ಸಿಎಎ ಕಾಯ್ದೆ ಹಿಂಪಡೆಯುವುದಿಲ್ಲ, ೧೩ ತಿಂಗಳೊಳಗೆ ಆಯೋಧ್ಯೆಯಲ್ಲಿ ರಾಮಮಂದಿರ; ಅಮಿತ್ ಶಾ

ಲಕ್ನೋ,  ಜ ೨೧:      ದೇಶದೆಲ್ಲೆಡೆ ಪರ  ಹಾಗೂ ವಿರೋಧ  ವ್ಯಾಪಕ ಪ್ರತಿಭಟನೆಯಿಂದಾಗಿ   ತೀವ್ರ ವಿವಾದಗ್ರಸ್ಥವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ( ಸಿಎಎ) ಜಾರಿಗೊಳಿಸುವ  ಬಗ್ಗೆ  ಕೇಂದ್ರ ಗೃಹ ಸಚಿವ ಅಮಿತ್ ಶಾ  ಮಂಗಳವಾರ   ಸ್ಪಷ್ಟ ಘೋಷಣೆ ಮಾಡಿದ್ದು,  ಸಿಎಎ ಕಾಯ್ದೆಯನ್ನು   ಕೇಂದ್ರ ಸರ್ಕಾರ  ಹಿಂಪಡೆಯುವ ಪ್ರಶ್ನೇಯೇ ಇಲ್ಲ,  ದೇಶಾದ್ಯಂತ  ಜಾರಿಗೊಳಿಸುವುದು ಶತ ಸಿದ್ಧ ಎಂದು ಹೇಳಿದ್ದಾರೆ.  ಆಯೋಧ್ಯೆಯಲ್ಲಿ  ೧೩ ತಿಂಗಳೊಳಗೆ ಭವ್ಯ  ರಾಮಮಂದಿರ ನಿರ್ಮಿಸಲಿದ್ದೇವೆ ಎಂದು ಪ್ರಕಟಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ  ಪರವಾಗಿ ಲಕ್ನೋದಲ್ಲಿ  ಆಯೋಜಿಸಲಾಗಿದ್ದ  ಬೃಹತ್ ಸಮಾವೇಶ  ಉದ್ದೇಶಿಸಿ ಮಾತನಾಡಿದ  ಅಮಿತ್ ಶಾ, ದೇಶವನ್ನು  ವಿಭಜಿಸಲು ಬಯಸಿರುವ  “ತುಕ್ಡೆ ತುಕ್ಡೆ”   ಗುಂಪಿಗೆ  ಪ್ರತಿಪಕ್ಷ  ಕಾಂಗ್ರೆಸ್   ನಾಯಕರು ಬೆಂಬಲವಾಗಿ ನಿಂತಿದ್ದಾರೆ  ಎಂದು ಆರೋಪಿಸಿದರು.

ಭಾರತದ  ವಿರುದ್ದವಾಗಿ  ಯಾರೇ   ಚಟುವಟಿಕೆ   ನಡೆಸಿದರೆ,  ಅಂತವರನ್ನು  ಜೈಲಿಗೆ  ಅಟ್ಟುವುದಾಗಿ  ಶಾ  ಎಚ್ಚರಿಕೆ ನೀಡಿದರು. ಕಾಂಗ್ರೆಸ್, ಪಾಕಿಸ್ತಾನ  ಪ್ರಧಾನಿ  ಇಮ್ರಾನ್ ಖಾನ್   ಒಂದೇ ದ್ವನಿಯಲ್ಲಿ ಮಾತನಾಡುತ್ತಿದ್ದಾರೆ ಎಂದು  ಅವರು  ಟೀಕಿಸಿದರು.

ದೇಶಾದ್ಯಂತ   ಹಿಂಸಾಚಾರ ಹಾಗೂ  ಘರ್ಷಣೆಗಳಿಗೆ  ಕಾಂಗ್ರೆಸ್  ನೇರ ಬೆಂಬಲ ನೀಡುತ್ತಿದೆ   ಎಂದು  ದೂರಿದರು.  ಸಿಎಎ ಕಾಯ್ದೆಗೆ  ವಿರುದ್ದವಾಗಿ  ಸ್ಪಷ್ಟ ಸಂಚು ರೂಪಿಸಲಾಗುತ್ತಿದೆ.  ಸಿಎಎ ಕುರಿತು  ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಚರ್ಚೆಗೆ ಎಲ್ಲಿಗೆ ಕರೆದರೂ ಅಲ್ಲಿಗೆ ತೆರಳಲು ತಾವು ಸಿದ್ದ  ಎಂದು  ಅಮಿತ್ ಶಾ ಪ್ರತಿ ಸವಾಲು ಹಾಕಿದರು.