ಗಡಿ ವಿವಾದ: ರಾಜ್ಯ ಸರಕಾರ ದೃಢವಾದ ಕ್ರಮಗಳನ್ನು ಕೈಗೊಳ್ಳಲಿ

Border dispute: Let the state government take firm steps

ಲೋಕದರ್ಶನ ವರದಿ 

ಗಡಿ ವಿವಾದ: ರಾಜ್ಯ ಸರಕಾರ ದೃಢವಾದ ಕ್ರಮಗಳನ್ನು ಕೈಗೊಳ್ಳಲಿ 

ಬೆಳಗಾವಿ 28:  : ಕರ್ನಾಟಕ ಮಹಾರಾಷ್ಟ್ರಗಳ ಗಡಿ ವಿವಾದದ ಸಂಬಂಧ ವಾಸ್ತವ ನೆಲೆಗಟ್ಟಿನ ಮೇಲೆ ರಾಜ್ಯ ಸರಕಾರ ದೃಡವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಕನ್ನಡ ಕ್ರಿಯಾ ಸಮಿತಿ ಸಿಎಂ ಸಿದ್ರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ಕರ್ನಾಟಕ ಸರಕಾರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಇ-ಮೇಲ್ ಮುಖಾಂತರ ಮನವಿಯನ್ನು ಸಲ್ಲಿಸಿದೆ. 

ಮನವಿಯಲ್ಲಿ ಇತ್ತೀಚಿಗೆ ಬೆಳಗಾವಿಯ ಬಸ್ ನಿರ್ವಾಹಕರೊಬ್ಬರ ಮೇಲೆ ನಡೆದ ಹಲ್ಲೆಯ ಹಿನ್ನೆಲೆಯೆಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಯಲ್ಲಿ ನಡೆದ ಕೆಲವು ಅಹಿತಕರ ಘಟನೆಗಳು ನಡೆದಿವೆ. ಗಡಿ ಭಾಗದಲ್ಲಿ ಮೇಲಿಂದ ಮೇಲೆ ಭಾಷೆ ಹಾಗೂ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಉಭಯ ರಾಜ್ಯಗಳ ನಡುವೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿ ಸಾಮಾನ್ಯ ಜನರು ತೀವ್ರ ತೊಂದರೆಗೆ ಒಳಗಾಗುತ್ತಾರೆ. ಇಂತಹ ಪರಿಸ್ಥಿತಿ ಉಂಟಾದಾಗ ಮಾತ್ರ ರಾಜ್ಯ ಸರಕಾರ ಎಚ್ಚರಗೊಳ್ಳುತ್ತದೆ. ಗಡಿ ಭಾಗದಲ್ಲಿಯ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗುತ್ತಾರೆ. ಕನ್ನಡಿಗರು ಹಾಗೂ ಕನ್ನಡ ಸಂಘಟನೆಗಳು ಅನಿವಾರ್ಯವಾಗಿ ಹೋರಾಟದ ಮಾರ್ಗವನ್ನು ಅನುಸರಿಸಬೇಕಾಗುತ್ತದೆ.  

ಗಡಿ ಭಾಗದ ಕನ್ನಡಿಗರಿಗೆ ಅನಾಥ ಪ್ರಜ್ಞೆ ಉಂಟಾದಾಗ ಅವರು ಯಾರ ಮೊರೆ ಹೊಗಬೇಕೆಂಬುದು ಈಗ ಯಕ್ಷ ಪ್ರಶ್ನೆಯಾಗಿದೆ. 2013 ರಲ್ಲಿ ತಮ್ಮ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಗಡಿ ಭಾಗದ ಕನ್ನಡಿಗರ ಒತ್ತಾಸೆಯ ಮೇರೆಗೆ 2015 ರಿಂದ 2018 ರ ವರೆಗೆ ಹಿರಿಯ ಸಚಿವ ಎಚ್‌.ಕೆ. ಪಾಟೀಲ ಅವರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಆ ನಂತರ ಅಧಿಕಾರಕ್ಕೆ ಬಂದ ಯಾವ ಸರಕಾರಗಳೂ ಗಡಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಿಲ್ಲ. ಅದೇ ಮಹಾರಾಷ್ಟ್ರದಲ್ಲಿ ಇಬ್ಬರು ಗಡಿ ಉಸ್ತುವಾರಿ ಸಚಿವರಿದ್ದಾರೆ. ಅಲ್ಲಿಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಗಡಿ ಉನ್ನತಾಧಿಕಾರ ಸಮಿತಿಯೂ ಇದೆ. 2022 ರ ಡಿಸೆಂಬರ್ 14 ರಂದು ಕೇಂದ್ರದ ಗೃಹ ಸಚಿವ ಅಮಿತ ಶಹಾ ಅವರು ಅಂದಿನ ಉಭಯ ರಾಜ್ಯಗಳ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಏಕನಾಥ ಶಿಂದೆ ಅವರ ಜೊತೆ ದಿಲ್ಲಿಯಲ್ಲಿ ಸಭೆ ನಡೆಸಿದರು ಉಭಯ ರಾಜ್ಯಗಳು ತಲಾ ಮೂವರು ಸಚಿವರನ್ನು ನೇಮಕ ಮಾಡಿ ಆರು ಸದಸ್ಯರ ಸಮನ್ವಯ ಸಮಿತಿ ರಚಿಸುವಂತೆ ಸೂಚಿಸಿದ್ದರು. ಆದರೆ ಈವರೆಗೂ ಈ ಸಮನ್ವಯ ಸಮಿತಿ ರಚನೆಯಾಗಿದ್ದಾಗಲಿ, ಸಭೆ ನಡೆಸಿದ್ದಾಗಲಿ ನಮಗೆ ಗೊತ್ತಾಗಿಲ್ಲ. ಇಂತಹ ಸಮಿತಿ ರಚನೆಯಾಗದೇ ಇದ್ದಕ್ಕಾಗಿ ಕೇಂದ್ರ ಗೃಹ ಸಚಿವಾಲಯವು ಉಭಯ ರಾಜ್ಯಗಳಿಗೆ ಎರಡು ಬಾರಿ ನೋಟಿಸು ನೀಡಿದೆ ಎಂದು ಗೊತ್ತಾಗಿದೆ.  

ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ “ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೋಡುವ” ಹೆಜ್ಜೆಯನ್ನು ಅನುಸರಿಸದೇ ವಾಸ್ತವಿಕ ನೆಲೆಗಟ್ಟಿನ ಮೇಲೆ ಗಡಿಗೆ ಸಂಬಂಧಿಸಿದಂತೆ ಕೆಲವು ಕ್ರಮಗಳನ್ನು ತುರ್ತಾಗಿ ಕೈಕೊಳ್ಳಬೇಕು. ಮಹಾರಾಷ್ಟ್ರ ಬೆಂಬಲಿತ ಕೆಲವು ಸಂಘಟನೆಗಳು ಗಡಿ ಭಾಗದಲ್ಲಿ ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸುತ್ತಿವೆ. “ಕ್ರಿಯೆಗೆ ಪ್ರತಿಕ್ರಿಯೆ” ಸಹಜವಾಗಿದ್ದು ಕನ್ನಡಿಗರು, ಕನ್ನಡ ಸಂಘಟನೆಗಳು ತಮ್ಮ ಪ್ರತಿಭಟನೆಗಳು ಹಾಗೂ ಹೋರಾಟಗಳನ್ನು ನಡೆಸಲೇಬೇಕಾಗುತ್ತದೆ. 

ಗಡಿಗೆ ಸಂಬಂಧಸಿದ ಗಡಿ ಸಂರಕ್ಷಣಾ ಆಯೋಗವನ್ನು ಕೂಡಲೇ ಪನರ‌್ರಚಿಸಿ ಅದರ ಒಂದು ಪ್ರಾದೇಶಿಕ ಕಚೇರಿಯನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿ ಸ್ಥಾಪಿಸಬೇಕು  ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿಯನ್ನು ಸುವರ್ಣ ಸೌಧದಲ್ಲಿ ಸ್ಥಾಪಿಸುವ ಬಗ್ಗೆ ಕಳೆದ ವರ್ಷ ಡಿಸೆಂಬರ್ 16 ರಂದು ಬೆಳಗಾವಿಯಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಚಿವ ಎಚ್‌.ಕೆ. ಪಾಟೀಲ ಅವರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡುವ ಮೂಲಕ ಗಡಿ ಭಾಗದ ಕನ್ನಡಿಗರಿಗೆ ಶಕ್ತಿ ತುಂಬವ ಕ್ರಮವಾಗಬೇಕು ಎಂದು ಆಗ್ರಹಿಸಿದ್ದಾರೆ. 

ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸದಸ್ಯ ಅಶೋಕ ಚಂದರಗಿ, ಕಾರ್ಯಾಧ್ಯಕ್ಷ ಶಿವಪ್ಪ ಶಮರಂತ, ಉಪಾಧ್ಯಕ್ಷ ಎಂ.ಜಿ. ಮಕಾನದಾರ, ರಮೇಶ ಸೊಂಟಕ್ಕಿ ಶಂಕರ ಬಾಗೇವಾಡಿ, ಮಲ್ಲಪ್ಪ ಅಕ್ಷರದ ಸಲೀಮ ಖತೀಬ, ಕಾರ್ಯದರ್ಶಿಗಳಾದ  ಸಾಗರ ಬೋರಗಲ್ಲ, ರಾಜು ಕುಸೊಜಿ, ಸುಮಾ ಪಾಟೀಲ, ಜಿನೇಶ ಅಪ್ಪನ್ನವರ ರಜತ ಅಂಕಲೆ ಮೊದಲಾದವರು ಆಗ್ರಹಿಸಿದ್ದಾರೆ.