ಬಳ್ಳಾರಿ: ಆಟೋ ಪ್ರಚಾರ ರಥಕ್ಕೆ ಚಾಲನೆ

ಲೋಕದರ್ಶನ ವರದಿ

ಬಳ್ಳಾರಿ 25: ಮಕ್ಕಳ ಬಾಲ್ಯವನ್ನು ಉಳಿಸೋಣ, ಅವರ ದುಡಿತ ತಪ್ಪಿಸಿ, ಅವರಿಗೆ ಸಮರ್ಪಕ ಶಿಕ್ಷಣದ ಸೌಲಭ್ಯ ಹಾಗೂ ಆರೋಗ್ಯ ಸೇವೆಯನ್ನು ಒದಗಿಸುವುದರ ಮೂಲಕ ದೇಶದ ಉನ್ನತಿಗೆ ಶ್ರಮಿಸೋಣ ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ ಹೇಳಿದರು. 

ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸಲು ಆಟೋ ಪ್ರಚಾರದ ರಥಕ್ಕೆ  ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶುಕ್ರವಾರ ಸಂಜೆ ಚಾಲನೆ ನೀಡಿ ಮಾತನಾಡಿದರು. ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ  (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಅನ್ವಯ ಎಲ್ಲಾ  ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ನಿಯೋಜಿಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು. 

ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಎ.ಮೌನೇಶ್ ಮಾತನಾಡಿ, ಜ.24 ರಿಂದ ಫೆ.6ರವರೆಗೆ ಜಿಲ್ಲೆಯಲ್ಲಿರುವ ಬಾಲಕಾರ್ಮಿಕರನ್ನು ಮರಳಿ ಶಾಲೆಗೆ ಸೇರಿಸಲು ಪೋಷಕರು ಮತ್ತು ಸಾರ್ವಜನಿಕರೆಲ್ಲರು ಕೈಜೋಡಿಸಬೇಕು ಮತ್ತು ದುಡಿಯುವ ಮಕ್ಕಳು ಕಂಡು ಬಂದರೆ ತಕ್ಷಣವೇ ಪೆನ್ಸಿಲ್ ಪೋರ್ಟಲ್ನ ನಲ್ಲಿ ದೂರು ಸಲ್ಲಿಸಬಹುದು ಹಾಗೂ ಚೈಲ್ಡ್ ಲೈನ್ 1098 ಗೆ ಕರೆ ಮಾಡಿ ತಿಳಿಸಬಹುದು ಎಂದರು. 

ಈ ಸಂಧರ್ಭದಲ್ಲಿ ತಹಶೀಲ್ದಾರ ವಿಶ್ವಜಿತ್ ಮೇಹತಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಾಂದ್ ಪಾಷಾ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಕ್ಷೇತ್ರಾಧಿಕಾರಿ ಪಿ.ಎಂ ಈಶ್ವರಯ್ಯ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚೆನ್ನಬಸಪ್ಪ ಪಟೇಲ್, ಶ್ರೀನಿವಾಸಲು, ಈರಣ್ಣ  ಉಪಸ್ಥಿತರಿದ್ದರು. ಜಿಲ್ಲಾಡಳಿತ, ಜಿಪಂ, ಕಾರ್ಮಿಕ ಇಲಾಖೆ ಮತ್ತು ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಈ ಜಾಗೃತಿ ಜಾಥಾ ಸಂಘಟಿಸಲಾಗಿದೆ.