ಪ್ರಕರಣಗಳನ್ನು ದಾಖಲಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ಧೋರಣೆ ಖಂಡಿಸಿ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ನಗರದಲ್ಲಿಂದು ಬೃಹತ್ ಪ್ರತಿಭನೆ ನಡೆಸಲಾಯಿತು. 

ಬಿಜೆಪಿ ಆಡಳಿತ ಧೋರಣೆ ವಿರುದ್ಧ ಬೀದಿಗಿಳಿದ ಕಾಂಗ್ರೆಸ್ ನಾಯಕರು ಮೌರ್ಯ ವೃತ್ತದ ಗಾಂಧಿ ಪ್ರತಿಮೆಯಿಂದ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಠಾ ವರೆಗೆ ಬೃಹತ್ ಪ್ರತಿಭಟನಾ ರಾಲಿ ನಡೆಸಿದರು.

ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಸಂಸದ ಡಿ.ಕೆ ಸುರೇಶ್, ಮಾಜಿ ಸಂಸದ ಉಗ್ರಪ್ಪ  ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

ಸಿದ್ದರಾಮಯ್ಯ ಮಾತನಾಡಿ, ನಿಜವಾಗಿ ದೇಶದ್ರೋಹ ಮಾಡುವವರು ಬಿಜೆಪಿಯವರು. ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ನಲ್ಲಿ ಪಕ್ಷದ ಶಾಸಕ ಖಾದರ್ ಮೇಲೆ, ಮೈಸೂರಿನಲ್ಲಿ ಫ್ರೀ ಕಾಶ್ಮೀರ್ ಎಂದು ಹೆಣ್ಣುಮಗಳು ಹೇಳಿದ್ದಕ್ಕೆ ಅವರ ವಿರುದ್ಧ ಹಾಗೂ ಬೀದರ್ ನ ಶಾಹೀನ್ ಶಾಲೆಯಲ್ಲಿ ನಡೆದ ವಿಡಂಬನಾತ್ಮಕ ನಾಟಕ ಪ್ರದರ್ಶನಕ್ಕಾಗಿ ಶಾಲಾಶಿಕ್ಷಕಿ ಮತ್ತು ವಿದ್ಯಾರ್ಥಿನಿ ತಾಯಿಯ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಪೌರತ್ವ ತಿದ್ದುಪಡಿ ಕಾಯ್ದೆ -ಸಿಎಎ ವಿರುದ್ಧ ನಾಟಕದ ಪಾತ್ರಧಾರಿ ದಾಖಲೆ ಕೇಳಿದರೆ ನಾನು ಸ್ಮಶಾನಕ್ಕೆ ಹೋಗಿ ಬಗೆದು ತರಲೇ? ದಾಖಲೆ ಕೇಳಲು ಬಂದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಡೈಲಾಗ್ ಹೇಳಿದ್ದಾಳೆ. ಇದು ಪ್ರಧಾನಿ ನರೇಂದ್ರ ಮೋದಿಗೆ ಹೇಳಿದ್ದು ಎಂದು ವಿನಾಕಾರಣ ಆ ಮಗುವನ್ನು ವಿಚಾರಣೆ ನಡೆಸಿದ್ದಾರೆ. ತಾಯಿಯ ಮೇಲೆ ಪ್ರಕರಣದ ದಾಖಲು ಮಾಡಿದ್ದಾರೆ. ನಾಟಕಕಾರ ದಿ.ಹಿರಣ್ಣಯ್ಯ ಎಷ್ಟು ವಿಡಂಬನೆ ಮಾಡಿದ್ದಾರೆ. ನಾಟಕ ಅಭಿವ್ಯಕ್ತಿ ಮಾಧ್ಯಮ.  ಆದರೆ ಮಗು ಹೇಳಿದೆ ಎಂದು ಪೊಲೀಸರು ಪ್ರಕರಣ ದಾಖಲಿಸುತ್ತಾರೆ. ಆ ವಿಧವೆ ತಾಯಿ  ತನ್ನ ಮಗುವನ್ನು ಕಷ್ಟಪಟ್ಟು ಓದಿಸುತ್ತಿದ್ದಾರೆ. ಆ ತಾಯಿಯ ಮೇಲೂ ಕೇಸ್ ಹಾಕಿ ಐದು ಬಾರಿ ಶಾಲಾ ಮಕ್ಕಳನ್ನು ವಿಚಾರಣೆಗೊಳಪಡಿಸಿದ್ದಾರೆ. 90 ವಿದ್ಯಾರ್ಥಿಗಳು ವಿಚಾರಣೆ ನೆಪದಲ್ಲಿ ಕಿರಿಕಿರಿ ಅನುಭವಿಸಿದ್ದಾರೆ. ಇದು ಸಾರ್ವಜನಿಕ ಅಪರಾಧವಾಗಿದ್ದು, ಮುಖ್ಯಶಿಕ್ಷಕಿಯ ಮೇಲೂ ಪ್ರಕರಣ ದಾಖಲಿಸಿರುವುದು ಅಮಾನವೀಯ ಎಂದರು. 

ಈ ಇಬ್ಬರಿಗೆ ಕೋರ್ಟ್ ಜಾಮೀನು ಕೊಟ್ಟಿದೆ. ಜೈಲಿಗೆ ಹೋಗಿ ಅವರನ್ನು  ವಿಚಾರಿಸಿದಾಗ ಹೆಣ್ಣುಮಕ್ಕಳ ಮೇಲೆ ಪೊಲೀಸರು ಸುಳ್ಳು ಕೇಸ್ ಹಾಕಿ ಜೈಲಿಗೆ ಕಳಿಸಿರುವುದು ಕಂಡು ಬಂತು. ಪೊಲೀಸರು ನಿಕ್ಷಪಾತ ಕೆಲಸ ಮಾಡದೇ ಕೇವಲ ಕಾಂಗ್ರೆಸ್ ಪಕ್ಷದವರನ್ನು ಮಾತ್ರವೇ ಗುರಿಯಾಗಿಸಿ ಕೇಸ್ ದಾಖಲಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿಯ ಸೋಮಶೇಖರ್ ರೆಡ್ಡಿ ಪ್ರಚೋದನಾತ್ಮಕ ಉಗ್ರ ಹೇಳಿಕೆ ಕೊಟ್ಟರೂ ಸಹ ಪೊಲೀಸರೇಕೆ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಿಲ್ಲ. ಆರ್‌.ಎಸ್.ಎಸ್‌ನ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಯಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ಕೆಟ್ಟದಾಗಿ ತೋರಿಸುತ್ತಾರೆ. ಸುಪ್ರೀಂ ಕೋರ್ಟ್ ಮಸೀದಿ ಒಡೆದದ್ದನ್ನು ಕಾನೂನು ಬಾಹಿರ ಎಂದಿದೆ. ಹೀಗಿದ್ದ ಮೇಲೂ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು. 

ಆರ್. ಅಶೋಕ್, ಅನಂತ್ ಕುಮಾರ್ ಹೆಗಡೆ, ಸಿ.ಟಿ.ರವಿ, ಅದು ಎಂತದ್ದೋ ಸೂರ್ಯ ನ ಮೇಲೆ ಯಾವ ಪ್ರಕರಣವೂ ಇಲ್ಲ.

ಪ್ರತಾಪ್ ಸಿಂಹ, ನಳೀನ್ ಕುಮಾರ್ ಕಟೀಲ್ ಮೇಲೆ ಕೇಸ್ ಹಾಕಿಲ್ಲ. ಸಂತೋಷ್  ಮೇಲೆ ಯಾವ ಪ್ರಕರಣವೂ ದಾಖಲಾಗಿಲ್ಲ. ಈ ಬಗ್ಗೆ ಮೊದಲು ಪೊಲೀಸರು ಹೇಳಲಿ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರು ಸರ್ಕಾರದ ಕೈಗೊಂಬೆಯಾಗಿದ್ದಾರೆ. ಬೀದರ್ ಶಾಲೆ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಪೊಲೀಸರು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ರಾಜ್ಯದಲ್ಲಿ ಯಡಿಯೂರಪ್ಪನವರೇ ಶಾಶ್ವತವಾಗಿ ಗೂಟ ಹೊಡೆದುಕೊಂಡಿರುವುದಿಲ್ಲ. ಗೃಹ ಇಲಾಖೆ ಮತ್ತು ಪೊಲೀಸ್ ವ್ಯವಸ್ಥೆ ಇರುವುದು ರಾಜ್ಯದಲ್ಲಿ ಇರುವುದು ಶಾಂತಿ ಕಾಪಾಡಲೇ ಹೊರತು  ಬಿಜೆಪಿ ನಾಯಕರ ಮಾತು ಕೇಳಿ ಕಾನೂನು ದುರಪಯೋಗ ಮಾಡಿಕೊಳ್ಳಲು ಅಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪೊಲೀಸರಿಗೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಮಾತನಾಡಿ, ಶಾಹೀನ್ ಶಾಲೆಯಲ್ಲಿ  ಶಿಕ್ಷಕರ ಮತ್ತು ಮಕ್ಕಳ ವಿರುದ್ಧ ಅಮಾನವೀಯವಾಗಿ ಪ್ರಕರಣ ದಾಖಲಿಸಲಾಗಿದೆ. ಶುಕ್ರವಾರ ಅವರಿಗೆ ಜಾಮೀನು ಸಿಕ್ಕಿದ್ದು, ಪೊಲೀಸ್ ಇಲಾಖೆ ದುರ್ಬಳಕೆ ಆಗುತ್ತಿದೆ. ಸಚಿವ ಸಿ.ಟಿ.ರವಿ, ಆರ್.ಎಸ್.ಎಸ್.ನ ಕಲ್ಲಡ್ಕ ಪ್ರಭಾಕರ್ ಭಟ್,  ಶಾಸಕ ರೇಣುಕಾಚಾರ್ಯ, ಸಂಸದ ಅನಂತ್ ಕುಮಾರ್ ಹೆಗಡೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಆದರೆ  ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಆದರೆ ಕಾಂಗ್ರೆಸ್‌ನ ಯು ಟಿ ಖಾದರ್ ಮಾತಾಡಿದರೆ ಮಾತ್ರ ದೇಶದ್ರೋಹದ ಕೇಸ್ ಹಾಕುತ್ತಾರೆ? ಏಕೆ ಹೀಗೆ? ಎಂದು ಪ್ರಶ್ನಿಸಿದರು.

ಇಂತಹ ತಾರತಮ್ಯ ಖಂಡಿಸಿ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಮುತ್ತಿಗೆ ಹಾಕಲಾಗುತ್ತಿದೆ. ಬಿಜೆಪಿಯಿಂದ ಸಮಾಜದಲ್ಲಿ

ಭಯದ ವಾತಾವರಣ ಸೃಷ್ಟಿ ಮಾಡುತ್ತಿದೆ. ಇದರ ವಿರುದ್ಧ ಜನಪರವಾಗಿ ಪಕ್ಷ ಹೋರಾಟ ಮಾಡಲಿದೆ ಎಂದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಭಯದಲ್ಲಿಯೇ ಜೀವಿಸುವಂತಾಗಿದೆ.ಕಾಂಗ್ರೆಸ್ ಕಾರ್ಯಕರ್ತರ ವಿನಾಕಾರಣ ದೂರು ದಾಖಲಿಸಲಾಗುತ್ತಿದೆ‌. ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲದಂತಾಗಿದ್ದು. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸುವ ಅನಿವಾರ್ಯತೆ ಎದುರಾಗಿದೆ‌. ಹೀಗಾಗಿ ಹೋರಾಟಕ್ಕೆ ಇಳಿದಿರುವಯುದಾಗಿ ಹೇಳಿದರು. 

ದೇಶದಲ್ಲಿ ಹಿಟ್ಲರ್ ಆಡಳಿತ ಕೊನೆಗೊಳ್ಳುವ ಕಾಲ ಹತ್ತಿರದಲ್ಲಿದೆ. ಇತ್ತೀಚೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತಿದೆ  ದೇಶದಲ್ಲಿ ಅವರ ಅವನತಿ ಪ್ರಾರಂಭವಾಗಿದ್ದು, ಅಭಿವೃದ್ಧಿ ಕೆಲಸ ಕಾರ್ಯಗಳು  ಸಮರ್ಪಕವಾಗಿ ನಡೆಯುತ್ತಿಲ್ಲ. ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಕ್ಷೇತ್ರದ ಶಾಸಕರಿಗೆ ಅನುದಾನ ದೊರೆಯುತ್ತಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಏನೂ ನಡೆಯುತ್ತಿಲ್ಲ ಎಂದು ರಾಜ್ಯ,ಕೇಂದ್ರದ ವಿರುದ್ಧ ಸುರೇಶ್ ವಾಗ್ದಾಳಿ ನಡೆಸಿದರು.

ಮಾಜಿ ಸಂಸದ ಉಗ್ರಪ್ಪ ಮಾತನಾಡಿ, ರಾಜ್ಯ ಸರ್ಕಾರ ಸಂವಿಧಾನವನ್ನು ಗಾಳಿಗೆ ತೂರಿ ತನ್ನ ರಾಜಕೀಯ ದುರುದ್ದೇಶಗಳಿಗೆ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಿಸಿಎ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದು ಉಲ್ಲಂಘನೆ ಎಂದು ಹೈಕೋರ್ಟ್ ಛೀಮಾರಿ ಹಾಕಿದೆ. ಬಿಜೆಪಿಯವರು ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಹ್ಯಾರೀಸ್ ಪುತ್ರನ ಅಪರಾಧ ವಿಚಾರವನ್ನು ಪೊಲೀಸರು ದೊಡ್ಡದಾಗಿ ಬಿಂಬಿಸಿದರು. ಅಪಘಾತ ನಡೆದಾಗ ನಲ್‌ಪಾಡ್ ಇದ್ದರೋ ಇಲ್ಲವೋ ಗೊತ್ತಿಲ್ಲ ಆದರೂ ಪೊಲೀಸರು ಕೇಸ್ ದಾಖಲಿಸಿದರು‌. ಆದರೆ ಸಚಿವ ಆಶೋಕ್ ಅವರ ಮಗ ಆಕ್ಸಿಡೆಂಟ್ ಮಾಡಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಏನು ಆಗಿಯೇ ಇಲ್ಲ ಎನ್ನುತ್ತಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ಪ್ರತ್ಯಕ್ಷ ದರ್ಶಿಗಳು ಅಶೋಕ್ ಮಗ ಇದ್ದರು ಎಂದು ಹೇಳಿದರೂ ಸಹ ಪೊಲೀಸರು ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಇದು ಪೊಲೀಸರ ತಾರತಮ್ಯ ನೀತಿಯನ್ನು ತೋರಿಸುತ್ತಿದೆ ಎಂದು ಉಗ್ರಪ್ಪ ವಾಗ್ದಾಳಿ ನಡೆಸಿದರು.