ಹಾರೂಗೇರಿ,22: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ತೋಟದಲ್ಲಿ ವಿವಿಧ ಸಂಭ್ರಮಕ್ಕೆಂದು ಬೆಳೆದ ಚಂಡು ಹೂವಿನ ದರ ದಿಢೀರ ಕುಸಿತದಿಂದ ರೈತನಿಂದ ಮೂರು ಎಕರೆ ಪ್ರದೇಶದಲ್ಲಿ ಬೆಳೆದ ಚೆಂಡು ಹೂವು ಬೆಳೆ ಸಂಪೂರ್ಣ ನೆಲೆ ಸಮ ಮಾಡಿ ನಾಶ ಮಾಡಿದ ಘಟನೆಯು ನಡೆದಿದೆ.
ಹೌದು ಉತ್ತಮವಾದ ಫಸಲು ಬಂದ ಚೆಂಡು ಹೂವಿನ ಬೆಳೆ ಕೈಗೆ ಬಂದ ತುತ್ತು ರೈತನ ಬಾಯಿಗೆ ಬಾರದಂತಾಗಿದೆ. ಮಳೆ ಕೈಕೊಟ್ಟು, ಇಲ್ಲಾ ಅತೀವೃಷ್ಟಿಯಿಂದ ಬೆಳೆ ಬರುವುದಿಲ್ಲ. ದೇವರ ಕೃಪೆಯಿಂದ ಬೆಳೆ ಚೆನ್ನಾಗಿ ಬಂದು ಇನ್ನೇನು ರೈತ ಮಾರುಕಟ್ಟೆಗೆ ಸಾಗಿಸಬೇಕೆನ್ನುವ ಖುಷಿಯಲ್ಲಿರುವಾಗ ದಿಢೀರ ಬೆಲೆ ಕುಸಿತ. ಒಟ್ಟಿನಲ್ಲಿ ರೈತನ ಪಾಲಿಗೆ ಆದಾಯ ಮರೀಚಿಕೆಯನ್ನುವಂತಾಗಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಹೊರ ವಲಯದಲ್ಲಿರುವ ರೈತ ಹಣಮಂತ ಬನಾಜ ತಮ್ಮ ತೋಟದಲ್ಲಿ 3 ಎಕರೆಯಲ್ಲಿ ಚಂಡು ಹೂಗಳನ್ನು ಅಕ್ಕರೆಯಿಂದ ಬೆಳೆಸಿದ್ದರು. ಕಳೆದ ಹಲವು ವರ್ಷಗಳಿಂದ ಚೆಂಡು ಹೂವಿನ ಕೃಷಿಯನ್ನು ಮಾಡುತ್ತಿದ್ದರೂ. ಇದೀಗ ಚೆಂಡು ಹೂವಿನ ದರ ದಿಢೀರ ಕುಸಿತಗೊಂಡಿರೋದ್ರಿಂದ ತಮ್ಮ 3 ಎಕರೆ ಜನೀನಿನಲ್ಲಿ ಬೆಳೆದ ಚೆಂಡು ಹೂವನ್ನು ರೊಟರ್ ಬಳಸಿ ನಾಶಗೊಳಿಸಲು ಮುಂದಾಗಿದ್ದಾರೆ.
ಚೆಂಡು ಹೂವಿನ ಬೆಳೆ ಹಾಕುವಾಗ ಪ್ರತಿ ಕೆ.ಜಿ. ಹೂವಿಗೆ ಸುಮಾರು 70-80 ರೂ ಇದ್ದ ದರ ಇದೀಗ ಪ್ರತಿ ಕೆಜಿಗೆ 5-10 ರೂ. ಇರೋ ಕಾರಣದಿಂದ ಹಾಕಿರೋ ಬಂಡವಾಳ ಕೂಡ ಬರುತ್ತಿಲ್ಲ. ಹಾಗಾಗಿ ತಮ್ಮ ಜಮೀನಿನಲ್ಲಿ ಬೆಳೆದ ಸೊಗಸಾಗಿರೋ ಚೆಂಡು ಹೂವನ್ನು ನಾಶ ಮಾಡೋ ಮೂಲಕ ಕೇಂದ್ರ ಹಾಗೂ ರಾಜ್ಯ ಸಕರ್ಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಚೆಂಡು ಹೂವಿನ ಕೃಷಿಯನ್ನು ಸುಮಾರು ವರ್ಷಗಳಿಂದ ಮಾಡುತ್ತಿದ್ದೆ. ಆದರೆ ಈಗ ಹೂವಿನ ದರ ಭಾರಿ ಕುಸಿತದಿಂದ ನಾವು ಹಾಕಿದ ವೆಚ್ಚ ಕೂಡ ಬರುತ್ತಿಲ್ಲ. ಕಳೆದ ವಾರ ವಾಹನ ಮಾಡಿಕೊಂಡು ಮಹಾರಾಷ್ಟ್ರದ ಮುಂಬೈಯ, ಪುಣೆ. ಸಾಂಗಲಿ, ಜಮಖಂಡಿ ನಗರಗಳಿಗೆ ಹೋದರೂ ನಮ್ಮ ಚೆಂಡು ಹೂವು ಯಾರು ಕೇಳುತ್ತಿಲ್ಲ. ಕೇಳಿದರೂ ಕೂಡ ಕೇವಲ 5 ರಿಂದ 10 ರೂಪಾಯಿಗಳವರೆಗೆ ಮಾತ್ರ. ಹೀಗಾಗಿ ನಾವು ವಾಹನ ಮಾಡಿಕೊಂಡು ಹೋದ ವೆಚ್ಚವು ಬರುತ್ತಿಲ್ಲ. ಅದಕ್ಕಾಗಿ ಯಾವುದೇ ಮುಂದಿನ ಯೋಚನೆ ಮಾಡದೇ ರೊಟರ್ದಿಂದ ಜಮೀನಿನಲ್ಲಿ ಬೆಳೆದ ಚೆಂಡುಹೂವುಗಳನ್ನು ನಾಶ ಮಾಡುವುದು ಅನಿವಾರ್ಯವಾಗಿದೆ. ನಮಗೆ ಸರಕಾರದಿಂದ ಯಾವುದೇ ಪರಿಹಾರ ಬೇಡ. ಆದರೆ ಈ ಚೆಂಡು ಹೂವಿಗೆ ಸೂಕ್ತವಾದ ಬೆಂಬಲ ಬೆಲೆ ನೀಡಿದರೆ ನಾವುಗಳು ಬದುಕಲು ಸಾಧ್ಯವಾಗುತ್ತದೆ ಎಂದು ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯ ಮಂತ್ರ ಎಚ್.ಡಿ. ಕುಮಾರಸ್ವಾಮಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ರೈತ ಹಣಮಂತ ಬನಾಜ ಜಮೀನಿನಲ್ಲಿ ಕಣ್ಣಿರು ಹಾಕುತ್ತ ನುಡಿದರು.
ಸಮಾಜ ಹೋರಾಟಗಾರ: ಕಳೆದ ಹಲವು ವರ್ಷಗಳಿಂದಲೂ ಕೂಡ ದೇಶದ ಪ್ರಧಾನಿ ಮಂತ್ರಿ ನರೇಂದ್ರ ಮೋದಿ, ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೃಷಿಯ ಕುರಿತು ನಿರ್ಲಕ್ಷ್ಯ ವಹಿಸಿರೋದೇ ತಮ್ಮ ಬೆಳೆಗೆ ಸೂಕ್ತವಾದ ಬೆಲೆ ಇಲ್ಲದಿರೋದಕ್ಕೆ ಕಾರಣ ಎಂಬುವುದು ರೈತನ ಆರೋಪವಾಗಿದೆ. ಹೀಗಾಗಿ ತಮ್ಮ ಚೆಂಡು ಹೂವಿನ ಬೆಳೆಗೆ ಬೆಂಬಲ ಬೆಲೆ ಕೊಡಬೇಕು. ಅಷ್ಟಕ್ಕೂ ರೈತ ಬೆಳೆದ ಉತ್ತಮ ಬೆಲೆ ಕೊಟ್ಟರೆ ಸಾಕು. ಈ ಚೆಂಡು ಹೂವಿನ ಜಮೀನಿನಲ್ಲಿ ಕೂಲಿಯಾಳುಗಳನ್ನು ಕೂಡ ಹಚ್ಚಿ ಕೆಲಸ ಮಾಡೋದಕ್ಕಾಗದೇ ತಮ್ಮ ಮಕ್ಕಳು, ಪತ್ನಿ, ಸಮೇತವಾಗಿ ಹೊಲದಲ್ಲಿ ಕೆಲಸ ಮಾಡಿ ಚೆಂಡು ಹೂ ಬೆಳೆದಿದ್ದರೂ ಕೂಡ ತಮ್ಮ ಶ್ರಮಕ್ಕೆ ಬೆಲೆಯೇ ಇಲ್ಲ ಎಂಬ ನೋವಿನಿಂದಲೇ ಚೆಂಡು ಹೂವಿನ ಬೆಳೆಯನ್ನು ರೂಟರ್ ಯಂತ್ರದಿಂದ ಹಾಗೂ ಕೈಯಿಂದಲೂ ಕಿತ್ತು ಹಾಕಿ ನಾಶ ಮಾಡುತ್ತಿದ್ದಾರೆಂದು ಸಮಾಜ ಹೋರಾಟಗಾರ ರವೀಂದ್ರ ಹೊಳಕರ ಹೇಳಿದರು.
ಇದು ಕೇವಲ ಹಣಮಂತ ಬನಾಜರೊಬ್ಬರ ಮಾತಲ್ಲಾ ಚೆಂಡು ಹೂವು ಬೆಳೆದ ಎಲ್ಲ ರೈತರ ಅಭಿಮತವಾಗಿದೆ. ಚೆಂಡು ಹೂವಿನ ದರ ದಿಢೀರ ಕುಸಿತದಿಂದ ಆತಂಕ ರೈತರಲ್ಲಿ ಮನೆ ಮಾಡಿದೆ. ಹೂವಿನ ಬೆಳೆ ದರ ದಿಢೀರ ಕುಸಿತದಿಂದ ಆತಂಕಕ್ಕೊಳಗಾದ ರೈತರು ಪರದಾಡುವಂತಾಗಿದೆ.