ಬೆಂಗಳೂರು, ಏ.29,ಕೇಂದ್ರ ಸರ್ಕಾರದಿಂದ ಉದ್ಯಮಿಗಳ ಸಾಲಮನ್ನಾ ವಿರೋಧಿಸಿ ಬೆಂಗಳೂರು ನಗರ ಯುವ ಕಾಂಗ್ರೆಸ್ ಮೌನ ಪ್ರತಿಭಟನೆ ನಡೆಸಿತು.ಕಾಂಗ್ರೆಸ್ ಭವನ ಮುಂಭಾಗ ಇಂದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಸಾಲ ತೀರಿಸಲಾಗದೆ ಕುಖ್ಯಾತರಾಗಿರುವ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಸೇರಿದಂತೆ 50 ಮಂದಿ ಬಾಕಿ ಉಳಿಸಿಕೊಂಡಿರುವ 68,607 ಕೋಟಿ ರೂ. ಸಾಲವನ್ನು ಮೋದಿ ಸರ್ಕಾರ ರೈಟ್ ಆಫ್ ಮಾಡಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ಪ್ರಮುಖ ‘ಸಾಲಕೋರರ’ ಸಾಲಮನ್ನಾ ಮಾಡಿ ಜನ ಸಾಮಾನ್ಯರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ವಿಜಯ್ ಮಲ್ಯಾ ,ಮೇಹುಲ್ ಚೋಕ್ಸಿ,ರಾಮದೇವ್ ಈ ಮೂವರ ಫೋಸ್ಟರ್ ಹಿಡಿದುಕೊಂಡು ಮೌನವಾಗಿಯೇ ಆಕ್ರೋಶ ವ್ಯಕ್ತಪಡಿಸಿ ಕಿಡಿಕಾರಿದರು. ಕಾಂಗ್ರೆಸ್ ಮುಖಂಡ ಮನೋಹರ್ ಮಾತನಾಡಿ, ರಾಹುಲ್ ಗಾಂಧಿ ಈ ಸಾಲಗಾರರ ಸಾಲದ ಬಗ್ಗೆ ಸಂಸತ್ತಿನಲ್ಲಿಯೇ ಪ್ರಸ್ತಾಪಿಸಿದ್ದರು. ಈಗ ಕೇಂದ್ರ ಸರ್ಕಾರ ಅವರ ಸಾಲ ಮನ್ನಾ ಮಾಡಿದೆ. ಕೊರೋನಾದಂತಹ ಸಂಕಷ್ಟ ಎದುರಾಗಿರುವ ಇಂತಹ ಸಂದರ್ಭದಲ್ಲಿ 68 ಸಾವಿರ ಕೋಟಿ ಸಾಲ ಮನ್ನಾಮಾಡಿದ್ದೇಕೆ?ಎಂದು ಪ್ರಶ್ನಿಸಿದರು.
ಕೊರೊನಾ ಲಾಕ್ ಡೌನ್‌ನಿಂದ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಜನಸಾಮಾನ್ಯರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಆದರೆ ಉದ್ಯಮಿಗಳ ಪರವಾಗಿ ಸರ್ಕಾರ ವರ್ತಿಸುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಾ ತಾಳಿದ್ದೇಕೆ? ಎಂದು ದೇಶದ ಜನತೆಗೆ ಮೋದಿ ಸತ್ಯ ಹೇಳಬೇಕು. ದೇಶಕ್ಕೆ ದ್ರೋಹ ಬಗೆದಿರುವ ಮೋದಿ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.