ಬೆಂಗಳೂರು,ಮಾ.11,ಸರ್ಕಾರದ ಆದೇಶ ಪಾಲಿಸದ ಕೆಲವು ಶಾಲೆಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ನಗರ (ಜಿಲ್ಲೆ) ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪೂರ್ವ ಪ್ರಾಥಮಿಕ, ಎಲ್ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ ಶಾಲೆಗಳ ತರಗತಿಗಳಿಗೆ (1 ರಿಂದ 5) ರಜೆ ಘೋಷಿಸಲಾಗಿದೆ. ಈ ಆದೇಶವನ್ನು ಪಾಲಿಸುವುದು ಈ ಪ್ರದೇಶಗಳಲ್ಲಿರುವ ಎಲ್ಲಾ ಶಾಲೆಗಳ ಕರ್ತವ್ಯ. ಕೆಲವು ಖಾಸಗಿ ಶಾಲೆಗಳು ಸರ್ಕಾರದ ಈ ಆದೇಶಕ್ಕೆ ಗೌರವ ಕೊಡದೇ ತಮ್ಮದೇ ಬೇರೆ ಸಾಮ್ರಾಜ್ಯ ಎಂದು ತಿಳಿದು ವ್ಯತಿರಿಕ್ತವಾಗಿ ವರ್ತಿಸುತ್ತಿರುವುದು ತಿಳಿದುಬಂದಿದೆ. ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸದೆ ಇರುವ ಖಾಸಗಿ ಶಾಲೆಗಳಿಗೆ ಈ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.ಸರ್ಕಾರದ ಆದೇಶ ಪಾಲಿಸದಿರುವ ಶಾಲೆಗಳು, ಅದೆಷ್ಟೇ "ಪ್ರಭಾವಶಾಲಿ"ಯಾಗಿದ್ದರೂ ತಿಳಿದುಕೊಂಡಿದ್ದರೂ ಅವುಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಎಳೆ ಮಕ್ಕಳ ಹಿತದೃಷ್ಟಿಯಿಂದ ಎಂದು ಮನಗಾಣಬೇಕು ಎಂದು ಅವರು ತಿಳಿಸಿದ್ದಾರೆ.ಸರ್ಕಾರದ ಆದೇಶ ಪಾಲಿಸದಿರುವುದು ನಮ್ಮ ಪ್ರತಿಷ್ಠೆ ಎಂದುಕೊಂಡಿರುವ ಆ ಎಲ್ಲಾ ಶಾಲೆಗಳಿಗೆ ಇದೊಂದು " ಕಿವಿಮಾತು". "ಮಕ್ಕಳ ಹಿತಕ್ಕಿಂತ ನಿಮ್ಮ ಪ್ರತಿಷ್ಠೆ ಪ್ರಮುಖವಲ್ಲ" ಎಂದು ಶಿಕ್ಷಣ ಸಚಿವರು ಫೇಸ್ಬುಕ್ ಮೂಲಕ ಎಚ್ಚರಿಕೆ ನೀಡಿದ್ದಾರೆ.