ಬಳ್ಳಾರಿ; ಪುರಂದರದಾಸರ ಆರಾಧನ ಉತ್ಸವ

ಲೋಕದರ್ಶನ ವರದಿ

ಬಳ್ಳಾರಿ 25: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ಹಂಪಿಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಶ್ರೀ ಪುರಂದರದಾಸರ ಆರಾಧನಾ ಉತ್ಸವವನ್ನು ಶುಕ್ರವಾರ ಆಚರಿಸಲಾಯಿತು.

ಶುಕ್ರವಾರ ಬೆಳಗ್ಗೆ ಹಂಪಿ ಬಳಿಯ ನದಿತೀರದ ಪುರಂದರ ಮಂಟಪದಲ್ಲಿ ವ್ಯಾಸರಾಜಮಠ(ಸೋಸಲೆ) ಉತ್ತರಾಧಿಕಾರಿ ವಿದ್ಯಾವಿಜಯತೀರ್ಥ ಶ್ರೀಪಾದಂಗಳವರು ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗುರು ಪುಟ್ಟರಾಜ ಸಂಗೀತ ಪಾಠಶಾಲೆಯ ಮಕ್ಕಳು ದಾಸಕೀರ್ತನೆಗಳು ಪ್ರಸ್ತುತಪಡಿಸಿದರು.

ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಸಂಜೆ ನಡೆದ ಆರಾಧನೋತ್ಸವಕ್ಕೆ ಶ್ರೀಪುರಂದರದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ವಿದ್ಯಾವಿಜಯತೀರ್ಥ ಶ್ರೀಪಾದಂಗಳವವರು ಚಾಲನೆ ನೀಡಿದರು.

ನಂತರ ಆಶೀರ್ವಚನ ನೀಡಿದ ಸೋಸಲೆ ಮಠದ ಉತ್ತರಾಧಿಕಾರಿಗಳಾದ ವಿದ್ಯಾವಿಜಯ ತೀರ್ಥರು,ವೇದವ್ಯಾಸರು ಈ ಕ್ಷೇತ್ರಕ್ಕೆ ಭೇಟಿ ನೀಡಿದಾಗ  ಪಾಪಗಳೆಲ್ಲ ನಾಶಗೊಳಿಸುವ ಕ್ಷೇತ್ರವೇ ಪಂಪಾಕ್ಷೇತ್ರ ಎಂದಿದ್ದರು. ಈ ಕ್ಷೇತ್ರವನ್ನು ಅಂದಿಗೂ ಸಂಶೋಧನೆ ನಡೆಸಿದ್ದರು. ಇಂದಿಗೂ ಕೂಡ ಅಸಂಖ್ಯಾತ ಜನರು ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಇಡೀ ದೇಶದ ಸಂಸ್ಕೃತಿ ಬಿಂಬಿಸುವ ನಾಡು ಕನ್ನಡನಾಡು ಅದಕ್ಕೆ ಸಾಕ್ಷಿ ಪುರಂದರ ದಾಸರು. ಯಾವ ರಾಗವನ್ನೂ, ಯಾವ ವಿಷಯವನ್ನೂ ದಾಸರು ಬಿಟ್ಟಿಲ್ಲ ಎಲ್ಲವನ್ನೂ ತಮ್ಮ ಕೀರ್ತನೆಗಳಲ್ಲಿ ಪ್ರಸ್ತುತ ಪಡಿಸಿದ್ದಾರೆ. ಸರ್ವಸಂಗ ಪರಿತ್ಯಾಗ ಮಾಡಿ ಜಗತ್ತಿನ ತಾತ್ವಿಕತೆಯನ್ನು ವಿಮರ್ಶಿಸಿ ಪರಿಚಯಿಸಿದವರು ಪುರಂದರ ಮತ್ತು ಕನಕದಾಸರಿಬ್ಬರೇ, ಪ್ರತಿಯೊಬ್ಬರ ಒಳಗಿನ ಪ್ರತಿಭಾಶಕ್ತಿಗೆ ಯಾವುದೇ ಜಾತಿಯಿಲ್ಲ ಎಂದು ಆಶೀರ್ವಚನ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಕೆ.ರಾಮೇಶ್ವರಪ್ಪ, ಹೊಸಪೇಟೆ ತಹಸೀಲ್ದಾರ್  ವಿಶ್ವನಾಥ್, ತಾಲೂಕು ಪಂಚಾಯಿತಿ ಸದಸ್ಯರಾದ ಪಾಲಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷೆ ಭೀಮವ್ವ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಷಿ, ವಾರ್ತಾ  ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಸೇರಿದಂತೆ ಅಸಂಖ್ಯಾತ ಕಲಾಸಕ್ತರು ಹಾಗೂ ಕಲಾವಿದರೂ ಪಾಲ್ಗೊಂಡಿದ್ದರು.

ಸಂಜೆ ಬಳ್ಳಾರಿ ಜಿಲ್ಲೆಯ ಸ್ಥಳೀಯ ಕಲಾವಿದರಾದ ವೀರೇಶ ದಳವಾಯಿ,ಎಚ್.ಎಂ.ಮಹಾದೇವಯ್ಯ, ಅಮಾತಿ ಬಸವರಾಜ, ಜೆ.ಅಶ್ವೀನಿ, ಅಂಗಡಿ ವಾಮದೇವ, ಮಾರುತಿರಾವ್, ಪಾರ್ವತಮ್ಮ, ಜಯಮ್ಮ ದಾನಮ್ಮನವರ್, ಅನುರಾಧ, ಶ್ಯಾವಳಿಗೆಪ್ಪ,ಸೃಷ್ಠಿ,ಪಾಂಡುನಾಯ್ಕ ತಾಳೆ ಅವರು ಪುರಂದರದಾಸರ ವಿವಿಧ ಕೀರ್ತನೆಗಳನ್ನು ಗಾಯನದ ಮೂಲಕ ಪ್ರಸ್ತುತಪಡಿಸಿದರು. ಮೋಹನ್ ಕಲ್ಬುರ್ಗಿ, ಸುಧಾಕರ್, ಎಂ.ಅಹಿರಾಜ್, ಕರುಣಾನಿಧಿ, ಶ್ರೀಧರ್ ಮುರೋಳ್, ಶಿವಪ್ರಕಾಶ್ ವಸ್ತ್ರದ, ಎಚ್.ಎಂ.ಹನುಮಂತಪ್ಪ, ಎಚ್.ಬಸವರಾಜ, ಕೆ.ಮೂತರ್ಿ, ರವಿಕುಮಾರ್ ಹಾಗೂ ತಂಡದವರು ಪಕ್ಕವಾದ್ಯ ಕಲಾವಿದರಾಗಿ ಗಾಯನ ಪ್ರಸ್ತುತಿಗೆ ಸಾಥ್ ನೀಡಿದರು.

ಪುರಂದರದಾಸರ ಕೀರ್ತನೆಗಳ ಗಾಯನ ಹಾಗೂ ನೃತ್ಯ ಕಾರ್ಯಕ್ರಮಗಳು ಜರುಗಿದವು. ಪಂಡಿತ ಕುಮಾರದಾಸ ಅವರಿಂದ ಕರ್ನಾಟಕ ಸಂಗೀತ,ಅನುಷಾ ಸುರೇಶ್ ಅವರಿಂದ ನೃತ್ಯರೂಪಕ, ಗಾನಶ್ರೀ ಶ್ರೀನಿವಾಸಲು ಅವರಿಂದ ದಾಸರಪದಗಳು, ಮನೋಜ್ಞ ನೃತ್ಯಕಲಾ ಅಕಾಡೆಮಿಯಿಂದ ಭರತನಾಟ್ಯ,ಕೆ.ಸುನೀತಾ ಅವರಿಂದ ವೀಣಾವಾದನ, ಕಲಾಸಂಪದ ನಾಟ್ಯಶಾಲೆಯಿಂದ ಭರತನಾಟ್ಯ, ಯಶೋಧ ಮತ್ತು ತಂಡದಿಂದ ಕೋಲಾಟ, ಸೂರ್ಯ ಕಲಾಟ್ರಸ್ಟ್ ವತಿಯಿಂದ ಸಮೂಹ ನೃತ್ಯ, ನಾಟ್ಯನಾದ ಕಲಾಸಂಘದಿಂದ ಶಾಸ್ತ್ರೀಯ ಸಮೂಹ ನೃತ್ಯ, ಬೆಂಗಳೂರಿನಲ್ಲಿ ರಂಗಪುತ್ಥಳಿ ಅವರಿಂದ ತೊಗಲುಗೊಂಬೆ ಪ್ರದರ್ಶನ ಗಮನಸೆಳೆಯಿತು.