ಏಪ್ರಿಲ್ 14 ನಂತರ ಲಾಕ್‍ಡೌನ್‍ ಮುಂದುವರಿಸದಂತೆ ಪ್ರಧಾನಿ, ಮುಖ್ಯಮಂತ್ರಿಗೆ ಉದ್ಯಮಿಗಳಿಂದ ಮನವಿ

ಬೆಂಗಳೂರು, ಏಪ್ರಿಲ್ 7,  ಸದ್ಯ ಜಾರಿಯಲ್ಲಿರುವ ಲಾಕ್‍ಡೌನ್‍ ಅನ್ನು ಏಪ್ರಿಲ್ 14ರ ನಂತರ ಮುಂದುವರಿಸದಂತೆ ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಮತ್ತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಲಾಕ್‍ಡೌನ್‍ ನಂತರ ಕೈಗಾರಿಕೆಗಳ ಉತ್ಪಾದನೆ ಸ್ಥಗಿತಗೊಂಡಿದೆ. ಕೋಟ್ಯಂತರ ಜನರು ನಿರುದ್ಯೋಗಿಗಳಾಗಿದ್ದಾರೆ ಮತ್ತು ಕೈಗಾರಿಕೆಗಳು ಭಾರಿ ನಷ್ಟವನ್ನು ಅನುಭವಿಸುತ್ತಿವೆ ಎಂದು ದಕ್ಷಿಣ ಭಾರತದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಆರ್.ರಾಜು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಮನವಿ ಪತ್ರದ ನಕಲು ಪ್ರತಿಯನ್ನು ಇಲ್ಲಿ ಪತ್ರಿಕಾ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.  
ಕಳೆದ ತಿಂಗಳಿನಿಂದ ಉತ್ಪಾದನೆ ಕುಂಠಿತಗೊಂಡು ದೇಶದ ಆರ್ಥಿಕತೆಯ ಮೇಲೆ ತೀವ್ರ  ಪರಿಣಾಮ ಬೀರಿದೆ. ಇದು, ಇಡೀ ಉದ್ಯಮ ಸಮುದಾಯದ ಮೇಲೆ ತೀವ್ರ ಹೊಡೆತ ಬಿದ್ದಿದೆ. ಉದ್ಯಮಗಳು ನೌಕರರಿಗೆ ಸಂಬಳವನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ.  ಉದ್ಯಮಗಳ ಕಾರ್ಯಾರಂಭಕ್ಕೆ ಅವಕಾಶ ಮಾಡಿಕೊಟ್ಟರೆ ಕೆಲಸದ ಸ್ಥಳದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುವುದಾಗಿ ಮನವಿ ಮಾಡಲಾಗಿದೆ ರಾಜು ಹೇಳಿದ್ದಾರೆ. ಉದ್ಯಮಗಳು ಮತ್ತು ಕೈಗಾರಿಕೆಗಳು ಮುಚ್ಚಿರುವುದರಿಂದ ಎಂಎಸ್‌ಎಂಇ ವಲಯ  ಪ್ರತಿದಿನ 1,000 ಕೋಟಿ ರೂ.ಗಳಿಂದ 1500 ಕೋಟಿ ರೂ.ಗೆ ನಷ್ಟವಾಗುತ್ತಿದೆ. ಸರ್ಕಾರ  500 ಕೋಟಿ ರೂ.ಜಿಎಸ್‌ಟಿಯನ್ನು ಕಳೆದುಕೊಳ್ಳುತ್ತಿದೆ. ಭಾರಿ ನಷ್ಟವನ್ನು ಅನುಭವಿಸಿದ ನಂತರ ಉದ್ಯಮ ಮುಂದುವರಿಸುವುದು ತುಂಬಾ ಕಷ್ಟಕರವಾಗುತ್ತದೆ ಎಂದು ಅವರು ಹೇಳಿದ್ದಾರೆ. ಅಗತ್ಯ ಸೇವೆಯಡಿಯಲ್ಲಿ ಕಾರ್ಯನಿರ್ವಹಿಸಲು ಎಂಎಸ್‌ಎಂಇಗಳಿಗೆ ಅನುಮತಿ ನೀಡಬೇಕು. ಇವು ಕಾರ್ಯನಿರ್ವಹಿಸದಿರುವುದರಿಂದ ಭಾರೀ ಕೈಗಾರಿಕೆಗಳ ಮೇಲೆ ಪರಿಣಾಮ ಬೀರುವುದರ ಜೊತೆಗೆ ನಿರುದ್ಯೋಗಕ್ಕೆ ಕಾರಣವಾಗಲಿದೆ ಎಂದು ರಾಜು ಆತಂಕ ವ್ಯಕ್ತಪಡಿಸಿದ್ದಾರೆ.