ಬಳ್ಳಾರಿ 21: ಮಾನ್ಯ ಉಪ ಮುಖ್ಯಮಂತ್ರಿಗಳು, ಸಾರಿಗೆ ಮತ್ತು ಕೃಷಿ ಇಲಾಖೆ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರು ಅ.21ರಂದು ಕೊಪ್ಪಳ ಜಿಲ್ಲೆಯಿಂದ ರಸ್ತೆಯ ಮೂಲಕ ಬಳ್ಳಾರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಎಸ್.ಎಸ್.ಬಿರಾದಾರ್ ತಿಳಿಸಿದ್ದಾರೆ.
ಸಚಿವರು ಅ.22 ರಂದು ಬೆಳಗ್ಗೆ 9ಕ್ಕೆ ಅಲ್ಲೀಪುರ ಹತ್ತಿರವಿರುವ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಲಾಗಿರುವ ಬಾಲಕ/ಬಾಲಕಿಯರ ಸ್ನಾತಕೋತ್ತರ ವಿದ್ಯಾರ್ಥಿ ನಿಲಯಗಳನ್ನು ಉದ್ಘಾಟಿಸಲಿದ್ದಾರೆ. ನಂತರ ಬೆಳಗ್ಗೆ 10ಕ್ಕೆ ಸಚಿವ ಸವದಿ ಅವರು ಬಳ್ಳಾರಿ ತಾಲೂಕಿನ ರೂಪನಗುಡಿ ಹೋಬಳಿಯ ಅಸುಂಡಿ ಗ್ರಾಮದ ಬಿ.ಕೆ.ಶೇಖರ್ ಇವರ ಜಮೀನುನಲ್ಲಿ ರೈತ ಸಿರಿ ಯೋಜನೆ ಅಡಿಯಲ್ಲಿ ಅರ್ಕ ಬೆಳೆಯ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ನಜೀರ್ ಸಭಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಪಂಚಾಯತ್ ಎರಡನೇ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
ನಂತರ ಮಧ್ಯಾಹ್ನ 3ಕ್ಕೆ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ನಗರೋತ್ಥಾನ ಸಮಿತಿ ಸಭೆ ಹಾಗೂ ಮಧ್ಯಾಹ್ನ 4ಕ್ಕೆ ಜಿಲ್ಲಾ ಖನಿಜ ಪ್ರತಿಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಸಂಜೆ 5 ಕ್ಕೆ ಬೆಳಗಾವಿ ಜಿಲ್ಲೆಗೆ ತೆರಳಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.